ವೀರಾಜಪೇಟೆ, ಏ. ೧೫: ವೀರಾಜಪೇಟೆಯ ಶ್ರೀ ಮಾರಿಯಮ್ಮ ದೇವಾಲಯ ಹಾಗೂ ಶ್ರೀ ಅಂಗಾಳ ಪರಮೇಶ್ವರಿ ದೇವಾಲಯದ ಹೆಸರು ಕೇಳದವರೇ ವಿರಳ. ವೀರಾಜಪೇಟೆಯ ಮುಕುಟಮಣಿಯಂತೆ ಶ್ರೀ ಮಾರಿಯಮ್ಮ ದೇವಿ ಇಲ್ಲಿ ವಿರಾಜಮಾನಳಾಗಿದ್ದಾರೆ. ಪಕ್ಕದಲ್ಲೇ ಶ್ರೀ ಅಂಗಾಳ ಪರಮೇಶ್ವರಿ ದೇವಿಯು ಸ್ಥಿತಳಾಗಿದ್ದು ಭಕ್ತರನ್ನು ಹರಸುತ್ತಿದ್ದಾಳೆ.

ವೀರಾಜಪೇಟೆಯ ಹೃದಯ ಭಾಗವಾದ ಗಡಿಯಾರ ಕಂಬದ ಬಳಿಯಿಂದ ಅಮ್ಮತ್ತಿ ರಸ್ತೆಯ ಮೇಲೆ ಕಣ್ಣು ಹಾಯಿಸುವಾಗ ನಮಗೆ ಮೇಲ್ಭಾಗದಲ್ಲಿ ನೆಲೆನಿಂತ ಶ್ರೀ ಮಾರಿಯಮ್ಮ ಹಾಗೂ ಅಂಗಾಳ ಪರಮೇಶ್ವರಿ ದೇವಿಯ ಗೋಪುರವೇ ಕಾಣಸಿಗುತ್ತದೆ. ವೀರಾಜಪೇಟೆಯಲ್ಲಿ ಯಾವುದೇ ಒಂದು ಕಾರ್ಯಕ್ರಮ ಜರುಗುವಾಗಲೂ, ಮೆರವಣಿಗೆಗಳು ಪ್ರಾರಂಭವಾಗಬೇಕಾದರೂ ಶ್ರೀ ಮಾರಿಯಮ್ಮ ದೇವರ ತಪ್ಪಲಿನಿಂದಲೇ ಪ್ರಾರಂಭವಾಗುತ್ತದೆ ಎಂದರೆ ತಪ್ಪಾಗಲಾರದು.

ಮಹಾ ಕುಂಭಾಭಿಷೇಕದ ಸಂಭ್ರಮ

ಶ್ರೀ ಮಾರಿಯಮ್ಮ ಮತ್ತು ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನ ಟ್ರಸ್ಟ್, ಸಾಧುಶೆಟ್ಟಿ ೨೪ ಮನೆ ತೆಲುಗು ಶೆಟ್ಟಿ ಸಂಘ, ತೆಲುಗು ಶೆಟ್ಟರ ಬೀದಿ ವೀರಾಜಪೇಟೆ ಇವರ ವತಿಯಿಂದ ಶ್ರೀ ದಕ್ಷಿಣ ಮಾರಿಯಮ್ಮ ದೇವಿಯ ಮಹಾ ಕುಂಭಾಭಿಷೇಕ ತಾ.೧೮ರ ಶನಿವಾರದಿಂದ ತಾ.೨೦ ರ ಸೋಮವಾರದವರೆಗೆ ನಡೆಯಲಿದೆ.

ಪ್ರತಿ ಶುಕ್ರವಾರ ಹಾಗೂ ಮಂಗಳವಾರ ವಿಶೇಷ ಪೂಜೆ-ಪುನಸ್ಕಾರಗಳು ನಡೆಯಲಿದ್ದು ಪ್ರಸಾದ ವಿನಿಯೋಗ ನಡೆಯುತ್ತದೆ. ವೀರಾಜಪೇಟೆ ಹಾಗೂ ಸುತ್ತಮುತ್ತಲ ಗ್ರಾಮಾಂತರ ಪ್ರದೇಶಗಳಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ. ವಿಶೇಷ ಪೂಜೆ ಸಲ್ಲಿಸುತ್ತಾರೆ. ನಂಬಿದವರಿಗೆ ಎಂದಿಗೂ ಮಾರಿಯಮ್ಮ ಕೈಬಿಡುವುದಿಲ್ಲ. ತಮ್ಮ ಇಷ್ಟ, ಕಷ್ಟಗಳನ್ನು ದೇವಿ ಪರಿಹರಿಸುತ್ತಾಳೆ ಎಂಬ ಅಚಲವಾದ ನಂಬಿಕೆ ಇದೆ.

