ಸೋಮವಾರಪೇಟೆ, ಏ. ೧೯: ಅರಣ್ಯದಿಂದ ಕಾಡಾನೆಗಳು ದಾಟದಂತೆ ಅಳವಡಿಸಿರುವ ರೈಲ್ವೇ ಬ್ಯಾರಿಕೇಡ್‌ಗಳನ್ನು ದಾಟಿ ಜನವಸತಿ ಪ್ರದೇಶಕ್ಕೆ ಲಗ್ಗೆಯಿಟ್ಟ ಕಾಡಾನೆ, ವಾಸದ ಮನೆ ಸೇರಿದಂತೆ ವಾಹನಗಳಿಗೆ ತೀವ್ರ ಹಾನಿಯುಂಟು ಮಾಡಿರುವ ಘಟನೆ ಐಗೂರು ಗ್ರಾ.ಪಂ. ವ್ಯಾಪ್ತಿಯ ಕಾಜೂರು ಗ್ರಾಮದಲ್ಲಿ ನಡೆದಿದೆ.

ಕಾಜೂರು ಅರಣ್ಯ ಪ್ರದೇಶದಿಂದ ಕಾಡಾನೆಗಳು ಜನವಸತಿ ಪ್ರದೇಶಕ್ಕೆ ದಾಟದಂತೆ ಒಟ್ಟಾರೆ ಯೋಜನೆಯಡಿ ಲಕ್ಷಾಂತರ ರೂಪಾಯಿ ವ್ಯಯಿಸಿ ರೈಲ್ವೇ ಬ್ಯಾರಿಕೇಡ್, ಸೋಲಾರ್ ಫೆನ್ಸಿಂಗ್, ಆನೆ ಕಂದಕ ಅಳವಡಿಸಿದ್ದರೂ ಸಹ ಅವೈಜ್ಞಾನಿಕ ಹಾಗೂ ನಿರ್ವಹಣೆ ಕೊರತೆಯಿಂದ ಸಮಸ್ಯೆ ಇಂದಿಗೂ ಜೀವಂತವಾಗಿದೆ.

ಇAದು ಬೆಳಿಗ್ಗೆ ೬.೩೦ರ ಸುಮಾರಿಗೆ ಕಾಜೂರು ಅರಣ್ಯ ಪ್ರದೇಶ ವ್ಯಾಪ್ತಿಗೆ ಆಗಮಿಸಿದ ೩ ಕಾಡಾನೆಗಳ ಪೈಕಿ ಎರಡು ಕಾಡಾನೆಗಳು ಅರಣ್ಯಕ್ಕೆ ತೆರಳಿದ್ದು, ಈ ಗುಂಪಿನಲ್ಲಿದ್ದ ಒಂದು ಕಾಡಾನೆ ಸಮೀಪವಿರುವ ಎಂ.ಜಿ. ಗೋಪಾಲಕೃಷ್ಣ ಅವರ ಮನೆಯ ಅಂಗಳಕ್ಕೆ ಬಂದು ಮನಸೋಯಿಚ್ಛೆ ದಾಳಿ ನಡೆಸಿದೆ. ಕಾಡಾನೆಯ ದಾಳಿಯಿಂದ ಮನೆಯ ಗೇಟ್, ಶೆಡ್‌ನಲ್ಲಿ ನಿಲ್ಲಿಸಿದ್ದ ಆಟೋ, ಸ್ಕೂಟರ್ ಜಖಂಗೊAಡಿದ್ದು, ಮನೆಯ ಛಾವಣಿಗೂ ಹಾನಿ ಮಾಡಿದೆ. ನಿದ್ರೆಯ ಮಂಪರಿನಲ್ಲಿದ್ದ ಮನೆ ಮಂದಿ ಕಾಡಾನೆಯ ದಾಳಿಯಿಂದ ಕಂಗೆಟ್ಟು ಜೋರಾಗಿ ಬೊಬ್ಬೆ ಹೊಡೆದ ಪರಿಣಾಮ, ಕಾಡಾನೆ ಸ್ಥಳದಿಂದ ಕಾಲ್ಕಿತ್ತಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.

ಈ ಭಾಗದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದರೂ ಶಾಶ್ವತ ಪರಿಹಾರ ಲಭಿಸಿಲ್ಲ. ಇದೀಗ ವಾಸದ ಮನೆಯ ಆವರಣಕ್ಕೆ ಆಗಮಿಸಿ ಕಾಡಾನೆ ದಾಳಿ ನಡೆಸಿದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ. ಕಾಡಾನೆಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು. ಯೋಜನೆಗಳನ್ನು ವೈಜ್ಞಾನಿಕವಾಗಿ ಜಾರಿಗೊಳಿಸಬೇಕು. ಸಂತ್ರಸ್ಥ ಕುಟುಂಬಕ್ಕೆ ಗರಿಷ್ಠ ಪ್ರಮಾಣದ ಪರಿಹಾರ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.