ಮಡಿಕೇರಿ, ಏ. 11 : ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕೊಡವ ಕೌಟುಂಬಿಕ ಹಾಕಿ ಉತ್ಸವವಾಗಿರುವ ಚೇನಂಡ ಕಪ್ ಹಾಕಿ ಪಂದ್ಯಾವಳಿ ರಂಗೇರುತ್ತಿದೆ. ಹಾಕಿ ಪಂದ್ಯಾಟದ ನಡುವೆ ಕೆಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಕಳೆದ ಭಾನುವಾರದಿಂದ ಪ್ರಾರಂಭಗೊಂಡಿರುವ ಉತ್ಸವದಲ್ಲಿ ಈ ತನಕ 112 ಕುಟುಂಬಗಳು ನಿರ್ಗಮಿಸಿದಂತಾಗಿದೆ.

ಹಾಕಿ ಮೈದಾನದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಚೇನಂಡ ಕುಟುಂಬಸ್ಥರು ಈಗಿನ ಹಾಗೂ ಮುಂದಿನ ದಿನಗಳ ಆಗು - ಹೋಗುಗಳ ಕುರಿತಾಗಿ ವಿವರಣೆ ನೀಡಿದರು.

“ಪಾಪುಲಿ''ಯ ಐತಿಹ್ಯ ಪ್ರತಿಬಿಂಬ

ಹಾಕಿ ಉತ್ಸವದ ಜನಕ ಪಾಂಡಂಡ ಕುಟ್ಟಪ್ಪ ಅವರ ಪುತ್ಥಳಿಯನ್ನು ಇಡಲಾಗಿರುವ ಮೈದಾನದ ಮುಂಭಾಗದ ಸ್ಥಳದಲ್ಲಿ ಚೇನಂಡ ಕಪ್‍ನ ಲೋಗೋ ಆಗಿರುವ “ಪಾಪುಲಿ''ಯ ಐತಿಹ್ಯವನ್ನು ಪ್ರತಿಬಿಂಬಿಸುವ ಭಾವಚಿತ್ರಗಳನ್ನು ಒಳಗೊಂಡ ಮ್ಯೂಸಿಯಂ 25 ವರ್ಷಗಳ ಹಾಕಿ ಇತಿಹಾಸ ಸಾರುವ ಚಿತ್ರಗಳನ್ನು ಆಕರ್ಷಕವಾಗಿ ನಿರ್ಮಿಸಲಾಗುತ್ತಿದ್ದು, ಸದ್ಯದಲ್ಲಿ ಇದು ಉದ್ಘಾಟನೆಗೊಳ್ಳಲಿದೆ.

ಆಟ್‍ಪಾಟ್ ಪಡಿಪು ಶಿಬಿರ

ಮೈದಾನದ ಆವರಣದಲ್ಲಿ ನಾಪೋಕ್ಲು ಕೊಡವ ಸಮಾಜ ಹಾಗೂ ಚೇನಂಡ ಕುಟುಂಬಸ್ಥರ ಆಶ್ರಯದಲ್ಲಿ ಮಕ್ಕಳಿಗೆ ಕೊಡವ ಜನಪದ ಕಲೆಗಳ ಆಟ್ - ಪಾಟ್ ಶಿಬಿರವನ್ನು ನಡೆಸಲಾಗುತ್ತಿದ್ದು, ಪ್ರಸ್ತುತ 20ಕ್ಕೂ ಅಧಿಕ ಮಕ್ಕಳು ಇದರಲ್ಲಿ ಭಾಗವಹಿಸಿದ್ದಾರೆ. ಚೇನಂಡ ಜಪ್ಪು ದೇವಯ್ಯ, ಮಧು ಮಾದಯ್ಯ, ತಮ್ಮಿ ತಮ್ಮಯ್ಯ, ವಿಪಿನ್ ಗಣಪತಿ, ದಿನೇಶ್ ತಿಮ್ಮಯ್ಯ, ಗಿರೀಶ್ ಪೂಣಚ್ಚ, ಬಾಳೆಯಡ ನಿಶಾ ಅವರುಗಳು ತರಬೇತಿ ಉಸ್ತುವಾರಿ ನಿಭಾಯಿಸುತ್ತಿದ್ದಾರೆ. 4ಏಳನೇ ಪುಟಕ್ಕೆ

