ಪೊನ್ನಂಪೇಟೆ, ಏ. ೧೩: ಕಳೆದ ೭೦ ವರ್ಷಗಳಿಂದ ಮೂಲೆಗುಂಪಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಂಡು ೨೦೨೫ರ ಅಕ್ಟೋಬರ್ನಲ್ಲಿ ಪೊನ್ನಂಪೇಟೆ ತಾಲೂಕಿನ ಚಿಕ್ಕಮುಂಡೂರು, ತೂಚಮಕೇರಿ, ಮುಗುಟಗೇರಿ ಹಾಗೂ ನಡಿಕೇರಿ ಗ್ರಾಮಸ್ಥರ ಸಹಕಾರದಿಂದ ಜೀರ್ಣೋದ್ಧಾರಗೊಂಡ ಚಿಕ್ಕಮಂಡೂರಿನಲ್ಲಿರುವ ಗುಧ್ರೋಡೆ ಮಂದ್ನ ವಿಶೇಷ ಸಭೆಯನ್ನು ತಾ. ೧೦ ರಂದು ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಧ್ರೋಡೆ ಮಂದ್ ಸಮಿತಿ ಅಧ್ಯಕ್ಷ ಕೋಳೆರ ನರೇಂದ್ರ ವಹಿಸಿದ್ದರು. ಇತ್ತೀಚೆಗೆ ಮೃತರಾದ ಗುಧ್ರೋಡೆ ಮಂದ್ ಸಮಿತಿ ಸದಸ್ಯರಾಗಿದ್ದ ಚೀರಂಡ ಕಂದಾ ಸುಬ್ಬಯ್ಯ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಕೊಡವರು ಕೊಡಗಿನ ನಿಜವಾದ ಮೂಲ ನಿವಾಸಿಗಳು. ಮಣ್ಣಿನಲ್ಲಿ ಅನಾದಿಕಾಲದಿಂದಲೂ ನೆಲೆ ನಿಂತಿರುವ ಒಲೆ, ಒಕ್ಕ, ಪಟ್ಟಿ, ಊರ್, ಕೇರಿ, ಮಂದ್, ಕೊಂಬುಗಳೇ ಕೊಡವರು ಇಲ್ಲಿನ ಮೂಲ ನಿವಾಸಿಗಳು ಎನ್ನುವುದಕ್ಕೆ ಪ್ರಮುಖ ಸಾಕ್ಷಿ ಎಂದು ಹೇಳಿದರು.
ಮತ್ತೋರ್ವ ಅತಿಥಿ ಯುನೈಟೆಡ್ ಕೊಡವ ಆರ್ಗನೈಜೇಷನ್ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ ಈಗಿನ ಕಾಲಘಟ್ಟದಲ್ಲಿ ನಮ್ಮ ಮಕ್ಕಳಿಗೆ ದೂರದರ್ಶನದಲ್ಲಿ ಕಾಣುವ ಕಾರ್ಟೂನ್ ನ ಪಾತ್ರಗಳನ್ನೇ ಹೀರೋಗಳಾಗಿ ನಾವೆಲ್ಲಾ ಬಿಂಬಿಸಿದ್ದೇವೆ. ನಮ್ಮ ಕೊಡವ ಸಾಧಕರನ್ನು ಹೀರೋಗಳಾಗಿ ನಮ್ಮ ಮಕ್ಕಳಿಗೆ ಮನವರಿಕೆ ಮಾಡಿಕೊಡುವ ಅನಿವಾರ್ಯತೆ ಎದುರಾಗಿದೆ. ಕೊಡವಾಮೆ ಎನ್ನುವುದು ಕೇವಲ ತೋರಿಕೆಗೆ ಮಾತ್ರ ಸೀಮಿತ ಆಗಬಾರದು. ನಮ್ಮ ಪೂರ್ವಿಕರು ಉಳಿಸಿದ ಪದ್ದತಿ ಪರಂಪರೆಯನ್ನು ಮುಂದಿನ ಪೀಳಿಗೆಗೆ ಮನದಟ್ಟು ಮಾಡುವ ಮೂಲಕ ಕೊಡವಾಮೆಯನ್ನು ಉಳಿಸಬೇಕು ಎಂದು ಹೇಳಿದರು. ಕೊಡವರ ಅಸ್ತಿತ್ವ ನಮ್ಮ ಮಂದ್ ಮಾನಿಯಲ್ಲಿ ಅಡಗಿದೆ.