ವೀರಾಜಪೇಟೆ, ಏ. ೧೩: ನಮಗೆಲ್ಲರಿಗೂ ದೇಶ ಮೊದಲು, ನಂತರ ಪಕ್ಷ, ತದನಂತರ ವ್ಯಕ್ತಿ. ಈ ಉದಾತ್ತ ಘೋಷವಾಕ್ಯದೊಂದಿಗೆ ಮುನ್ನಡೆಯುವ ವಿಶ್ವದ ಏಕೈಕ ಪಕ್ಷವೆಂದರೆ ಅದು ಭಾರತೀಯ ಜನತಾ ಪಾರ್ಟಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಪ್ರಶಿಕ್ಷಣ ಮಹಾಭಿಯಾನದ ಮೈಸೂರು ವಿಭಾಗೀಯ ಸಂಚಾಲಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.
ಅಮ್ಮತ್ತಿಯ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ, ವೀರಾಜಪೇಟೆ ಮಂಡಲ ಮಟ್ಟದ ಪ್ರಶಿಕ್ಷಣ ವರ್ಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬಿಜೆಪಿ ಪಕ್ಷ ಇತರ ರಾಜಕೀಯ ಪಕ್ಷಗಳಿಗಿಂತ ಭಿನ್ನವಾಗಿದೆ. ಸಂಘಟನೆ ನಿರ್ಮಾಣದಿಂದ ರಾಷ್ಟç ನಿರ್ಮಾಣವು ಪ್ರಶಿಕ್ಷಣದ ಮುಖ್ಯ ಗುರಿ. ವ್ಯಕ್ತಿ ನಿಮಾರ್ಣದ ಮೂಲಕ ಸಂಘ ನಿಮಾರ್ಣ, ಸಂಘದ ಮೂಲಕ ರಾಷ್ಟç ನಿಮಾರ್ಣ ಮಾಡುವುದೇ ಬಿಜೆಪಿ ಪಕ್ಷದ ಮೂಲ ಗುರಿ. ಕಾರ್ಯಕರ್ತನಲ್ಲಿ ವೈಚಾರಿಕ ಬದ್ಧತೆ ಬೆಳೆಸುವುದು, ಪಕ್ಷದ ಕಾರ್ಯವೈಖರಿ ತಿಳಿಸುವುದು, ಕಾರ್ಯಕರ್ತರ ನಡತೆಯಲ್ಲಿ ಶ್ರೇಷ್ಠತೆ ರೂಪಿಸುವುದು ಮಾತ್ರವಲ್ಲದೇ ಪದಾಧಿಕಾರಿ, ಕಾರ್ಯಕರ್ತನಿಗೆ ಪಕ್ಷದ ವಿಕಾಸ-ಇತಿಹಾಸ ತಿಳಿಸಿ ಕೊಡಲಾಗುವುದು. ಕಾರ್ಯಕರ್ತರಲ್ಲಿ ಸಮರ್ಥ ಮತ್ತು ದಕ್ಷ ವೈಚಾರಿಕ ಬದ್ಧತೆ ಬೆಳೆಸುವುದು, ಸಾಮಾಜಿಕ ಸಂವೇದನೆ, ಜವಾಬ್ದಾರಿ ಮೂಡಿಸುವುದೂ ಕೂಡ ಪ್ರಶಿಕ್ಷಣ ವರ್ಗದ ಧ್ಯೇಯ ಎಂದು ತಿಳಿಸಿದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ನಿತಿನ್ ನಬೀನ್ ಅವರು ರಾಷ್ಟಿçÃಯ ಅಧ್ಯಕ್ಷರಾದ ತಕ್ಷಣ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಬಿಜೆಪಿ ಸಂಘಟನಾ ಪರ್ವ ಪ್ರಾರಂಭವಾಗಿದೆ. ಸದಸ್ಯತ್ವ ಅಭಿಯಾನ, ಸಕ್ರಿಯ ಸದಸ್ಯರ ಅಭಿಯಾನ, ಬೂತ್, ಮಂಡಲ, ಜಿಲ್ಲಾಧ್ಯಕ್ಷರಿಂದ ರಾಷ್ಟಿçÃಯ ಅಧ್ಯಕ್ಷರವರೆಗೆ ಸಂಘಟನಾ ಪರ್ವ ನಡೆಯುತ್ತದೆ ಎಂದು ವಿವರಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಮಾತನಾಡಿ, ಭಾರತೀಯ ಜನತಾ ಪಕ್ಷ ಶಿಸ್ತಿಗೆ ಹೆಸರಾದ ಪಕ್ಷವಾಗಿದ್ದು, ಕಾರ್ಯಕರ್ತರಿಗೆ ಮೊದಲ ಪಾಠವಾಗಿ ಶಿಸ್ತು ಕಲಿಸಲಾಗುತ್ತದೆ. ಇತರ ರಾಜಕೀಯ ಪಕ್ಷಗಳಿಗಿಂತ ಸಿದ್ಧಾಂತ ಮತು ಕಾರ್ಯವೈಖರಿಯಲ್ಲಿ ವಿಭಿನ್ನವಾಗಿದೆ. ಇದನ್ನು ಕಾರ್ಯಕರ್ತರು ಮೊದಲು ಅರ್ಥಮಾಡಿಕೊಳ್ಳಬೇಕು. ಬಿಜೆಪಿ ಕಾರ್ಯಕರ್ತರು ಕೇವಲ ರಾಜಕೀಯ ಲಾಭಕ್ಕಾಗಿ ಕೆಲಸ ಮಾಡುವವರಲ್ಲ. ಬದಲಾಗಿ, ಸಮಾಜದ ಪ್ರತಿಯೊಂದು ಹಂತದಲ್ಲೂ ಜನರ ಸೇವೆ ಮಾಡಲು ಸದಾ ಸಿದ್ಧರಿರಬೇಕು. ಪ್ರತಿಯೊಬ್ಬ ಕಾರ್ಯಕರ್ತನು ಎಲ್ಲೇ ಇರಲಿ. ಪಕ್ಷದ ತತ್ವಗಳನ್ನು ಜನರಿಗೆ ತಲುಪಿಸಬೇಕು. ತರಬೇತಿಯ ಪ್ರತಿ ವಿಷಯವನ್ನೂ ಮನದಟ್ಟು ಮಾಡಿಕೊಳ್ಳಬೇಕು ಎಂದರಲ್ಲದೆ ಬಿಜೆಪಿ ನಡೆದು ಬಂದ ಹಾದಿ ಬಗ್ಗೆ ವಿವರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಸಂಘಟನಾತ್ಮಕ ವಿಚಾರ, ತತ್ವ ಸಿದ್ದಾಂತಕ್ಕೆ ಒಳಪಟ್ಟ ವಿಚಾರಗಳನ್ನು ಪ್ರಶಿಕ್ಷಣ ವರ್ಗದಲ್ಲಿ ಕಲಿಯಬಹುದಾಗಿದೆ. ನೀತಿ, ಸಿದ್ಧಾಂತ, ಶಿಸ್ತು, ಜವಾಬ್ದಾರಿಗಳನ್ನು ಕಲಿಸಲಾಗುತ್ತದೆ. ಇದರಲ್ಲಿ ಪಾಲ್ಗೊಂಡವರು ಪಕ್ಷ ಸಂಘಟನೆಗಾಗಿ ಬೂತ್ ಮಟ್ಟದಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ವೀರಾಜಪೇಟೆ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಪ್ರಶಿಕ್ಷಣ ಅಭಿಯಾನದ ಸಂಚಾಲಕ ನೆಲ್ಲಿರ ಚಲನ್, ಮಂಗಳೂರು ವಿಭಾಗದ ಉಸ್ತುವಾರಿ ಬಿ.ಬಿ. ಭಾರತೀಶ್, ಪ್ರಧಾನ ಕಾರ್ಯದರ್ಶಿ ಕುಟ್ಟಂಡ ಅಜಿತ್ ಕರುಂಬಯ್ಯ, ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಉಪಸ್ಥಿತರಿದ್ದರು.