(ಮೊದಲ ಪುಟದಿಂದ)

ವಿಚಾರ ಸಂಕಿರಣಗಳು

ತಾ. 12 ರಂದು (ಇಂದು) ಕಾಫಿ ಬೆಳೆಗೆ ಸಂಬಂಧಿಸಿದ ವಿಚಾರ ಸಂಕಿರಣ ಕಾಫಿ ಮಂಡಳಿಯ ಸಹಯೋಗದಲ್ಲಿ ನಿಗದಿಯಾಗಿದೆ. ಮುಂದಿನ ದಿನಗಳಲ್ಲಿ ಮದುವೆ ಪದ್ದತಿ ಕುರಿತು, ಮಂದ್ ಮಾನಿಯಲ್ಲಿ ಕೋಲಾಟ್, ಕಾವೇರಿ ಮಾತೆಯ ಕುರಿತಾಗಿ, ಜೇನು ಕೃಷಿಯಂತಹ ವಿಚಾರಗಳ ಬಗ್ಗೆ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುತ್ತಿದೆ ಎಂದು ಪ್ರಮುಖರು ತಿಳಿಸಿದರು.

ಮಹಿಳಾ ಹಾಕಿ

ತಾ. 22 ರಿಂದ ಮಹಿಳಾ ಹಾಕಿ ಪಂದ್ಯಾಟ, ಕುಟುಂಬವಾರು ರಿಲೇ ಸ್ಪರ್ಧೆ, ಮೆರಥಾನ್ ಸ್ಪರ್ಧೆಯಂತಹ ಕಾರ್ಯಕ್ರಮಗಳು ತಾ. 30 ರ ತನಕ ಜರುಗಲಿದೆ. ಮೈದಾನದ ಆವರಣದಲ್ಲಿ ಶುಚಿತ್ವಕ್ಕೂ ಆದ್ಯತೆ, ಫೈನಲ್ ದಿನ ಮ್ಯೂಸಿಕಲ್ ನೈಟ್ ಕಾರ್ಯಕ್ರಮವಿದೆ. ತಾ. 30 ರಂದು ಮಹಿಳಾ ಹಾಕಿ ಫೈನಲ್ಸ್, ರಿಲೆ ಫೈನಲ್ಸ್, ಡಿಜೆನೈಟ್ ಕ್ವಾರ್ಟರ್ ಫೈನಲ್ಸ್ ಸೆಮಿ ಫೈನಲ್, ಫೈನಲ್‍ಗೆ ಹಲವು ಪ್ರಮುಖರು ಸೇರಿದಂತೆ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರುಗಳು ವಿವರವಿತ್ತರು.

ಪ್ರಾಥಮಿಕ - ಪ್ರೌಢ ಶಾಲಾ ತಂಡಗಳ ಹಾಕಿ ಪಂದ್ಯಾವಳಿಯಿಂದ ಆಯ್ಕೆ ಮಾಡಿರುವವರಿಗೆ ತರಬೇತಿಯೂ ನಡೆಯುತ್ತಿದೆ. ಚೇನಂಡ ಉತ್ಸವ ಸಮಿತಿ ಪ್ರಮುಖರುಗಳಾದ ಕಂಬಣಿ ಕರುಂಬಯ್ಯ, ಮಧು ಮಾದಯ್ಯ, ಸುರೇಶ್ ನಾಣಯ್ಯ, ದೀನಾ ಚಂಗಪ್ಪ ಅವರುಗಳು ವಿವಿಧ ವಿಚಾರಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದರು.

ಈ ಸಂದಭ ಗಿರೀಶ್ ಪೂಣಚ್ಚ, ಸಚಿನ್ ಅಯ್ಯಪ್ಪ, ರೋಹನ್, ಜಿಮ್ಮಿ ಅಚ್ಚಯ್ಯ, ಶ್ಯಾಮಲಾ, ನಮೃತಾ, ಬಬಿತಾ, ಅಜಿತ್ ಮತ್ತಿತರರು ಉಪಸ್ಥಿತರಿದ್ದರು.