ಗೋಣಿಕೊಪ್ಪಲು,ಏ.೧೬: ರೈತರಿಗೆ ಸಹಕಾರಿಯಾಗಿ ಕೆಲಸ ನಿರ್ವಹಿಸಬೇಕಾದ ಕೃಷಿ ಇಲಾಖೆಯು ಇದೀಗ ಜಿಲ್ಲೆಯ ೮೦ಕ್ಕೂ ಅಧಿಕ ಸಹಕಾರ ಸಂಘಗಳಿಗೆ ಮಾರಕವಾದ ನೋಟಿಸನ್ನು ಜಾರಿಗೊಳಿಸುವ ಮೂಲಕ ಜಿಲ್ಲೆಯ ರೈತರ ಕೆಂಗಣ್ಣಿಗೆ ಗುರಿಯಾಗಿದೆ.

ಕೃಷಿ ಇಲಾಖೆ ಹೊರಡಿಸಿರುವ ಸುತ್ತೋಲೆಗೆ ಖಂಡನೆ ವ್ಯಕ್ತ ಪಡಿಸಿರುವ ಕೊಡಗು ಜಿಲ್ಲಾ ಡಿಸಿಸಿ ಬ್ಯಾಂಕಿನ ಅಧ್ಯಕ್ಷ, ಹಾತೂರು ಕೃಷಿ ಪತ್ತಿನ ಸÀಹಕಾರ ಸಂಘದ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ; ೭ ದಿನಗಳೊಳಗಾಗಿ ಜಿಲ್ಲೆಯಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರುಗಳ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು. ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು.ತಪ್ಪಿದಲ್ಲಿ ಜಿಲ್ಲೆಯ ಸಹಕಾರ ಸಂಘದ ಅಧ್ಯಕ್ಷರುಗಳು ಹಾಗೂ ರೈತರುಗಳು ಒಟ್ಟಾಗಿ ಸೇರಿ ಮಡಿಕೇರಿಯ ಜಿಲ್ಲಾ ಕೃಷಿ ಅಧಿಕಾರಿಗಳ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

ಹಾತೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯ ನಂತರ ಇಲಾಖೆ ಹೊರಡಿಸಿರುವ ಸುತ್ತೋಲೆ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಈಗಾಗಲೇ ಸರ್ಕಾರದ ಈ ಹಿಂದಿನ ಸುತ್ತೋಲೆಯಂತೆ ರೈತರಿಗೆ ಅಗತ್ಯವಿರುವ ರಸಗೊಬ್ಬರಗಳನ್ನು ನಿಯಮಾನುಸಾರವಾಗಿ ಖರೀದಿಸಿ ತಮ್ಮ ತಮ್ಮ ಸಹಕಾರ ಸಂಘದ ಗೋದಾಮಿನಲ್ಲಿ ದಾಸ್ತಾನು ಇಡಲಾಗಿದೆ. ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ರೈತರಿಗೆ ಬೇಕಾದ ರಸಗೊಬ್ಬರಗಳನ್ನು ನೀಡಲಾಗುತ್ತಿದೆ. ವರ್ಷಂಪ್ರತಿ ಡಿಸೆಂಬರ್ ತಿಂಗಳಿನಿAದಲೇ ಸಂಬAಧಿಸಿದ ರಸಗೊಬ್ಬರ ಮಾರಾಟಗಾರರಿಗೆ ಮುಂಗಡ ಹಣ ನೀಡಿ ರಸಗೊಬ್ಬರವನ್ನು ಖರೀದಿಸಿ ತಮ್ಮ ತಮ್ಮ ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದೆ.

ಈ ಬಾರಿ ರೈತರು ೩ ಅವಧಿಗೆ ತಮಗೆ ಬೇಕಾದ ರಸಗೊಬ್ಬರವನ್ನು ಖರೀದಿಸಿ ರೈತರ ಗೋದಾಮಿನಲ್ಲಿ ದಾಸ್ತಾನು ಮಾಡಿಕೊಂಡಿದ್ದಾರೆ. ಆದರೆ ರೈತರು ಹೆಚ್ಚಾಗಿ ರಸಗೊಬ್ಬರವನ್ನು ಬೇಸಿಗೆ ಕಾಲದಲ್ಲಿ ಖರೀದಿಸಲು ಕಾರಣವೇನು.? ಜೂನ್ ತಿಂಗಳಿನಲ್ಲಿ ರಸಗೊಬ್ಬರ ನೀಡಬೇಕು. ಈಗಲೇ ಯಾತಕ್ಕಾಗಿ ರೈತರಿಗೆ ರಸಗೊಬ್ಬರ ನೀಡಲಾಗಿದೆ. ಈ ಬಗ್ಗೆ ನೀಡಲಾದ ನೋಟಿಸಿಗೆ ೨೪ ಗಂಟೆಯೊಳಗೆ ಸೂಕ್ತ ಸಮಜಾಯಿಸಿಕೆ ನೀಡಲು ಕೃಷಿ ಇಲಾಖೆ ಜಂಟಿ ನಿರ್ದೇಶಕರು ನೋಟಿಸ್ ಜಾರಿ ಮಾಡಿದ್ದಾರೆ. ಈ ಮೂಲಕ ರೈತರ ಹಾಗೂ ಸಹಕಾರ ಸಂಘಗಳ ಪ್ರತಿನಿಧಿಗಳ ಮೇಲೆ ಗಧಾ ಪ್ರಹಾರಕ್ಕೆ ಮುಂದಾಗಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು. ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳ ಪರವಾಗಿ ಮಾತನಾಡಿದ ಬಾಂಡ್ ಗಣಪತಿ, ರೈತರಿಗೆ ಬೇಕಾದ ರಸಗೊಬ್ಬರಗಳನ್ನು ನೀಡುವುದು ಸಹಕಾರ ಸಂಘದ ಬಹುದೊಡ್ಡ ಕರ್ತವ್ಯವಾಗಿದೆ. ರೈತರಿಗೆ ಬೇಕಾದ ರೀತಿಯಲ್ಲಿ ರಸಗೊಬ್ಬರಗಳನ್ನು ಬಳಕೆ ಮಾಡಿಕೊಳ್ಳುವುದು ರೈತರಿಗೆ ಸೇರಿದ ವಿಚಾರವಾಗಿದೆ.

ಪ್ರಸ್ತುತ ಪಾಶ್ಚಾತ್ಯ ದೇಶದಲ್ಲಿ ಯುದ್ದದ ಭೀತಿ ಮುಂದುವರೆಯುತ್ತಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ರೈತರು ತಮಗೆ ಬೇಕಾದ ರಸಗೊಬ್ಬರಗಳನ್ನು ಮುಂಗಡವಾಗಿಯೆ ಖರೀದಿಸಿದ್ದಾರೆ. ಆದರೆ ಖರೀದಿಯ ಬಗ್ಗೆ ಇಲಾಖೆ ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ. ಜಂಟಿ ನಿರ್ದೇಶಕರು ಸಾರ್ವಜನಿಕವಾಗಿ ಮಾಧ್ಯಮದ ಮೂಲಕ ರೈತರಿಗೆ ಜೂನ್ ಮೊದಲ ವಾರದವರೆಗೂ ರಸಗೊಬ್ಬರ ವಿತರಿಸಬಾರದೆಂದು ಸಂಬAಧಿಸಿದ ಜಿಲ್ಲೆಯ ಸಹಕಾರ ಸಂಘಗಳಿಗೆ ಆದೇಶ ನೀಡಲಿ. ಆ ಸಂದರ್ಭದಲ್ಲಿ ಅದಕ್ಕೆ ಬೇಕಾದ ಉತ್ತರ ನೀಡಲು ತಯಾರಿದ್ದೇವೆ.

