ಗೋಣಿಕೊಪ್ಪಲು, ಏ. ೨೧: ವನ್ಯಜೀವಿ ಹಾವಳಿಯಿಂದ ರೈತರು ಬೆಳೆದ ಫಸಲು ನಷ್ಟವಾಗುತ್ತಿದ್ದು, ಪರಿಹಾರ ವಿತರಣೆಯೂ ವಿಳಂಬವಾಗುತ್ತಿದ್ದು, ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ರೈತ ಸಂಘ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಎಚ್ಚರಿಕೆ ನೀಡಿದರು.

ಹುದಿಕೇರಿಯ ಕೊಡವ ಸಮಾಜ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೋಬಳಿ ಮಟ್ಟದ ರೈತರ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರ ಸಮಸ್ಯೆ ಪರಿಹಾರಕ್ಕೆ ರೈತ ಸಂಘ ಅನಿವಾರ್ಯವಾಗಿದೆ. ರೈತರ, ಬೆಳೆಗಾರರ ಯಾವುದೇ ಸಮಸ್ಯೆಗಳಿದ್ದರು ರೈತ ಸಂಘದ ಗಮನಕ್ಕೆ ತರಬೇಕು. ಸರ್ಫೇಸಿ ಆ್ಯಕ್ಟ್ನಿಂದ ಯಾವುದೇ ರೈತರು ಭಯಪಡಬೇಕಾಗಿಲ್ಲ. ಬ್ಯಾಂಕಿನಿAದ ಬರುವ ನೋಟಿಸಿಗೆ ಸಮಂಜಸವಾದ ಉತ್ತರ ನೀಡಬೇಕು. ಅಗತ್ಯವಿದ್ದಲ್ಲಿ ರೈತ ಸಂಘದ ಗಮನಕ್ಕೆ ತರುವಂತೆ ತಿಳಿಸಿದರು. ರೈತರ ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಅಧಿಕಾರಿಗಳ ಸಮ್ಮುಖದಲ್ಲಿ ಬಗೆಹರಿಸುವ ಮೂಲಕ ನ್ಯಾಯ ಪಡೆಯಬಹುದು. ಪ್ರಸ್ತುತ ಕೊಡಗಿನ ಅನೇಕ ರೈತರು ಸರ್ಫೇಸಿ ಆ್ಯಕ್ಟ್ ನಿಂದ ತೊಂದರೆಗೆ ಒಳಗಾಗಿದ್ದಾರೆ. ತಮ್ಮ ಭೂಮಿ, ತೋಟ, ಮನೆ ಗಳನ್ನು ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ. ಇದನ್ನು ನ್ಯಾಯಯುತವಾಗಿ ಬಗೆಹರಿಸಿಕೊಳ್ಳುವ ಅವಕಾಶ ವಿದ್ದರೂ ಈ ಬಗ್ಗೆ ರೈತರು ಗಮನ ಹರಿಸದೆ ತೋಟಗಳು ಆನ್‌ಲೈನ್ ಮೂಲಕ ಹರಾಜು ಆಗುತ್ತಿದೆ. ಇದನ್ನು ತಡೆಗಟ್ಟದಿದ್ದಲ್ಲಿ ರೈತರು ಬಹಳಷ್ಟು ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.

ಆನೆ-ಮಾನವ ಸಂಘರ್ಷ ವಿಪರೀತವಾಗುತ್ತಿದ್ದು ತಡೆಗಟ್ಟಲು ಜನಪ್ರತಿನಿಧಿಗಳು ಹಾಗೂ ಇಲಾಖಾಧಿಕಾರಿಗಳು ವಿಫಲರಾಗುತ್ತಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಬನಳಸುವಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಅರಣ್ಯದ ಗಡಿಯಲ್ಲಿಯೇ ಎಚ್ಚರಿಕೆ ವಹಿಸಿದ್ದಲ್ಲಿ ವನ್ಯ ಪ್ರಾಣಿಗಳು ಜನನಿಬೀಡ ಪ್ರದೇಶಕ್ಕೆ ಬರುವುದನ್ನು ತಡೆಗಟ್ಟಬಹುದು. ರೈತರ ಬೆಳೆ ನಷ್ಟ ಪರಿಹಾರ ಒದಗಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಮುಂದೆ ರೈತರೆಲ್ಲರು ಒಟ್ಟಾಗಿ ಸೇರಿ ಬೃಹತ್ ಹೋರಾಟವನ್ನು ಕೈಗೆತ್ತಿಕೊಳ್ಳುವ ಮೂಲಕ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವAತೆ ಮನು ಸೋಮಯ್ಯ ಕರೆ ನೀಡಿದರು.

