ಪೊನ್ನಂಪೇಟೆ, ಏ.೧೫: ಈ ದೇಶದಲ್ಲಿ ಹುಟ್ಟಿದಂತಹ ಪ್ರತಿಯೊಬ್ಬ ಬಡವನಿಗೆ, ಪ್ರತಿಯೊಬ್ಬ ಶೋಷಿತನಿಗೆ, ಪ್ರತಿಯೊಬ್ಬ ಧ್ವನಿ ಇಲ್ಲದವನಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬದುಕು, ಅವರ ಜೀವನ ಚರಿತ್ರೆ ಸ್ಫೂರ್ತಿಯಾಗಬೇಕು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಹೇಳಿದರು.

ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ವೀರಾಜಪೇಟೆ ಪುರಸಭೆ ಹಾಗೂ ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೫ನೇ ಜನ್ಮದಿನಾಚರಣೆ ಮತ್ತು ಡಾ. ಬಾಬು ಜಗಜೀವನ್ ರಾಮ್ ಅವರ ೧೧೯ನೇ ಜನ್ಮದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಇಂದಿಗೂ ದೇಶದಲ್ಲಿ ಅಸ್ಪೃಶ್ಯತೆ ಜೀವಂತವಾಗಿರುವುದು ನೋವಿನ ಸಂಗತಿ, ಸಂವಿಧಾನ ಅಧ್ಯಯನ ಮಾಡಿದಾಗ ಮಾತ್ರ ಅದರ ಉದ್ದೇಶ ಮತ್ತು ಮಹತ್ವವನ್ನು ಅರ್ಥಮಾಡಿಕೊಳ್ಳಲು ಸಾಧ್ಯ.

ಸಮಾಜದ ಪ್ರತಿಯೊಬ್ಬರ ಮನಸ್ಸಿನ ಅಂತರಾಳದಲ್ಲಿ ಸಮಾನತೆಯ ಮನೋಭಾವ ಚಿಗುರೊಡೆದಾಗ ಮಾತ್ರ ಅಂಬೇಡ್ಕರ್ ಅವರು ದೇಶಕ್ಕಾಗಿ ಕೊಟ್ಟ ಕೊಡುಗೆ, ಅವರು ಮಾಡಿದ ತ್ಯಾಗಕ್ಕೆ ಅರ್ಥ ಸಿಗುತ್ತದೆ ಎಂದರು.

ಡಾ. ಬಾಬು ಜಗಜೀವನ್ ರಾಮ್ ಅವರು ಕೂಡ ನಮ್ಮ ದೇಶದ ಅಭಿವೃದ್ಧಿಗೆ ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ ಎಂದು ಇದೇ ಸಂದರ್ಭ ಪೊನ್ನಣ್ಣ ಹೇಳಿದರು.

ಮುಖ್ಯ ಭಾಷಣಕಾರರಾದ ವೀರಾಜಪೇಟೆ ಸರ್ವೋದಯ ಕಾಲೇಜಿನ ಪ್ರಾಧ್ಯಾಪಕ ಗಿರೀಶ್ ಹೆಚ್.ಆರ್ ಅವರು ಅಂಬೇಡ್ಕರ್ ಅವರ ಜೀವನ ಚರಿತ್ರೆಯ ಬಗ್ಗೆ ಮಾಹಿತಿ ನೀಡಿ, ಪ್ರಪಂಚದಾದ್ಯAತ ಹೆಚ್ಚು ಆಚರಣೆಗೊಳ್ಳುವ ಜಯಂತಿಗಳಲ್ಲಿ ಅಂಬೇಡ್ಕರ್ ಜಯಂತಿಯೇ ಪ್ರಮುಖವಾದದ್ದು. ಅಸ್ಪೃಶ್ಯತೆಯ ವಿರುದ್ಧ ಜೀವನಪೂರ್ತಿ ಹೋರಾಡಿದರೂ ಅದು ಸಂಪೂರ್ಣ ನಿರ್ಮೂಲನವಾಗದಿರುವುದು ವಿಷಾದಕರ. ಸಂವಿಧಾನವು ಎಲ್ಲಾ ಧರ್ಮಗಳಿಗೆ ಸಾಮಾನ್ಯವಾದ ಶಾಶ್ವತ ಗ್ರಂಥವಾಗಿದ್ದು, ಅದಕ್ಕೆ ಅಂಬೇಡ್ಕರ್ ಅವರೇ ಕಾರಣ ಎಂದು ಹೇಳಿದರು.