ಕೇವಲ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯನ್ನು ಕರೆದು ನಂತರ ಸುತ್ತೋಲೆಯನ್ನು ಹೊರಡಿಸಿರುವುದು ಸರಿಯಲ್ಲ. ಇದರಿಂದಾಗಿ ಉತ್ತಮವಾಗಿ ನಡೆಯುತ್ತಿರುವ ಸಹಕಾರ ಸಂಘಗಳನ್ನು ಸಂಶಯದ ರೀತಿಯಲ್ಲಿ ನೋಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ನಿಟ್ಟಿನಲ್ಲಿ ಇಲಾಖೆ ಹೊರಡಿಸಿರುವ ನೋಟಿಸನ್ನು ಹಿಂಪಡೆಯಬೇಕೆAದು ಒತ್ತಾಯಿಸಿದರು.

ಸಹಕಾರ ಸಂಘಗಳು ರಸಗೊಬ್ಬರಗಳನ್ನು ಜಿಲ್ಲೆಯ ರೈತರಿಗೆ ಮಾತ್ರ ವಿತರಿಸುತ್ತಿದೆ. ಏಕಾಏಕಿ ಕೃಷಿ ಇಲಾಖೆ ಅಧಿಕಾರಿಗಳು ಇಂತಹ ನೋಟಿಸನ್ನು ಜಾರಿಗೊಳಿಸುವ ಮೂಲಕ ರೈತರಿಗೆ ಮಾಡುತ್ತಿರುವ ಅನ್ಯಾಯವನ್ನು ಖಂಡಿಸುತ್ತೇವೆ.

ಮಳೆಗಾಲದ ಸಂದರ್ಭ ಯಾವುದೇ ಭಾರೀ ವಾಹನಗಳು ಸಂಚಾರ ಮಾಡಲು ತೊಂದರೆ ಆಗುವ ಹಿನ್ನೆಲೆಯಲ್ಲಿ ಡಿಸೆಂಬರ್ ತಿಂಗಳಿನಲ್ಲಿಯೇ ಸಹಕಾರ ಸಂಘಗಳು ತಮ್ಮ ರೈತರಿಗೆ ಬೇಕಾದ ರಸಗೊಬ್ಬರಗಳನ್ನು ಸಂಸ್ಥೆಯ ಗೋದಾಮಿನಲ್ಲಿ ದಾಸ್ತಾನು ಮಾಡುತ್ತಾರೆ. ಇದು ವಾಡಿಕೆಯಂತೆ ಮುಂದುವರೆಯುತ್ತಲೇ ಬಂದಿದೆ. ರೈತರು ತಮಗೆ ಅಗತ್ಯವಿದ್ದಾಗ ರಸಗೊಬ್ಬರವನ್ನು ಖರೀದಿಸಿ ತೆರಳುತ್ತಾರೆ ಎಂದು ವಿವರಣೆ ನೀಡಿದರು.

ಈ ವೇಳೆ ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಎಸ್.ಕೆ.ಮಂದಣ್ಣ, ನಿರ್ದೇಶಕರುಗಳಾದ ಕೊಲ್ಲಿರ ಗೋಪಿ ಚಿಣ್ಣಪ್ಪ, ಹೆಚ್.ಡಿ. ಶ್ರೀನಿವಾಸ್, ಕೆ.ಬಿ. ಉತ್ತಪ್ಪ, ಎಂ.ಟಿ. ಅಯ್ಯಪ್ಪ. ಪಿ.ಡಿ. ದಿನೇಶ್, ಟಿ.ಎಸ್. ಗಣಪತಿ, ಬಿ.ಪಿ. ದಿನೇಶ್, ಸಿ.ಜೆ. ರೂಪ, ಪಿ.ಎಸ್.ಗಂಗಮ್ಮ ಹಾಗೂ ಸಿಇಒ ಬಿ.ಎನ್. ಪ್ರದೀಪ್ ಇದ್ದರು.

-ಹೆಚ್.ಕೆ. ಜಗದೀಶ್