ಐಗೂರು, ಏ. ೧೩: ಕಾಜೂರು ಸರಕಾರಿ ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ ಎಸ್ಡಿಎಂಸಿ ಸದಸ್ಯೆ ವಸಂತಿ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಶಿಕ್ಷಕಿ ಸರಳಕುಮಾರಿ ಮಾತನಾಡಿ, ಪೋಷಕರು ಮತ್ತು ಗ್ರಾಮಸ್ಥರು ನೀಡಿದ ಸಹಕಾರದಿಂದ ಆಂಗ್ಲ ಮಾಧ್ಯಮದ ತರಗತಿ ಯಶಸ್ವಿಯಾಗಿ ಮುಂದುವರಿಯುತ್ತಿದೆ. ಈಗಾಗಲೇ ಮುಂದಿನ ಸಾಲಿನ ಆಂಗ್ಲ ಮಾಧ್ಯಮದ ಹೆಚ್ಚಿನ ಬೋಧನಾ ತರಬೇತಿಯನ್ನು ಶಾಲಾ ಶಿಕ್ಷಕರು ಪಡೆಯುತ್ತಿದ್ದಾರೆ. ಅತ್ಯುತ್ತಮ ಎಸ್ಡಿಎಂಸಿ ಪ್ರಶಸ್ತಿಯನ್ನು ಕಾಜೂರು ಶಾಲೆಗೆ ಲಭಿಸಿದ್ದ ಹಿನ್ನೆಲೆ ಐಗೂರು ವ್ಯಾಪ್ತಿಯ ಪೋಷಕರು ಹೆಚ್ಚಿನ ವಿದ್ಯಾರ್ಥಿಗಳನ್ನು ಶಾಲೆಗೆ ದಾಖಲಿಸುತ್ತಿದ್ದಾರೆ. ದೂರದಿಂದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಸಾರಿಗೆ ಭತ್ಯೆ ನೀಡಲಾಗುತ್ತಿದೆ. ಕಾಫಿ ಬೆಳೆಗಾರರಾದ ಕೆ.ಪಿ. ರಾಯ್ ಅವರು ರೂ. ೨೨ ಸಾವಿರ ವೆಚ್ಚದ ತಂತಿಬೇಲಿಯನ್ನು ಶಾಲಾ ಆವರಣಕ್ಕೆ ನಿರ್ಮಿಸಿ ಕೊಟ್ಟಿದ್ದಾರೆ ಎಂದರು. ಒಂದರಿAದ ೭ನೇ ತರಗತಿವರೆಗೆ ಹೆಚ್ಚು ಹಾಜರಾತಿ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಿ ಸ್ವರ್ಣ ಸ್ವಾಗತಿಸಿ, ವಂದಿಸಿದರು.