ಮಡಿಕೇರಿ, ಏ. ೧೩: ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಇದೇ ಪ್ರಥಮ ಬಾರಿಗೆ ಸೋಮವಾರಪೇಟೆಯ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಆಯೋಜಿಸಿರುವ ಯಿಫಾ ಹಾಕಿ ಚಾಂಪಿಯನ್ ಟ್ರೋಫಿ ಕ್ರೀಡಾಕೂಟದ ಲೋಗೋ ಹಾಗೂ ಟ್ರೋಫಿಗಳ ಅನಾವರಣ ಕಾರ್ಯಕ್ರಮ ಮಡಿಕೇರಿಯ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.
ಲೋಗೋವನ್ನು ಅನಾವರಣ ಮಾಡಿ ಮಾತನಾಡಿದ ಜಿಲ್ಲಾ ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು, ಕೊಡಗು ಜಿಲ್ಲೆ ಕ್ರೀಡೆಯ ತವರು. ಇಂತಹ ನೆಲದಲ್ಲಿ ಪ್ರತಿಷ್ಠಿತ ತಂಡಗಳ ನಡುವೆ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯನ್ನು ಆಯೋಜಿಸಿರುವುದು ಶ್ಲಾಘನೀಯ. ರಾಜ್ಯ ಮಟ್ಟದ ಹಾಕಿ ಕ್ರೀಡಾಕೂಟಕ್ಕೆ ಜಿಲ್ಲಾಡಳಿತದಿಂದ ಬೇಕಾಗುವ ಅಗತ್ಯ ನೆರವು ಒದಗಿಸಲಾಗುವುದು ಎಂದರು. ಕ್ರೀಡೆಗಳು ಶಿಸ್ತು, ಆರೋಗ್ಯ ಹಾಗೂ ಸಾಮರಸ್ಯವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಜಿಲ್ಲೆಯ ಎಲ್ಲಾ ಭಾಗದಲ್ಲೂ ಕ್ರೀಡಾಕೂಟಗಳು ನಡೆಯಬೇಕು, ಪ್ರೋತ್ಸಾಹ ನೀಡಬೇಕು ಎಂದು ಆಶಿಸಿದರಲ್ಲದೇ, ಹಾಕಿ ಟೂರ್ನಮೆಂಟ್‌ನ ಯಶಸ್ಸಿಗೆ ಹಾರೈಸಿದರು.
ಟ್ರೋಫಿಗಳನ್ನು ಅನಾವರಣ ಮಾಡಿದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ. ವಿಸ್ಮಯಿ ಚಕ್ರವರ್ತಿ ಅವರು, ನಮ್ಮ ಇಲಾಖೆಯಿಂದ ಹಾಕಿ ಪಂದ್ಯಾವಳಿಗೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ಒದಗಿಸಲಾಗುವುದು. ಸೋಮವಾರಪೇಟೆಯ ಹಾಕಿ ಟರ್ಫ್ ಅನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಇಂತಹ ಪಂದ್ಯಾವಳಿಗಳು ನಿರಂತರವಾಗಿ ನಡೆಯಬೇಕು. ಟರ್ಫ್ ಬಳಕೆಗೆ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಕ್ರೀಡಾಪಟುಗಳು ಮೈದಾನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಾಕಿ ಕೂರ್ಗ್ನ ಕಾರ್ಯದರ್ಶಿ ಚೇತನ್ ಮಾತನಾಡಿ, ಕೊಡಗಿನಲ್ಲಿ ೨೫ ವರ್ಷಗಳ ನಂತರ ರಾಜ್ಯಮಟ್ಟದ ಹಾಕಿ ಪಂದ್ಯಾವಳಿ ಆಯೋಜನೆಯಾಗುತ್ತಿರುವುದು ಶ್ಲಾಘನೀಯ. ಹಾಕಿ ಕ್ರೀಡೆಗೆ ಹಾಕಿ ಕೂರ್ಗ್ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದೆ. ಪಂದ್ಯಾವಳಿಗೆ ಅಗತ್ಯವಿರುವ ತೀರ್ಪುಗಾರರು, ಆಟಗಾರರನ್ನು ಹಾಕಿ ಕೂರ್ಗ್ ನೀಡಲಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಶ್ರೀನಿಧಿ ಲಿಂಗಪ್ಪ ಮಾತನಾಡಿ, ಕೃಷಿ ಕ್ಷೇತ್ರದ ಜಾಗೃತಿಯೊಂದಿಗೆ ಸಾಮಾಜಿಕ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಯಿಫಾ ಸಂಘಟನೆಯು ಇದೇ ಪ್ರಥಮವಾಗಿ ರಾಜ್ಯಮಟ್ಟದ ಹಾಕಿ ಕ್ರೀಡಾಕೂಟ ಆಯೋಜಿಸಿದೆ. ಕೃಷಿ ಮತ್ತು ಕ್ರೀಡೆ ಕೊಡಗಿನ ಮಣ್ಣಿನಲ್ಲಿ ಬೆರೆತಿದೆ. ಯುವ ಆಟಗಾರರಿಗೆ ಪ್ರೋತ್ಸಾಹ, ಹಾಕಿ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು.