ಮತ್ತೊಬ್ಬರು ಭಾಷಣಕಾರರಾದ ಬಾಳೆಲೆ ವಿಜಯಲಕ್ಷಿö್ಮ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಜೆ. ಸೋಮಣ್ಣ ಅವರು ಡಾ. ಬಾಬು ಜಗಜೀವನ್ ರಾಮ್ ಅವರ ಜೀವನ ಚರಿತ್ರೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಮಿಕ ಸಚಿವರಾಗಿ ಕಾರ್ಮಿಕರಿಗೆ ನೀಡಬೇಕಾದ ಕನಿಷ್ಟ ವೇತನ ಹಾಗೂ ಇನ್ನಿತರ ಸುಧಾರಣೆಯನ್ನು ತಂದು ಕಾರ್ಮಿಕರ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮಗಳು, ಸಾರಿಗೆ ಸಚಿವರಾಗಿ ಸಾರಿಗೆ ವ್ಯವಸ್ಥೆಯನ್ನು ಸುಧಾರಣೆ, ಅಂಚೆ ಇಲಾಖೆ, ಟೆಲಿಫೋನ್ ವ್ಯವಸ್ಥೆ ಅಭಿವೃದ್ಧಿಗೊಳಿಸಿ, ರೈಲ್ವೆ ಇಲಾಖೆಯಲ್ಲಿ ಸುಧಾರಣೆ ತಂದ ಅಭಿವೃದ್ಧಿ ಹರಿಕಾರ ಬಾಬು ಜಗಜೀವನ್ ರಾಮ್ ಅವರು ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವಿವಿಧ ಸಂಘಟನೆ ಮುಖಂಡರಾದ ಪರಶುರಾಮ್ ಗೋಣಿಕೊಪ್ಪ, ಕೃಷ್ಣಪ್ಪ ಹುದಿಕೇರಿ, ಗಾಯತ್ರಿ ನರಸಿಂಹ, ರಮೇಶ್ ಮಾಯಮುಡಿ, ಹೆಚ್.ಜಿ. ಗೋಪಾಲ್, ಭಾಷಣಕಾರರದ ಡಾ.ಜೆ. ಸೋಮಣ್ಣ, ಗಿರೀಶ್ ಹೆಚ್. ಆರ್ ಮತ್ತು ಜನಪದ ಕಲಾವಿದ ಎಸ್. ಟಿ. ಗಿರೀಶ್ ಅವರನ್ನು ಸನ್ಮಾನಿಸಲಾಯಿತು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಪೊನ್ನಂಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನದ ಮುಂಭಾಗದಿAದ ಶಾಲಾ ಮಕ್ಕಳು, ವಿವಿಧ ಸಂಘಟನೆಗಳು ಮತ್ತು ಇಲಾಖೆಗಳ ಅಧಿಕಾರಿಗಳ ತಂಡ ಕರ್ನಾಟಕ ಪಬ್ಲಿಕ್ ಶಾಲೆ ವರೆಗೆ ಜಾಥಾ ತೆರಳಿದರು.

ಜೈ ಭೀಮ್ ಕಲಾ ತಂಡದವರು ನಾಡಗೀತೆ, ರೈತಗೀತೆ ಹಾಗೂ ಕ್ರಾಂತಿ ಗೀತೆಗಳನ್ನು ಹಾಡಿದರು.

ಈ ಸಂದರ್ಭ ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ವೀರಾಜಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪಿ.ವಿ. ಜಾನ್ಸನ್, ಪೊನ್ನಂಪೇಟೆ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಆಲೀರ ರಶೀದ್, ಪೊನ್ನಂಪೇಟೆ ತಹಶೀಲ್ದಾರ್ ಸಂಜನಾ ಸಿ.ಎಸ್, ವೀರಾಜಪೇಟೆ ತಹಶೀಲ್ದಾರ್ ಟಿ.ಸಿ. ಪ್ರವೀಣ್ ಕುಮಾರ್, ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಆಶಾ ಜೆ.ಬಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕುಶಾಲನಗರ ತಾಲೂಕು ಆಡಳಿತ

ಕುಶಾಲನಗರ, ಏ. ೧೫: ಕುಶಾಲನಗರ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಮತ್ತು ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ ಬಿ.ಆರ್ ಅಂಬೇಡ್ಕರ್ ಅವರ ೧೩೫ನೇ ಜನ್ಮದಿನಾಚರಣೆ ಸಮಾರಂಭ ನಡೆಯಿತು.

