ಮಡಿಕೇರಿ, ಏ. ೧೮: ವಾರ್ಷಿಕವಾಗಿ ಜರುಗುವ ಕೊಡವ ಕೌಟುಂಬಿಕ ಕ್ರಿಕೆಟ್ ಉತ್ಸವದ ಭಾಗವಾಗಿ ಕಳೆದ ಮೂರು ವರ್ಷಗಳಿಂದ ಪ್ರಾರಂಭಿಸಲಾಗಿರುವ ಕೌಟುಂಬಿಕ ಮಹಿಳಾ ಕ್ರಿಕೆಟ್ ಪಂದ್ಯಾಟ ಇಂದು ಶುಭಾರಂಭಗೊAಡಿದೆ.
ಪ್ರಸಕ್ತ ವರ್ಷದ ಕ್ರಿಕೆಟ್ ಉತ್ಸವವನ್ನು ಬೇತ್ರಿ ಮುಕ್ಕಾಟಿರ ಕುಟುಂಬಸ್ಥರು ಮೂರ್ನಾಡುವಿನಲ್ಲಿ ಆಯೋಜಿಸಿದ್ದಾರೆ. ಈ ಕ್ರಿಕೆಟ್ ಉತ್ಸವದ ಭಾಗವಾಗಿರುವ ಮಹಿಳಾ ಕ್ರಿಕೆಟ್ ಪಂದ್ಯಾವಳಿ ಮೂರ್ನಾಡಿನ ಪಾಂಡಾಣೆ ಮಂದ್ ಕ್ರೀಡಾ ಮೈದಾನದಲ್ಲಿ ಚಾಲನೆಗೊಂಡಿದ್ದು, ಮಹಿಳೆಯರ ಕ್ರಿಕೆಟ್ ಕಲರವ ಆರಂಭಗೊAಡಿದೆ. ಈ ಬಾರಿ ೪೮ ಕೊಡವ ಕುಟುಂಬಗಳ ಮಹಿಳಾ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿವೆ.
ಶನಿವಾರ ಬೆಳಿಗ್ಗೆ ಮಹಿಳಾ ಕ್ರಿಕೆಟ್ ಪಂದ್ಯಾಟವನ್ನು ಮೂರ್ನಾಡು ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಕೊಕ್ಕಲೆರ ಬೋಜಮ್ಮ ಹಾಗೂ ಮೂರ್ನಾಡು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮುಕ್ಕಾಟಿರ ದೇಚಮ್ಮ ಅವರು ಉದ್ಘಾಟಿಸಿದರು.
ಈ ಸಂದರ್ಭ ಮುಕ್ಕಾಟಿರ ಕಪ್ ಕ್ರಿಕೆಟ್ ಉತ್ಸವ ಸಮಿತಿ ಅಧ್ಯಕ್ಷ ಸುರೇಶ್ ಪೆಮ್ಮಯ್ಯ ಸೇರಿದಂತೆ ಇತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಮುಕ್ಕಾಟಿರ ಸರಸು ನವೀನ್ ಅವರು ಪ್ರಾರ್ಥಿಸಿದರೆ, ಅತಿಥಿಗಳು ದೀಪ ಬೆಳಗಿಸಿ ಆಟಗಾರ್ತಿಯರನ್ನು ಪರಿಚಯಿಸಿಕೊಂಡು ಪಂದ್ಯಾವಳಿಗೆ ಚಾಲನೆ ನೀಡಿದರು.
ಪ್ರಥಮ ದಿನ ೭ ಪಂದ್ಯಗಳು ನಡೆದವು. ತಾ. ೨೪ರ ತನಕ ಪಾಂಡಾಣೆ ಮಂದ್ ಕ್ರೀಡಾ ಮೈದಾನದಲ್ಲಿ ಈ ಪಂದ್ಯಾವಳಿ ನಡೆಯಲಿದೆ. ತಾ. ೨೬ರ ನಂತರ ಮುಖ್ಯ ಮೈದಾನವಾಗಿರುವ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಜರುಗಲಿದೆ.