ನಾಪೋಕ್ಲು, ಏ. ೧೨: ಇಲ್ಲಿಗೆ ಸಮೀಪದ ದೊಡ್ಡಪುಲಿಕೋಟು ಗ್ರಾಮದ ಶ್ರೀ ಕೋಟೆ ಭಗವತಿ ದೇವಸ್ಥಾನದ ವಾರ್ಷಿಕ ಉತ್ಸವ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಗುರುವಾರ ಶ್ರದ್ಧಾಭಕ್ತಿಯಿಂದ ಸಂಪನ್ನಗೊAಡಿತು.
ಉತ್ಸವದ ಅಂಗವಾಗಿ ಮಂಗಳವಾರ ಅಂದಿಬೊಳಕು, ಬುಧವಾರ ಎತ್ತು ಪೋರಾಟ ಮತ್ತು ಪಟ್ಟಣಿ, ಗುರುವಾರ ಭಗವತಿ ದೇವಿಯ ಅಭ್ಯಂಜನ ಝಳಕ ಕಾವೇರಿ ನದಿಯಲ್ಲಿ ನಡೆದು ನಂತರ ದೇವಾಲಯದ ಸುತ್ತ ದೇವರ ನೃತ್ಯ ಬಲಿ ನಡೆದು ಆರಾಟು ಒಪ್ಪಿಸಿ, ಮಹಾಪೂಜೆ ನಡೆಸಿ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ಹಾಗೂ ಅನ್ನಪ್ರಸಾದ ಅರ್ಪಿಸಲಾಯಿತು.
ಈ ಸಂದರ್ಭ ಊರ ಹಾಗೂ ಪರ ಊರಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಇಷ್ಟಾರ್ಥ ಹರಕೆ ಕಾಣಿಕೆ ಒಪ್ಪಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು. ಉತ್ಸವದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕರವಂಡ ಲವ ನಾಣಯ್ಯ ಸೇರಿದಂತೆ ಸದಸ್ಯರು, ತಕ್ಕಮುಖ್ಯಸ್ಥರು, ಭಕ್ತಾದಿಗಳು ಭಾಗವಹಿಸಿದ್ದರು.