ಕುಶಾಲನಗರ, ಏ. ೧೭ ; ಬೇಸಿಗೆ ಶಿಬಿರಗಳು ಮಕ್ಕಳ ಪ್ರತಿಭೆ ಹಾಗೂ ದೈಹಿಕ ಚಟುವಟಿಕೆಗಳಿಗೆ ಅತ್ಯುತ್ತಮ ವೇದಿಕೆ ಕಲ್ಪಿಸಿಕೊಡುತ್ತವೆ ಎಂದು ಇಲ್ಲಿನ ಟೌನ್ ಪೊಲೀಸ್ ಅಪರಾಧ ವಿಭಾಗದ ಠಾಣಾಧಿಕಾರಿ ಗೀತಾ ಹೇಳಿದರು. ಕುಶಾಲನಗರ ಶಿವಧಾರೆ ಸ್ಕೂಲ್ ಆಫ್ ಡ್ಯಾನ್ಸ್ನ ಪ್ರಥಮ ವರ್ಷದ ವಾರ್ಷಿಕೋತ್ಸವ ಹಾಗೂ ಬೇಸಿಗೆ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮಕ್ಕಳು ದಿನದ ಬಹುತೇಕ ಅವಧಿಯನ್ನು ಟಿವಿ, ಕಂಪ್ಯೂಟರ್, ವಿಡಿಯೋ ಗೇಮ್‌ಗಳ ಮೂಲಕ ಕಳೆಯುತ್ತಾರೆ. ಆದರೆ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಾಗ ಪ್ರತಿಭೆಗೆ ವೇದಿಕೆ ದೊರೆಯುತ್ತದೆ ಎಂದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಮಾತನಾಡಿ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಮನಸ್ಸಿಗೆ ಉಲ್ಲಾಸ ದೊರೆಯುತ್ತದೆ ಎಂದರು. ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಮೋಹನ್, ಜಿಲ್ಲಾ ನಿರ್ದೇಶಕ ಟಿ.ಆರ್ ಪ್ರಭುದೇವ್, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ದಿನೇಶ್ ಶೆಟ್ಟಿ, ವಕೀಲ ಶರತ್, ಮಡಿಕೇರಿ ಜಿಲ್ಲಾಸ್ಪತ್ರೆಯ ವೈದ್ಯ ಡಾ ಚೇತನ್ ಕುಮಾರ್ ಮಾತನಾಡಿದರು. ಈ ಸಂದರ್ಭ ಶಿವಧಾರೆ ನೃತ್ಯ ಸಂಸ್ಥೆಯ ನೃತ್ಯ ಸಂಯೋಜಕ ಚೇತನ್ ರವಿ, ಹೆಚ್ ಜೆ ಶಿವರಾಜು, ಉದ್ಯಮಿಗಳಾದ ಆದಂ ಎಸ್, ಬಾಷಾ, ಸೇರಿದಂತೆ ಪೋಷಕರು ಹಾಗೂ ಶಿಬಿರಾರ್ಥಿಗಳು ಇದ್ದರು.