ಮಡಿಕೇರಿ, ಏ. ೧೪: ಗುರುಗಳು, ತರಬೇತುದಾರರು ಹೇಳಿಕೊಡುವುದು ಅರ್ಥವಾಗ ದಿದ್ದಲ್ಲಿ ಮತ್ತೆ ಕೇಳಿ ತಿಳಿದು ಕೊಳ್ಳಬೇಕೆಂದು ಭಾರತ ತಂಡದ ಕ್ಯಾಂಪ್ ಅನ್ನು ಪ್ರತಿನಿಧಿಸಿದ್ದ ವಾಂಡರ‍್ಸ್ ಸ್ಪೋರ್ಟ್ಸ್ ಕ್ಲಬ್‌ನ ಹಿರಿಯ ಹಾಕಿ ಆಟಗಾರ ಕೋಟೆರ ನಾಣಯ್ಯ ಮಕ್ಕಳಿಗೆ ಕಿವಿಮಾತು ಹೇಳಿದರು.

ವಾಂಡರ‍್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ. ಸಿ.ವಿ. ಶಂಕರ್ ಸ್ವಾಮಿ ಸ್ಮರಣಾರ್ಥ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಕ್ಕಳ ಉಚಿತ ಬೇಸಿಗೆ ಕ್ರೀಡಾ ಶಿಬಿರಕ್ಕೆ ಆಗಮಿಸಿ ತರಬೇತಿ ನೀಡಿ ಮಕ್ಕಳಿಗೆ ಹಿತವಚನ ನುಡಿದರು. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವವರಲ್ಲಿ ಏಕಾಗ್ರತೆ ಇರಬೇಕು, ಕಲಿಕೆಯಲ್ಲಿ ನಿಧಾನವಾದರೂ ಪರವಾಗಿಲ್ಲ, ಗೊತ್ತಿಲ್ಲದಿದ್ದಲ್ಲಿ ಹತ್ತು ಬಾರಿಯಾದರೂ ಸರಿ ಕೇಳಿ ತಿಳಿದುಕೊಳ್ಳಬೇಕು. ಹಾಕಿ ಆಡುವಾಗ ಎದುರಾಳಿಯ ಬಗ್ಗೆ ಗಮನವಿರಬೇಕು, ಸುಮ್ಮನೆ ಸಮಯ ಕಳೆಯಲು ಮೈದಾನಕ್ಕೆ ಬರಬಾರದು ಎಂದು ಹೇಳಿದರು. ಹಾಕಿ ಆಡುವ ವಿಧಾನದ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದರು.

ಈ ಸಂದರ್ಭದಲ್ಲಿ ಶಿಬಿರದ ಸಂಚಾಲಕ ಬಾಬು ಸೊಮಯ್ಯ, ತರಬೇತುದಾರರಾದ ಬೊಪ್ಪಂಡ ಶ್ಯಾಂ ಪೂಣಚ್ಚ, ಕಿರುಂದAಡ ಗಣೇಶ್, ಕುಡೆಕಲ್ ಸಂತೋಷ್, ಲೊಕೇಶ್ ನಾಯ್ಡು, ನಾಟೋಳಂಡ ಸುರೇಶ್, ಕರವಂಡ ಕಿರಣ್ ಇದ್ದರು.