ಕೊಡಗು ದೇಶ ಅಸ್ತಿತ್ವಕ್ಕೆ ಬರುವಾಗಲೇ ಕೊಡವರು ಇದ್ದರು. ಮಂದ್ಗೆ ಅದರದ್ದೇ ಆದ ಮಹತ್ವವಿದ್ದು, ದೇವಸ್ಥಾನಕ್ಕೆ ಇರುವ ದೈವ ಶಕ್ತಿ ಇದೆ. ಹಿಂದಿನ ಕಾಲದಲ್ಲಿ ಊರಿನ ತಕ್ಕ ಮುಖ್ಯಸ್ಥರು ಮಂದ್ ನಲ್ಲಿ ನಿಂತು ದೇವರಲ್ಲಿ ಪ್ರಾರ್ಥನೆ ಮಾಡಿ ಬೇಡಿಕೆ ಇಟ್ಟರೆ ಅದು ಈಡೇರುತ್ತಿತ್ತು ಇದಕ್ಕೆ ಹಲವಾರು ಉದಾಹರಣೆಗಳಿವೆ. ಕೊಡವರ ಮಂದ್ ಮಾನಿಗಳಲ್ಲಿ ರಾಜಕೀಯ ಪ್ರವೇಶ ಆಗಿರುವುದು ಬೇಸರದ ಸಂಗತಿಯಾಗಿದೆ. ರಾಜಕೀಯವನ್ನು ದೂರ ಇಟ್ಟರೆ ಮಾತ್ರ ಕೊಡವಾಮೆ ಮತ್ತು ಕೊಡವರ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ. ಮಂದ್ನಲ್ಲಿ ಕೊಡವ ಆಟ್, ಪಾಟ್, ಪದ್ದತಿಯನ್ನು ಚಾಚೂ ತಪ್ಪದೆ ಆಚರಿಸಿದರೆ ಕೊಡವರ ಮಾನಸಿಕತೆ, ಆರೋಗ್ಯ ಮತ್ತು ಅಭಿವೃದ್ಧಿ ಖಂಡಿತವಾಗಿಯೂ ಏಳಿಗೆ ಕಾಣಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಅಂಜಿಕೇರಿನಾಡ್ ತಕ್ಕ ಮುಖ್ಯಸ್ಥ ಚೆಕ್ಕೇರ ರಾಜೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಗುಧ್ರೋಡೆ ಮಂದ್ ತಕ್ಕ ಮುಖ್ಯಸ್ಥ ಕೋಳೆರ ನರೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಪತ್ರಕರ್ತ, ಸಾಹಿತಿ ಮಾಣಿಪಂಡ ಸಂತೋಷ್ ತಮ್ಮಯ್ಯ, ಮುಗುಟಗೇರಿ ತಕ್ಕ ಮುಖ್ಯಸ್ಥ ಮಲಚೀರ ಬೋಜಪ್ಪ, ಕಳ್ಳಿಚಂಡ ರಾಬಿನ್, ಚೆಪ್ಪುಡಿರ ಸುಜು, ಆಲೇಮಾಡ ನವೀನ್ ದೇವಯ್ಯ, ಕಳ್ಳಿಚಂಡ ನಂಜಪ್ಪ, ಐನಂಡ ತಮ್ಮಯ್ಯ, ಕಾರ್ಯದರ್ಶಿ ಮುದ್ದಿಯಡ ಜೀವನ್ ನಡಿಕೇರಿ, ಮುಗುಟಗೇರಿ, ಚಿಕ್ಕ ಮುಂಡೂರು ಹಾಗೂ ತೂಚಮಕೇರಿ ಗ್ರಾಮಸ್ಥರು ಹಾಜರಿದ್ದರು.