ಪೂಜಾ ವಿವರಗಳು

ತಾ.೧೮ರ ಶನಿವಾರದಂದು ಸಂಜೆ ೬ ಗಂಟೆಗೆ ಗಣಪತಿ ಪೂಜೆ, ವಾಸ್ತು ಶಾಂತಿ, ಮೃತ್ ಸಂಗ್ರಹಣ, ಅಂಕುರಾರ್ಪಣೆ, ರಕ್ಷಾಬಂಧನ, ಪ್ರಥಮ ಕಾಲಯಾ ಪೂಜೆ, ಪ್ರಥಮ ಕಾಲ ಯಾಗಶಾಲಾ ಪ್ರವೇಶ, ಪೂರ್ಣಾಹುತಿ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ತಾ.೧೯ ರಂದು ಭಾನುವಾರ ಬೆಳಿಗ್ಗೆ ೮.೩೦ ಗಂಟೆಗೆ ವಿಘ್ನೇಶ್ವರ ಪೂಜೆ, ಶಿವಸೂರ್ಯ ಪೂಜೆ, ವಿಶೇಷ ಸಂಧಿ, ಎರಡನೇ ಕಾಲ ಯಾಗಪೂಜೆ, ಮೂಲ ಮಂತ್ರ, ಅಸ್ತçಮಂತ್ರ ಹೋಮ, ದ್ರವ್ಯಾಹುತಿ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ೬ ಗಂಟೆಗೆ ವಿನಾಯಕ ಪೂಜೆ, ಸೋಮಕುಂಭ ಪೂಜೆ, ದ್ರವ್ಯಾಹುತಿ, ಲಲಿತ ತ್ರಿಶದಿ ಪಾರಾಯಣ, ಮಹಾಪೂರ್ಣಾಹುತಿ, ಮಹಾ ಮಂಗಳಾರತಿ, ರಾತ್ರಿ ೧೦ ಗಂಟೆಗೆ ಯಂತ್ರ ಸ್ಥಾಪನೆ, ಅಷ್ಟಬಂಧನ ಪೂಜೆ, ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.

ತಾ.೨೦ ರಂದು ಬೆಳಿಗ್ಗೆ ೭.೩೦ ಗಂಟೆಗೆ ಗಣಪತಿ ಪೂಜೆ, ಸೂರ್ಯಪೂಜೆ, ತತ್ವರ್ಚನ, ಶಡದ್ವ ಹೋಮ, ಬಿಂಬಶುದ್ಧಿ, ಸ್ಪರ್ಶಾಹುತಿ, ನಾಡಿಸಂದಾನ, ದ್ರವ್ಯಾಹುತಿ, ಪೂರ್ಣಾಹುತಿ, ಮಹಾಪೂರ್ಣಾಹುತಿ, ಯಾತ್ರಾದಾನ, ಮಹಾಮಂಗಳಾರತಿ ನಡೆಯಲಿದೆ.

ಬೆಳಿಗ್ಗೆ ೯:೧೫ ರಿಂದ ೧೦.೧೫ ಗಂಟೆಗೆ ರೋಹಿಣಿ ನಕ್ಷತ್ರ ಮಿಥುನ ಲಗ್ನದಲ್ಲಿ ಗೋಪುರ ಕಲಶ ಕುಂಭಾಭಿಷೇಕ, ಶ್ರೀ ಗಣಪತಿ, ಶ್ರೀ ಸುಬ್ರಹ್ಮಣ್ಯ, ಶ್ರೀ ಮಾರಿಯಮ್ಮ ದೇವಿಗೆ ಕುಂಭಾಭಿಷೇಕ, ತದನಂತರ ಗೋಪೂಜೆ, ಮಹಾಭಿಷೇಕ, ಅಲಂಕಾರ ಪೂಜೆ, ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.

ಅನ್ನ ಛತ್ರ ನಿರ್ಮಾಣ

ಶ್ರೀ ದಕ್ಷಿಣ ಮಾರಿಯಮ್ಮ ದೇವಸ್ಥಾನದಲ್ಲಿ ವರ್ಷಪೂರ್ತಿ ಶುಕ್ರವಾರದಂದು ಅನ್ನಪ್ರಸಾದವನ್ನು ವಿನಿಯೋಗಿಸುತ್ತಾ ಬಂದಿದ್ದು ಸದರಿ ಅನ್ನಪ್ರಸಾದ ವಿನಿಯೋಗಿಸಲು ಅನ್ನ ಛತ್ರದ ಅವಶ್ಯಕತೆ ಇದ್ದು ಈಗಾಗಲೇ ಅನ್ನ ಛತ್ರದ ಕಾಮಗಾರಿಯನ್ನು ಕೂಡ ಪ್ರಾರಂಭಿಸಲಾಗಿದೆ. ಇದರ ಮೊತ್ತ ರೂ.೫೦ ಲಕ್ಷವಾಗಲಿದೆ ಎಂದು ಅಂದಾಜಿಸಲಾಗಿದೆ.

ಈ ಪುಣ್ಯ ಕಾರ್ಯಕ್ಕೆ ಧನಸಹಾಯ ನೀಡುವಂತೆ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ವಿನಂತಿಸಿಕೊAಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ೮೧೯೭೦೨೬೦೩೯, ೯೪೪೮೮೯೬೧೦೮, ೯೯೧೬೯೬೨೭೯೫ ಈ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ರಜಿತ ಕಾರ್ಯಪ್ಪ