ನಾಪೋಕ್ಲು, ಏ. ೨೨: ಸಮೀಪದ ಪಾಲೂರು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ತಾ. ೧೩ ರಂದು ಮಹಾಲಿಂಗೇಶ್ವರ ದೇವರ ಮೂಲ ಸ್ಥಾನದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ವಾರ್ಷಿಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ತಾ. ೧೪ ರಂದು ಗಣ ಹೋಮ ಮತ್ತು ಕೊಡಿಮರ ಏರಿಸುವುದು, ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಉತ್ಸವ ಬಲಿ ನೆರವೇರಿ ತಾ. ೧೬ ರಂದು ಉತ್ಸವ ಬಲಿ ಮತ್ತು ರಾತ್ರಿ ದೀಪಾರಾಧನೆ, ತಾ. ೧೭ ರಂದು ಹಗಲು ಉತ್ಸವ ಬಲಿ ನಡೆದು ಸಂಜೆ ದೀಪಾರಾಧನೆ ನಡೆಯಿತು.
ತಾ. ೧೮ ರಂದು ಪಟ್ಟಣಿ ಹಬ್ಬದ ಅಂಗವಾಗಿ ಬೆಳಿಗ್ಗೆ ತುಲಾಭಾರ ಸೇವೆ ಸೇರಿದಂತೆ ವಿವಿಧ ಹರಕೆ ಸೇವೆ ಕಾಣಿಕೆಗಳನ್ನು ಒಪ್ಪಿಸಿ ಮಧ್ಯಾಹ್ನ ಎತ್ತು ಪೋರಾಟ, ಮಹಾಪೂಜೆ, ವಿಶೇಷ ಸೇವೆಗಳು ಜರುಗಿ ಮಹಾ ಮಂಗಳಾರತಿ, ತೀರ್ಥ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಿತು. ನಂತರ ಜೋಡಿ ದೇವರ ನೃತ್ಯೋತ್ಸವ ನಡೆಯಿತು.
ದೇವಾಲಯದ ಮುಖ್ಯ ಅರ್ಚಕ ದೇವಿಪ್ರಸಾದ್, ತಂತ್ರಿಗಳಾಗಿ ಕೃಷ್ಣ ಮತ್ತು ಸತ್ಯಮೂರ್ತಿ ಸರಳಾಯ, ಕೃಷ್ಣಮೂರ್ತಿ ಇನ್ನಿತರರು ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಜಾತ್ರಾ ಮಹೋತ್ಸವದಲ್ಲಿ ದೇವಾಲಯದ ತಕ್ಕಮುಖ್ಯಸ್ಥರು. ಉತ್ಸವ ಸಮಿತಿ ಅಧ್ಯಕ್ಷರು, ಪೊದುವಾಡ ಸುಜೈ, ಕಾರ್ಯದರ್ಶಿ ಸೂದನ ಮದನ್ ಹಾಗೂ ಸದಸ್ಯರು, ಪಾರುಪತ್ತೆಗಾರ ಟಿ.ಕೆ. ಮನು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿ ಸದಸ್ಯರು, ಚುನಾಯಿತ ಪ್ರತಿನಿಧಿಗಳು, ಭಕ್ತರು ಪಾಲ್ಗೊಂಡಿದ್ದರು.