ಮಡಿಕೇರಿ, ಏ. ೨೨: ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸರಬರಾಜಾದ ಐಪಿಎಲ್ (ಇಂಡಿಯನ್ ಪೊಟಾಶ್ ಲಿಮಿಟೆಡ್) ಸಂಸ್ಥೆಯ ಗೊಬ್ಬರದ ತೂಕದಲ್ಲಿ ವ್ಯತ್ಯಾಸವಿರುವ ಬಗ್ಗೆ ಸಂಘದ ಆಡಳಿತ ಮಂಡಳಿಯವರು ಬೆಳಕಿಗೆ ತಂದಿದ್ದು, ಸೂಕ್ತ ಕ್ರಮಕ್ಕೆ ಕೃಷಿ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ನೇತೃತ್ವದಲ್ಲಿ ಮಡಿಕೇರಿಯ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ತೂಕ ವ್ಯತ್ಯಾಸವಿರುವ ಗೊಬ್ಬರದ ಚೀಲಗಳ ಲೋಡ್ ಸಹಿತ ಆಗಮಿಸಿದ ಸಂಘದ ಆಡಳಿತ ಮಂಡಳಿಯವರು ಈ ಕುರಿತು ಅಧಿಕಾರಿಗಳ ಗಮನ ಸೆಳೆದರು. ಜಿಲ್ಲೆಯಲ್ಲದೇ ದೇಶವ್ಯಾಪಿ ಈ ರೀತಿ ತೂಕದಲ್ಲಿ ಮೋಸವಾಗಿರುವ ಅನುಮಾನವಿದ್ದು, ಸೂಕ್ತ ತನಿಖೆ ನಡೆಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.

೩-೪ ಕೆಜಿ ವ್ಯತ್ಯಾಸ

ಜಂಟಿ ಕೃಷಿ ನಿರ್ದೇಶಕರ ಕಚೇರಿ ಎದುರು ಗೊಬ್ಬರದ ಲೋಡ್ ತಂದು ಅಧಿಕಾರಿಗಳ ಸಮಕ್ಷಮದಲ್ಲಿ ತೂಕ ಮಾಡಿದ ಸಂದರ್ಭ ೫೦ ಕೆಜಿಯ ಮೂಟೆಗಳಲ್ಲಿ ೩-೪ ಕೆಜಿ ತೂಕ ಕಡಿಮೆ ಇರುವುದು ಗಮನಕ್ಕೆ ಬಂದಿದೆ.

ಒಂದೊAದು ಮೂಟೆಯಲ್ಲಿ ಒಂದೊAದು ರೀತಿಯ ತೂಕವಿದ್ದು, ನಮೂದಾಗಿರುವ ತೂಕವಿಲ್ಲದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನು ಪರಿಶೀಲಿಸಿದ ಕೃಷಿ ಉಪನಿರ್ದೇಶಕ ಸೋಮಶೇಖರ್ ಅವರು, ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಸರಬರಾಜು ಮಾಡಿದ ಸಂಸ್ಥೆಯ ಪ್ರತಿಕ್ರಿಯೆ ಪಡೆಯಲಾಗುವುದು. ಈ ವಿಷಯದಲ್ಲಿ ರೈತಪರವಾಗಿ ಸ್ಪಂದಿಸಲಾಗುವುದು. ಗೊಬ್ಬರ ಮೂಟೆಯ ಬ್ಯಾಚ್ ಅನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ರೈತರಿಗೆ ಅನ್ಯಾಯ : ಬಾಂಡ್ ಗಣಪತಿ

