ಮಡಿಕೇರಿ, ಏ. ೧೨: ಪೊನ್ನಂಪೇಟೆಯ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಸಿಐಟಿ) ಕಾಲೇಜಿನ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಅಧ್ಯಯನ (ಎಐ - ಎಂಎಲ್) ವಿಭಾಗದಲ್ಲಿ ``ಕೃತಕ ಬುದ್ಧಿಮತ್ತೆ - ಒಬ್ಬ ನಿಜವಾದ ಇಂಜಿನಿಯರ್ ಏನು ಮಾಡುತ್ತಾನೆ?'' ಎಂಬ ವಿಷಯದಡಿ ವಿಶೇಷ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ತಂತ್ರಜ್ಞಾನ ಉದ್ಯಮಿ ಹೆಚ್. ರಾಮ್ ಪ್ರಕಾಶ್, ``ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಈ ಯುಗದಲ್ಲಿ ಪ್ರತಿಯೊಬ್ಬರೂ ಕೃತಕ ಬುದ್ಧಿಮತ್ತೆಯನ್ನು ಕಲಿಯಬೇಕು, ಅದನ್ನು ಅಭ್ಯಾಸ ಮಾಡಬೇಕು ಮತ್ತು ಅದರೊಂದಿಗೆ ಬದುಕಲು ಕಲಿಯಬೇಕು. ಕೃತಕ ಬುದ್ಧಿಮತ್ತೆ ಮಾನವನಿಗೆ ಬೆದರಿಕೆ ಅಲ್ಲ; ಸರಿಯಾದ ರೀತಿಯಲ್ಲಿ ಬಳಸಿದರೆ ಅದು ಮಾನವ ಜೀವನವನ್ನು ಸುಧಾರಿಸುತ್ತದೆ,'' ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಬಸವರಾಜ್, ``ಕೃತಕ ಬುದ್ಧಿಮತ್ತೆ ನಮ್ಮನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತಿದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು,'' ಎಂದು ಹೇಳಿದರು.

ಎಐ ಮತ್ತು ಎಂಎಲ್ ವಿಭಾಗದ ಮುಖ್ಯಸ್ಥ ಡಾ. ರಾಮಕೃಷ್ಣ ಮಾತನಾಡಿ, ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಕೃತಕ ಬುದ್ಧಿಮತ್ತೆಯ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ದಾರಿ ತೆರೆದಿದೆ ಎಂದರು.

ಕಾರ್ಯಕ್ರಮದಲ್ಲಿ ರಾಕುಟೆನ್ ಇಂಡಿಯಾ ಸಹಾಯಕ ನಿರ್ದೇಶಕ ರಾಘವೇಂದ್ರ, ಮುಖ್ಯ ವಾಸ್ತುಶಿಲ್ಪಿ ಎ.ಪಿ. ಪ್ರದೀಪ್ ಹಾಜರಿದ್ದರು. ವಿದ್ಯಾರ್ಥಿ ಸಂಘದ ಸಂಯೋಜಕ ಪ್ರೊ. ಬಬಿತಾ ಸ್ವಾಗತಿಸಿದರು.