ಮಡಿಕೇರಿ, ಏ.೧೫; ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳನ್ನಾಗಿ ಪದೋನ್ನತಿ ನೀಡಲು ಸರ್ವೋಚ್ಚ ನ್ಯಾಯಾಲಯ ಮೂವರನ್ನು ಶಿಫಾರಸು ಮಾಡಿದ್ದು, ಇವರು ಗಳಲ್ಲಿ ಕೊಡಗು ಮೂಲದವರಾದ ಕೆದಂಬಾಡಿ ಶಾಂತಿ ಗಣೇಶ್ ಅವರ ಹೆಸರು ಕೂಡ ಇದೆ.

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದಲ್ಲಿ ನಡೆದ ಕೊಲಿಜಿಯಂ ಸಭೆಯಲ್ಲಿ ರಾಜ್ಯದ ವಿಚಾರಣಾ ನ್ಯಾಯಾಲಯಗಳ ಮೂವರು ನ್ಯಾಯಾಧೀಶರನ್ನು ಹೈಕೋರ್ಟ್ ನ್ಯಾಯಾಧೀಶರಾಗಿ ಪದೋನ್ನತಿ ನೀಡುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.

ಕೊಡಗು ಜಿಲ್ಲೆಯ ಸುಂಟಿಕೊಪ್ಪ ಬಳಿಯ ಕೊಡಗರಹಳ್ಳಿ ನಿವಾಸಿಯಾದ ಶಾಂತಿ ಅವರು ಹಾನರರಿ ಕ್ಯಾಪ್ಟನ್ ದಿ. ಕೆದಂಬಾಡಿ ಗಣೇಶ್ ಹಾಗೂ ಹೊನ್ನಮ್ಮ ಅವರ ಪುತ್ರಿ. ಪತಿ ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗಣೇಶ್ ಕುರುವತ್ತಿ ಅವರೊಂದಿಗೆ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈ ಹಿಂದೆ ಬಳ್ಳಾರಿ ಜಿಲ್ಲಾ ಸಿವಿಲ್ ಜಡ್ಜ್ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದರು. ತಾ. ೧೫ರ ಪತ್ರಿಕೆಯಲ್ಲಿ ಶಾಂತಿ ಅವರು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿರುವುದಾಗಿ ತಪ್ಪಾಗಿ ಪ್ರಕಟಗೊಂಡಿತ್ತು.