ವೀರಾಜಪೇಟೆ ಏ. ೧೯: ಬೇಸಿಗೆ ಶಿಬಿರಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಸಾಹಿತಿ ರಜಿತ ಕಾರ್ಯಪ್ಪ ಹೇಳಿದರು.
ವೀರಾಜಪೇಟೆಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಭಾಂಗಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೇರೆ ಕಡೆಗಳಲ್ಲಿ ನಡೆಯುವ ಶಿಬಿರಗಳಲ್ಲಿ ಅನೇಕ ಚಟುವಟಿಕೆಗಳು, ನೃತ್ಯ ಇತ್ಯಾದಿ ಇರುತ್ತದೆ. ಆದರೆ ಇಲ್ಲಿ ನಡೆಯುವ ಶಿಬಿರದಲ್ಲಿ ಅಧ್ಯಾತ್ಮಿಕ ಅಂಶಗಳೊAದಿಗೆ ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ಅಳವಡಿಸಿಕೊಳ್ಳಬೇಕಾದ ಗುಣಗಳ ಬಗ್ಗೆ ಕಲಿಸಿಕೊಡಲಾಗುತ್ತದೆ. ಇದನ್ನು ವಿದ್ಯಾರ್ಥಿಗಳು ಕಲಿಯಬೇಕು ಎಂದರು. ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆಯ ಆಪ್ತ ಸಮಾಲೋಚಕಿ ಮುತ್ತಮ್ಮ ಅವರು ಮಕ್ಕಳಿಗೆ ಪರೀಕ್ಷೆಯ ಭಯ ನಿವಾರಣೆ ಬಗ್ಗೆ, ಆತ್ಮವಿಶ್ವಾಸದ ಬಗ್ಗೆ ಮಾತನಾಡಿದರು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಸಂಸ್ಥೆಯ ಸಂಚಾಲಕಿ ಬಿ.ಕೆ. ಕೋಮಲ ಅಧ್ಯಾತ್ಮಿಕ ಜ್ಞಾನ ಮತ್ತು ಧ್ಯಾನದ ಬಗ್ಗೆ ಮಾತನಾಡಿದರು.
ಮೈಸೂರಿನಿಂದ ಆಗಮಿಸಿದ್ದ ಕುಮಾರಿ ಬಿ.ಕೆ ಶಿವಾನಿ, ಅದ್ವಿತೀಯ, ವಿಶಾಲಾಕ್ಷಿ ಹಾಗೂ ವೀರಾಜಪೇಟೆ ಕೇಂದ್ರದ ವಿದ್ಯಾರ್ಥಿ ರೂಪ ಪೂವಯ್ಯ ಅವರು ಶಿಬಿರದ ನಿರ್ವಹಣೆ ಮಾಡಿದರು, ಶಿಬಿರದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಮಕ್ಕಳಿಗೆ ಈಶ್ವರೀಯ ಉಡುಗೊರೆಯನ್ನು ನೀಡಲಾಯಿತು.