ಸೋಮವಾರಪೇಟೆ, ಏ. ೧೩: ಸಮೀಪದ ಅಬ್ಬೂರುಕಟ್ಟೆ ಸರ್ಕಾರಿ ಶಾಲಾ ಮೈದಾನದಲ್ಲಿ ಅಬ್ಬೂರುಕಟ್ಟೆ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಹೊಸಳ್ಳಿ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.
ಹೊಸಳ್ಳಿ ಮತ್ತು ತಣ್ಣೀರುಹಳ್ಳ ತಂಡಗಳು ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದವು. ರೋಚಕ ಪಂದ್ಯದಲ್ಲಿ ಹೊಸಳ್ಳಿ ತಂಡ ೬ ರನ್‌ಗಳಿಂದ ವಿಜೇತರಾಗುವ ಮೂಲಕ ನಗದು ಮತ್ತು ಆಕರ್ಷಕ ಟ್ರೋಫಿ ಪಡೆದರೆ, ತಣ್ಣೀರುಹಳ್ಳ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.
ಟೂರ್ನಿಗೆ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವ ಚಾಲನೆ ನೀಡಿದರು. ನಂತರ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಕ್ರೀಡಾಕೂಟಗಳನ್ನು ಆಯೋಜಿಸಿದಲ್ಲಿ, ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದಂತಾಗುತ್ತದೆ. ನಾವು ದಿನದ ಸ್ವಲ್ಪ ಸಮಯವನ್ನಾದರೂ, ಮೈದಾನದಲ್ಲಿ ಕಳೆಯುವುದರಿಂದ ಆರೋಗ್ಯದೊಂದಿಗೆ ಮಾನಸಿಕವಾಗಿಯೂ ಸಧೃಡರಾಗಬಹುದು. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಅದರಲ್ಲಿ ಪಾಲ್ಗೊಂಡು ಸಂತೋಷ ಪಡುವುದು ಮುಖ್ಯವಾಗಿದೆ. ಎಲ್ಲರೂ ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕೆಂದರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ನೇರುಗಳಲೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿನೋದ್‌ಕುಮಾರ್, ಸೋಮವಾರಪೇಟೆ ತಹಶೀಲ್ದಾರ್ ಕೃಷ್ಣಮೂರ್ತಿ, ಮೋರಿಕಲ್ಲು ದೇವಾಲಯದ ಅಧ್ಯಕ್ಷ ಪ್ರಭಾಕರ್, ಅರೆಯೂರು ಸುರೇಶ್ ತಂಡಗಳಿಗೆ ಬಹುಮಾನ ವಿತರಿಸಿದರು.