ವೀರಾಜಪೇಟೆ, ಏ. 11: ವೀರಾಜಪೇಟೆಯ ಪ್ರಗತಿ ನರ್ಸರಿ, ಪ್ರೈಮರಿ ಮತ್ತು ಹೈಸ್ಕೂಲ್ ಹಾಗೂ ಪ್ರಗತಿ ಕ್ರಿಕೆಟ್ ಅಕಾಡೆಮಿಯ ವಿದ್ಯಾರ್ಥಿನಿಯರು ಕೊಡಗು ಜಿಲ್ಲಾ ಲೆದರ್ಬಾಲ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದು, ಶಾಲೆಗೆ ಕೀರ್ತಿ ತಂದಿದ್ದಾರೆ.
ಅಂಡರ್-15 ವಿಭಾಗದಲ್ಲಿ ವಿನ್ಯಾ ಎನ್.ಎಸ್. ಪ್ರತೀಕ್ಷಾ ಕೆ.ಎನ್, ವರ್ಷಿಣಿ ಕೆ.ಎಚ್ ಹಾಗೂ ಅಂಡರ್-19 ವಿಭಾಗದಲ್ಲಿ ಸಾನ್ವಿ ಎಸ್.ಭಟ್, ಧನ್ವಿ ಬಿ.ಆರ್. ಇವರು ಕೊಡಗು ಜಿಲ್ಲಾ ಲೆದರ್ಬಾಲ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿ ಉಡುಪಿಯಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ.
ಈ ಪಂದ್ಯಗಳಲ್ಲಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಮಂಗಳೂರು ತಂಡಗಳ ವಿರುದ್ಧ ಸ್ಪರ್ಧಿಸಲಿದ್ದು, ಈ ಸ್ಪರ್ಧೆಗಳು ಮಂಗಳೂರು ವಲಯ ತಂಡದ ಆಯ್ಕೆ ಟ್ರಯಲ್ಸ್ ಆಗಿಯೂ ನಡೆಯಲಿವೆ.
ಅಂತರರಾಷ್ಟ್ರೀಯ ರಗ್ಬಿ ಆಟಗಾರರಾದ ಪ್ರಗತಿ ಶಾಲೆಯ ಆಡಳಿತಾಧಿಕಾರಿ ಮಾದಂಡ ತಿಮ್ಮಯ್ಯ ತಮ್ಮ ಶಾಲೆಯ ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದು, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಪಠ್ಯ ಚಟುವಟಿಕೆಗಳೊಂದಿಗೆ, ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ವಿದ್ಯಾರ್ಥಿಗಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ವಿಕಸನ ಹೊಂದುತ್ತಾರೆ. ಕೊಡಗು ಕ್ರೀಡೆಯ ತವರೂರು. ಇಲ್ಲಿನ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸುವಂತಾಗಬೇಕು ಎಂದು ಹೇಳಿದರು.