ಕುಶಾಲನಗರ, ಏ. ೧೯: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷರಾದ ಪಿ. ಕೃಷ್ಣೇಗೌಡರ ನೇತೃತ್ವದಲ್ಲಿ ಕುಶಾಲನಗರದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೃಷ್ಣೇಗೌಡ ಅವರು, ಕನ್ನಡ ನೆಲ-ಜಲ, ಭಾಷೆಯ ಉಳಿವಿಗಾಗಿ ಸತತ ೨೫ ವರುಷಗಳಿಂದ ನ್ಯಾಯಯುತವಾದ ಹೋರಾಟ ನಡೆಸುತ್ತಾ ಬಂದಿದ್ದೇವೆ. ಅದರ ಪ್ರತಿಫಲ ಎಲ್ಲರಿಗೂ ತಿಳಿದಿದೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ನಮ್ಮ ಸಂಘಟನೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಮನೆಮಾತಾಗಿದೆ ಎಂದರು. ಯಾರ ಆಮಿಷ, ಒತ್ತಡಕ್ಕೆ ಒಳಗಾಗದೆ ನಿಸ್ವಾರ್ಥವಾಗಿ ಸಂಘಟನೆ ಸೇವೆ ಸಲ್ಲಿಸುತ್ತಿದೆ ಎಂದರು.

ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಸಂಬAಧಪಟ್ಟ ಅಧಿಕಾರಿಗಳನ್ನು ಜಾಗೃತಗೊಳಿಸಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಸರಿಯಾಗಿ ವಿನಮೃತೆಯಿಂದ ಸ್ಪಂದಿಸದ ಜನಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಲಂಚಕ್ಕಾಗಿ ಆಮಿಷ ಒಡ್ಡುವ ಅಧಿಕಾರಿಗಳನ್ನು ವಜಾಗೊಳಿಸಬೇಕು ಹಾಗೂ ಕೊಡಗು ಜಿಲ್ಲೆಗೆ ಬಿಡುಗಡೆಯಾದ ಅನುದಾನದ ಅನುಸಾರ ಕೆಲಸ ಕಾರ್ಯಗಳು ನಡೆಯಬೇಕೆಂದು ಆಗ್ರಹಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಭು ಅವರು ಮಾತನಾಡಿ, ಸಂಘಟನೆ ಬೆಳೆದು ಬಂದ ಹಾದಿ ಮತ್ತು ಎದುರಿಸಿದ ಸವಾಲುಗಳನ್ನು ಸಭೆಯ ಮುಂದಿಟ್ಟರು. ನಂತರ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು.

ಪ್ರಿತುನ್ ಪೂವಣ್ಣ ಅವರು ಜಿಲ್ಲಾ ಕಾರ್ಯಾಧ್ಯಕ್ಷರಾಗಿ, ದಿವ್ಯ ಅವರು ಮಡಿಕೇರಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ, ನಂದಿನಿ ಉಪಾಧ್ಯಕ್ಷರಾಗಿ, ಸ್ವಪ್ನ ಅವರು ವೀರಾಜಪೇಟೆ ತಾಲೂಕು ಅಧ್ಯಕ್ಷರಾಗಿ, ಅನಿತಾ ಜಗದೀಶ್ ಅವರು ನಾಪೋಕ್ಲು ಹೋಬಳಿ ಅಧ್ಯಕ್ಷರಾಗಿ, ರಾಕೇಶ್ ಅವರು ಕುಶಾಲನಗರ ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ, ಮಹಿಳಾ ಜಿಲ್ಲಾಧ್ಯಕ್ಷರಾದ ಜಯಶ್ರೀ ಮುರುಗನ್, ಜಿಲ್ಲಾ ಉಸ್ತುವಾರಿ ತನು ಕಿಶೋರ್, ಉಪಾಧ್ಯಕ್ಷರಾದ ರಾಜಶೇಖರ್ ಮುಂತಾದವರು ಉಪಸ್ಥಿತರಿದ್ದರು.