ಪೊನ್ನಂಪೇಟೆ, ಏ. ೧೩: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ೩ ನೇ ವರ್ಷದ ಟಿ ೨೦ ಮಾದರಿಯ ಕೊಡವ ಲೆದರ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ ನ ನಾಲ್ಕನೇ ದಿನದಾಟದಲ್ಲಿ ಅಂಜಿಗೇರಿ ನಾಡ್ ತಂಡ ಸತತ ೩ ನೇ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್ ಹಂತಕ್ಕೆ ಪ್ರವೇಶ ಪಡೆದಿದೆ. ಕೊಡವ ರೈಸಿಂಗ್ ಸ್ಟಾರ್ಸ್ ಮೊದಲ ಜಯಗಳಿಸಿತು.

ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡ ಕೊಡವ ರೈಸಿಂಗ್ ಸ್ಟಾರ್ಸ್ ತಂಡ ಟೀಮ್ ಲೆವರೇಜ್ ಗೆ ಬ್ಯಾಟಿಂಗ್ ಅವಕಾಶ ನೀಡಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಲೆವರೇಜ್ ನಿಗದಿತ ೨೦ ಓವರ್ ಗಳಲ್ಲಿ ೭ ವಿಕೆಟ್ ಕಳೆದುಕೊಂಡು ೧೮೦ ರನ್‌ಗಳ ಮೊತ್ತ ಕಲೆಹಾಕಿ, ಕೊಡವ ರೈಸಿಂಗ್ ಸ್ಟಾರ್ಸ್ ತಂಡಕ್ಕೆ ೧೮೧ ರನ್‌ಗಳ ಗುರಿ ನೀಡಿತು. ಪೂವಯ್ಯ ೫೧ ಎಸೆತಗಳಲ್ಲಿ ಅಮೋಘ ೯೦ ರನ್ ಸಿಡಿಸಿದರು. ಕೊಡವ ರೈಸಿಂಗ್ ಸ್ಟಾರ್ಸ್ ಪರ ಯತೀಶ್ ೨ ವಿಕೆಟ್ ಪಡೆದರು. ೧೮೧ ರನ್‌ಗಳ ಗುರಿ ಬೆನ್ನಟ್ಟಿದ ಕೊಡವ ರೈಸಿಂಗ್ ಸ್ಟಾರ್ಸ್ ೧೮.೧ ಓವರ್‌ಗಳಲ್ಲಿ ೭ ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿ ಜಯಭೇರಿ ಬಾರಿಸಿತು. ಅನ್ಸುಲ್ ಮಾಳೇಟಿರ ೨೯ ಎಸೆತಗಳಲ್ಲಿ ೫೬ ರನ್ ಗಳಿಸಿ ಮಿಂಚಿದರು. ಟೀಮ್ ಲೆವರೇಜ್ ಪರ ಕೇಕಡ ದೇವಯ್ಯ ೨ ವಿಕೆಟ್ ಪಡೆದರು. ಕೊಡವ ರೈಸಿಂಗ್ ಸ್ಟಾರ್ಸ್ನ ಅನ್ಸುಲ್ ಮಾಳೇಟಿರ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು. ಅಂಜಿಗೇರಿ ನಾಡ್ ಮತ್ತು ಕೂರ್ಗ್ ಬ್ಲಾಸ್ಟರ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಕೂರ್ಗ್ ಬ್ಲಾಸ್ಟರ್ಸ್ ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಅಂಜಿಗೇರಿ ನಾಡ್ ನಿಗದಿತ ೨೦ ಓವರ್ ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೧೯೮ ರನ್‌ಗಳ ಉತ್ತಮ ಮೊತ್ತ ಕಲೆ ಹಾಕಿತು. ಮುಂಡAಡ ಪವನ್ ಉತ್ತಪ್ಪ ೩೦ ಎಸೆತಗಳಲ್ಲಿ ೫೩ ರನ್ ಗಳಿಸಿದರು. ಕೂರ್ಗ್ ಬ್ಲಾಸ್ಟರ್ಸ್ ಪರ ರತನ್ ಮಂದಪ್ಪ ೩ ವಿಕೆಟ್ ಪಡೆದರು. ಗೆಲ್ಲಲು ೧೯೯ ರನ್‌ಗಳ ಗುರಿ ಬೆನ್ನಟ್ಟಿದ ಕೂರ್ಗ್ ಬ್ಲಾಸ್ಟರ್ಸ್ ತಂಡ ನಿಗದಿತ ಓವರ್‌ಗಳಲ್ಲಿ ೮ ವಿಕೆಟ್ ಕಳೆದುಕೊಂಡು ೧೧೬ ರನ್ ಗಳಿಸಿ ೮೨ ರನ್‌ಗಳಿಂದ ಸೋಲೊಪ್ಪಿಕೊಂಡಿತು. ಕರುಂಬಯ್ಯ ಎಂ.ಕೆ ೧೬ ಎಸೆತಗಳಲ್ಲಿ ೨೯ ರನ್ ಗಳಿಸಿದರು. ದಮನ್ ದೇವಯ್ಯ ೨ ವಿಕೆಟ್ ಗಳಿಸಿದರು. ಅಂಜಿಗೇರಿ ನಾಡ್‌ನ ಪವನ್ ಉತ್ತಪ್ಪ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು. - ಚನ್ನನಾಯಕ