ಸಂಘಕ್ಕೆ ತಾ. ೧೮.೨.೨೦೨೬ ಮತ್ತು ೫.೩.೨೦೨೬ ರಂದು ಸರಬರಾಜಾದ ೫೧ ಟನ್ ಗೊಬ್ಬರ ತೂಕದಲ್ಲಿ ವ್ಯತ್ಯಾಸವಾಗಿದ್ದು, ಇದರಿಂದ ರೈತರಿಗೆ ಅನ್ಯಾಯವಾಗಿದೆ ಎಂದು ಅಧ್ಯಕ್ಷ ಬಾಂಡ್ ಗಣಪತಿ ಆಕ್ರೋಶ ವ್ಯಕ್ತಪಡಿಸಿದರು. ಕುಂದ ಗ್ರಾಮದ ಕೆ.ಕೆ. ಮಾಚಯ್ಯ ಅವರು ೫೫ ಚೀಲ ಗೊಬ್ಬರ ಖರೀದಿಸಿದ ಸಂದರ್ಭ ೫೨ ಚೀಲಗಳಲ್ಲಿ ತೂಕ ವ್ಯತ್ಯಾಸವಿರುವುದು ಗಮನಕ್ಕೆ ಬಂದಿದೆ. ತಕ್ಷಣ ಈ ವಿಷಯ ಸಂಘಕ್ಕೆ ತಿಳಿದು ಬಂದಿದ್ದು, ಉಳಿದ ಚೀಲಗಳ ತೂಕ ಖಚಿತಪಡಿಸಿಕೊಳ್ಳುವ ಸಂದರ್ಭ ತೂಕ ವ್ಯತ್ಯಾಸವಿರುವುದು ದೃಢಪಟ್ಟಿದೆ. ಉತ್ಪಾದಕ ಸಂಸ್ಥೆಯ ಗಮನಕ್ಕೂ ತರಲಾಗಿದೆ. ಈ ಗೊಬ್ಬರ ದೇಶದ ಎಲ್ಲೆಡೆ ಪೂರೈಕೆ ಆಗುವುದರಿಂದ ರೈತರಿಗೆ ಮೋಸವಾದಂತಾಗಿದೆ. ರೈತರಿಗೆ ಸೂಕ್ತ ಗೊಬ್ಬರವೂ ಇಲ್ಲ, ಹಣವೂ ಇಲ್ಲದ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ಕೃಷಿ ಅಧಿಕಾರಿಗಳು ಸೇರಿದಂತೆ ಶಾಸಕರಿಗೆ ಲಿಖಿತ ಮನವಿ ಸಲ್ಲಿಸಲಾಗುವುದು. ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ಕಾನೂನಾತ್ಮಕವಾಗಿ ಹೋರಾಡಲಾಗುವುದು ಎಂದು ಬಾಂಡ್ ಎಚ್ಚರಿಸಿದರು.

ಬೀಗ ಜಡಿಯುವ ಎಚ್ಚರಿಕೆ

ಈ ಪ್ರಕರಣದಿಂದ ರೈತರಿಗೆ ದೋಖವಾಗಿದ್ದು, ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ಕೃಷಿ ಇಲಾಖೆ ಕಚೇರಿಗೆ ಬೀಗ ಜಡಿಯಲಾಗುವುದು ಎಂದು ಬಾಂಡ್ ಗಣಪತಿ ಎಚ್ಚರಿಕೆ ನೀಡಿದರು.

ರೈತರಿಗೆ ಇದರಿಂದ ಆರ್ಥಿಕ ನಷ್ಟವಾಗಿದ್ದು, ಅದನ್ನು ಭರಿಸಬೇಕು. ಲೋಡಿಂಗ್ ವೆಚ್ಚವನ್ನೂ ನೀಡಬೇಕು ಎಂದು ಆಗ್ರಹಿಸಿದ ಅವರು, ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳಲ್ಲಿಯೂ ಗೊಬ್ಬರದ ಪರಿಶೀಲನೆ ಮಾಡಬೇಕು. ಎಲ್ಲೆಡೆ ತೂಕದಲ್ಲಿ ವ್ಯತ್ಯಾಸವಾಗಿರುವ ಸಾಧ್ಯತೆ ಇದ್ದು, ರೈತರಿಗೆ ಆಗುತ್ತಿರುವ ಮೋಸ ತಪ್ಪಿಸಬೇಕೆಂದು ಮನವಿ ಮಾಡಿದರು.

ಹಾತೂರು ಸಂಘದ ನಿರ್ದೇಶಕ ಕೊಲ್ಲೀರ ಗೋಪಿ ಚಿಣ್ಣಪ್ಪ ಮಾತನಾಡಿ, ತೂಕದಲ್ಲಿ ಮೋಸವಾಗಿರುವುದರಿಂದ ರೈತರಿಗೆ ಅನ್ಯಾಯವಾಗಿದೆ. ಪ್ರಮಾದಕ್ಕೆ ಕಾರಣ ನೀಡಬೇಕು. ರೈತರಿಗೆ ಆದ ನಷ್ಟವನ್ನು ತುಂಬಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ಕಾವೇರಿ ಮಂದಣ್ಣ, ನಿರ್ದೇಶಕರುಗಳಾದ ಪುಲಿಯಂಡ ದಿನೇಶ್, ತೀತಮಾಡ ಗಣಪತಿ, ಪಟ್ರಂಗಡ ಗಂಗಮ್ಮ, ಚೇಂದAಡ ರೂಪ, ಕಾರ್ಯನಿರ್ವಹಣಾಧಿಕಾರಿ ಬಿ.ಎಂ. ಪ್ರದೀಪ್ ಹಾಜರಿದ್ದರು.