ಕುಶಾಲನಗರದ ಕಲಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಸಾಮಾಜಿಕ ಕ್ರಾಂತಿಯ ಹರಿಕಾರರಾದ, ನಡೆದಾಡುವ ವಿಶ್ವಕೋಶದಂತಿದ್ದ ಡಾ ಬಿ.ಆರ್ ಅಂಬೇಡ್ಕರ್ ಇಂದಿಗೂ ಮನೆಮನಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಮಹಾನ್‌ಚೇತನ ಎಂದು ಬಣ್ಣಿಸಿದರು. ಡಾ ಅಂಬೇಡ್ಕರ್ ಜೀವನ, ಪಾಂಡಿತ್ಯ, ಹೋರಾಟ ಪ್ರತಿಯೊಬ್ಬರಿಗೂ ಸದಾ ಆದರ್ಶವಾಗಬೇಕಿದೆ ಎಂದರು.

ಶಿಕ್ಷಣದ ಹಕ್ಕು ಪ್ರತಿಪಾದನೆ, ಸಾಮಾಜಿಕ ಬದಲಾವಣೆಗಳಿಗಾಗಿ ಹೋರಾಟ, ಸ್ವತಂತ್ರ ಭಾರತದ ಸಂವಿಧಾನಕರ್ತೃ ಡಾ ಅಂಬೇಡ್ಕರ್ ಅವರ ಚಿಂತನೆ ಇಂದಿಗೂ ಚಿರಸ್ಥಾಯಿಯಾಗಿದೆ ಎಂದರು.

ಡಿಎಸ್‌ಎಸ್ ಮುಖಂಡ ಕೆ.ಬಿ ರಾಜು ಅಂಬೇಡ್ಕರ್ ಅವರ ಜೀವನ ಚರಿತ್ರೆ, ಹೋರಾಟದ ಬಗ್ಗೆ ಮಾಹಿತಿ ಒದಗಿಸಿದರು. ಮುಂದಿನ ಪೀಳಿಗೆಗೆ ಅಂಬೇಡ್ಕರ್ ಅವರ ವಿಚಾರಧಾರೆ, ಚಿಂತನೆಗಳನ್ನು ಬಿತ್ತಬೇಕಿದೆ ಎಂದು ಕರೆ ನೀಡಿದರು.

ಶನಿವಾರಸಂತೆ ಪ್ರೌಢಶಾಲಾ ಶಿಕ್ಷಕ ಜಯಕುಮಾರ್ ಮುಖ್ಯ ಭಾಷಣ ಮಾಡಿದರು. ನಿವೃತ್ತ ಅರಣ್ಯಾಧಿಕಾರಿ ಸಿದ್ದಪ್ಪ, ಪ್ರಮುಖರಾದ ಅಬ್ದುಲ್ ರಜಾಕ್ ಮಾತನಾಡಿದರು.

ವೇದಿಕೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಗಿರೀಶ್, ವೃತ್ತ ನಿರೀಕ್ಷಕ ಪ್ರದೀಪ್, ಪತ್ರಕರ್ತ ರಘು ಹೆಚ್.ಎಂ, ದಲಿತ ಸಂಘಟನೆಗಳ ಪ್ರಮುಖರಾದ ದಾಮೋದರ್, ಹೆಚ್.ಟಿ ವಸಂತ, ಹೆಚ್.ಪಿ ಶಿವಕುಮಾರ್, ವಾಲ್ಮೀಕಿ ಸಮಾಜದ ಪ್ರಮುಖರಾದ ಕೆ.ಎನ್ ಅಶೋಕ್, ಗಂಗಾಧರ, ವಿವಿಧ ಇಲಾಖೆ ಅಧಿಕಾರಿಗಳಾದ ವೀರಣ್ಣ, ರಕ್ಷಿತ್, ಶ್ರೀದೇವಿ, ಶ್ರೀನಿವಾಸ್, ಮಧು ಮತ್ತಿತರರು ಇದ್ದರು.

ಅಂಗನವಾಡಿ, ಆಶಾ ಕಾರ್ಯಕರ್ತರು, ಕಂದಾಯ, ಪೊಲೀಸ್, ಮತ್ತಿತರ ಇಲಾಖೆ ಸಿಬ್ಬಂದಿ, ನೌಕರರು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಮುನ್ನ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಡಾ ಅಂಬೇಡ್ಕರ್ ಅವರ ಭಾವಚಿತ್ರ ಹೊತ್ತ ವಾಹನದ ಮೆರವಣಿಗೆ ನಡೆಯಿತು.