ಮಡಿಕೇರಿ, ಏ. 10: ಪೆÇನ್ನಂಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋತ್ರಿಕಾಡು ಎಂಬಲ್ಲಿ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಆರ್ ಪರಶುರಾಮ್ ಮುಂದಾಳತ್ವದಲ್ಲಿ ನಿವೇಶನಕ್ಕಾಗಿ ಕಾಯ್ದಿರಿಸಿದ ಸರ್ವೇ ನಂಬರ್ 37/26ರಲ್ಲಿ ತಾತ್ಕಾಲಿಕ ಗುಡಿಸಲು ಕಟ್ಟಿ ಶಾಶ್ವತ ಸೂರಿಗಾಗಿ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಯು 9ನೇ ದಿನಕ್ಕೆ ಕಾಲಿರಿಸಿದೆ.
ಪಾಲಿಬೆಟ್ಟ, ಗೋಣಿಕೊಪ್ಪ, ತಿತಿಮತಿ, ಕಾನೂರು, ಪೆÇನ್ನಂಪೇಟೆ ಹಾಗೂ ಮಾಯಮುಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 96 ದಲಿತ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಕುಟುಂಬಗಳು ಅಹೋರಾತ್ರಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ. ಪುಟ್ಟ ಮಕ್ಕಳೊಂದಿಗೆ ವಯೋವೃದ್ದರು, ಮಹಿಳೆಯರು, ಪುರುಷರು ತಾತ್ಕಾಲಿಕ ಗುಡಿಸಲು ನಿರ್ಮಿಸಿ 8 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಶಾಶ್ವತ ನಿವೇಶನ ವ್ಯವಸ್ಥೆ ಕಲ್ಪಿಸುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಎಚ್ಚರಿಸಿದ್ದಾರೆ.
ಈ ಸಂದರ್ಭ ಮಾತನಾಡಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್, ಕಳೆದ 8 ದಿನಗಳಿಂದ ಬಿ.ಶೆಟ್ಟಿಗೇರಿ ಗ್ರಾಮದ 37/26 ಸರ್ವೇ ನಂಬರ್ ಜಾಗದಲ್ಲಿ ಹಗಲು ರಾತ್ರಿ ಎನ್ನದೆ ಅಹೋರಾತ್ರಿ ಹೋರಾಟ ನಡೆಸುತ್ತಿದ್ದು ಯಾವುದೇ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿಲ್ಲ. ಕಳೆದ ಹಲವು ವರ್ಷಗಳಿಂದ ನಿವೇಶನಕ್ಕಾಗಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ಪ್ರತಿಭಟನೆ, ಹೋರಾಟ ನಡೆಸಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಈ ಹಿಂದೆ ಹಾತೂರು, ಬೈಗೋಡು ಎಂಬಲ್ಲಿ ಸುಮಾರು 250 ಕುಟುಂಬ ಒಂದು ವಾರಗಳ ಕಾಲ ವಾಸ್ತವ್ಯ ಹೂಡಿ ಹೋರಾಟ ಕೈಗೊಂಡಿದ್ದೆವು, ಅಧಿಕಾರಿಗಳು ನಿವೇಶನಗಳನ್ನು ಕೊಡುವುದಾಗಿ ಭರವಸೆ ನೀಡಿ ಅಲ್ಲಿಂದ ತೆರವುಗೊಳಿಸಿದ್ದಾರೆ ಎಂದು ಆರೋಪಿಸಿದರು.
ಹಲವಾರು ವರ್ಷಗಳಿಂದ ಲೈನ್ ಮನೆಗಳಲ್ಲಿ ವಾಸಿಸುತ್ತಿರುವ ಈ ಜನಾಂಗದವರಿಗೆ ಆದಷ್ಟು ಶೀಘ್ರ ಸರ್ಕಾರ ಸರ್ವೆ ಕಾರ್ಯ ನಡೆಸಿ ನಿವೇಶನ ಒದಗಿಸಿ ಕೊಡಬೇಕು. ಜಾಗ ಕೈತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕಿ ಜೆ.ಎ.ಲಕ್ಷ್ಮಿ, ಪ್ರಮುಖರಾದ ಜೆ.ಡಿ.ಶಿವಣ್ಣ, ಸಿಂಗ, ಪಿ.ಸಿ.ಪುಟ್ಟ, ಪಿ.ಪಿ.ಬೋಜ, ಪಿ.ಬಿ.ಚೋಮ, ಗೌರಿ, ಮಲ್ಲಿಗೆ, ರವಿ, ಮಧು, ರಾಜು, ಪಾರ್ವತಿ ಸೇರಿದಂತೆ ಮತ್ತಿತರರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.