ಸೋಮವಾರಪೇಟೆ ಟರ್ಪ್ ಹಾಕಿ ಮೈದಾನದಲ್ಲಿ ಮೇ ೭ ರಿಂದ ೧೦ರ ವರೆಗೆ ನಡೆಯಲಿರುವ ಕ್ರೀಡಾಕೂಟದಲ್ಲಿ ರಾಜ್ಯಮಟ್ಟದ ಪ್ರತಿಷ್ಠಿತ ತಂಡಗಳಾದ ಕೆನರಾ ಬ್ಯಾಂಕ್, ಕರ್ನಾಟಕ ಸ್ಟೇಟ್ ಪೊಲೀಸ್, ಎಜಿಓಆರ್.ಸಿ., ಸೌತ್ ವೆಸ್ಟರ್ನ್ ರೈಲ್ವೇಸ್, ಕಸ್ಟಮ್ಸ್, ಡಿವೈಇಎಸ್, ಸೌತರ್ನ್ ಕಮಾಂಡ್ ಹಾಗೂ ಆತಿಥೇಯ ಯಿಫಾ ತಂಡಗಳು ಭಾಗವಹಿಸುತ್ತಿವೆ ಎಂದು ಹೇಳಿದರು.
ಸಂಘಟನೆಯ ಉಪಾಧ್ಯಕ್ಷ ಹರ್ಷಿತ್ ಶಿವಪ್ಪ ಮಾತನಾಡಿ, ಪಂದ್ಯಾಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ತಂಡಕ್ಕೆ ರೂ. ೨ ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ.೧ ಲಕ್ಷ ನಗದು ಹಾಗೂ ಟ್ರೋಫಿ ನೀಡಲಾಗುವುದು. ಇದರೊಂದಿಗೆ ವೈಯಕ್ತಿಕ ವಿಭಾಗದಲ್ಲಿಯೂ ಪ್ರಶಸ್ತಿಗಳನ್ನು ವಿತರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಂಘಟನೆಯ ಸಲಹೆಗಾರ ವಿಜಯ್ ಹಾನಗಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕಾಫಿ ಮಂಡಳಿ ಅಧಿಕಾರಿ ಲಕ್ಷಿö್ಮÃಕಾಂತ್ ಇದ್ದರು. ಯಿಫಾ ಸಂಘಟನೆಯ ಕಾರ್ಯದರ್ಶಿ ಸಜನ್ ಮಂದಣ್ಣ, ಖಜಾಂಚಿ ಮೋಹಿತ್ ತಿಮ್ಮಯ್ಯ, ಕ್ರೀಡಾಕೂಟ ಸಂಯೋಜಕ ಅಭಿಷೇಕ್ ಗೋವಿಂದಪ್ಪ, ಸಂಭ್ರಮ್, ಪದಾಧಿಕಾರಿಗಳಾದ ರಕ್ಷಿತ್, ಆದರ್ಶ್ ತಮ್ಮಯ್ಯ, ಜೀವನ್, ವಿನಯ್ ಕುಶಾಲಪ್ಪ, ಸಮರ್ಥ್, ಚರಣ್, ಚಿರಂಜೀವಿ, ವಿಕಾಸ್, ಪ್ರದೀಪ್, ಅನಂತ್, ಜಯಕೀರ್ತಿ, ಚತುರ್ಥ ಸೇರಿದಂತೆ ಸಂಘದ ಸದಸ್ಯರುಗಳು ಇದ್ದರು.