ಮಡಿಕೇರಿ, ಏ. ೧೬: ನಮ್ಮ ಗಣತಿ, ನಮ್ಮ ಅಭಿವೃದ್ಧಿ ೨೦೨೭ ರ ಜನಗಣತಿಯ ಮೊದಲ ಹಂತವು ಈಗಾಗಲೇ ಆರಂಭವಾಗಿದ್ದು, ಸ್ವಯಂ ಗಣತಿ ಕಾರ್ಯ ಪೂರ್ಣಗೊಂಡಿದೆ. ಆ ದಿಸೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಸುಮಾರು ೧,೭೪,೧೧೪ ಕುಟುಂಬಗಳಲ್ಲಿ ೭,೩೭೯ ಪ್ರಗತಿಯಾಗಿದೆ. ಉಳಿದಂತೆ ತಾ. ೧೬ ರಿಂದ ಮೇ ೧೫ ರವರೆಗೆ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಗಣತಿ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಮಾಹಿತಿ ನೀಡಿದ್ದಾರೆ.

ಮನೆ ಮನೆ ಗಣತಿ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ ೯೯೯ ಗಣತಿದಾರರನ್ನು ನಿಯೋಜಿಸಲಾಗಿದೆ. ಮಡಿಕೇರಿ ತಾಲೂಕಿಗೆ ೧೮೭, ಮಡಿಕೇರಿ ನಗರಕ್ಕೆ ೬೧, ಸೋಮವಾರಪೇಟೆ ತಾಲೂಕಿಗೆ ೧೮೬, ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ೧೨, ವೀರಾಜಪೇಟೆ ತಾಲೂಕಿಗೆ ೧೩೩, ವೀರಾಜಪೇಟೆ ಪುರಸಭೆ ವ್ಯಾಪ್ತಿಗೆ ೩೬, ಪೊನ್ನಂಪೇಟೆ ತಾಲೂಕಿನಲ್ಲಿ ೧೬೧, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ೧೯, ಕುಶಾಲನಗರ ತಾಲೂಕಿಗೆ ೧೫೮, ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ೪೬, ಒಟ್ಟು ೯೯೯ ಗಣತಿದಾರರನ್ನು ನಿಯೋಜಿಸಲಾಗಿದೆ. ಜೊತೆಗೆ ೧೭೨ ಮಂದಿ ಗಣತಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಹಾಗೆಯೇ ಶೇ. ೧೦ ರಷ್ಟು ಗಣತಿದಾರರನ್ನು ಕಾಯ್ದಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಸರ್ಕಾರದ ಮಹತ್ವಾಕಾಂಕ್ಷೆ ಕಾರ್ಯಕ್ರಮಗಳಲ್ಲಿ ಗಣತಿ ಕಾರ್ಯವು ಒಂದಾಗಿದ್ದು, ಸಾರ್ವಜನಿಕರು ಗಣತಿಯಲ್ಲಿ ಪಾಲ್ಗೊಂಡು ಮಾಹಿತಿ ನೀಡುವಂತಾಗಬೇಕು. ಜನಗಣತಿಯಲ್ಲಿ ಭಾಗವಹಿಸಬೇಕು. ಜನಗಣತಿಯು ದೇಶದ ಶಕ್ತಿ ಎಂಬುದನ್ನು ಮರೆಯಬಾರದು. ಎಲ್ಲರೂ ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಕೋರಿದ್ದಾರೆ.