ಸಭೆಯಲ್ಲಿ ಹುದಿಕೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ತಲೆದೋರಿರುವ ಲೋ ವೋಲ್ಟೇಜ್ ಸಮಸ್ಯೆ, ಕಂದಾಯ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಚಾರದ ಬಗ್ಗೆ ರೈತರು ಸಭೆಯಲ್ಲಿ ಗಮನಕ್ಕೆ ತಂದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ರೈತ ಸಂಘವು ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬಂದ ನಂತರ ರೈತರ ಹಲವು ಸಮಸ್ಯೆಗಳಿಗೆ ಪರಿಹಾರ ಲಭಿಸಿದೆ. ರೈತ ಸಂಘವನ್ನು ಮತ್ತಷ್ಟು ಬಲಗೊಳಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಹುದಿಕೇರಿ ಹೋಬಳಿ ರೈತ ಸಂಘದ ಅಧ್ಯಕ್ಷ ಬಲ್ಯಮಿದೇರಿರ ಪ್ರಕಾಶ್ ಮಾತನಾಡಿ, ಈ ಭಾಗದಲ್ಲಿರುವ ವನ್ಯಜೀವಿ ಮಾನವ ಸಂಘರ್ಷ ಮಿತಿಮೀರಿದ್ದು, ರೈತರ ಜಾನುವಾರುಗಳು ಹುಲಿ ದಾಳಿಗೆ ಬಲಿಯಾಗುತ್ತಿವೆ. ರೈತರ ಗೋಳನ್ನು ಕೇಳುವವರು ಇಲ್ಲದಾಗಿದೆ ಎಂದರು.

ವೇದಿಕೆಯಲ್ಲಿ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಸ್ ಸುಬ್ಬಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಹುದಿಕೇರಿ ಹಿರಿಯ ನಾಗರಿಕರಾದ ಚೆಕ್ಕೆರ ಕಾಳಯ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳಾದ ಕಿರಿಯಮಾಡ ಮಿಲನ್ ಗಣಪತಿ, ಬೊಜ್ಜಂಗಡ ದೀಪು ತಿಮ್ಮಯ್ಯ, ಬೊಳ್ಳಜಿರ ಕಿಶೋರ್, ಚೆಕ್ಕೆರ ರಮೇಶ್, ಬೊಳ್ಳಿಮಾಡ ಬಿನುಕುಮಾರ್, ಮಲ್ಲೆಂಗಡ ಉತ್ತಯ್ಯ, ರೈತ ಸಂಘದ ಪ್ರಮುಖರಾದ ಪುಚ್ಚಿಮಾಡ ರಾಯ್ ಮಾದಪ್ಪ, ಬಾಚಮಾಡ ಭವಿಕುಮಾರ್, ತೀತಮಾಡ ರಾಜ, ಚೊಟ್ಟೆಕಾಳಪಂಡ ಮನು, ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಚಂಗುಲAಡ ಸೂರಜ್ ಸ್ವಾಗತಿಸಿ, ವಂದಿಸಿದರು. ಸಭೆಗೂ ಮುನ್ನ ಸ್ಥಳೀಯ ಅಮರ್ ಜವಾನ್ ಸ್ಮಾರಕಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು. ನಂತರ ಪಟ್ಟಣದಿಂದ ಮೆರವಣಿಗೆ ಮೂಲಕ ಸಾಗಿ ಕೊಡವ ಸಮಾಜದಲ್ಲಿ ಸಮಾಗಮಗೊಂಡರು.