ಸೋಮವಾರಪೇಟೆ, ಏ. 9: ಗೌಡಳ್ಳಿ ಮತ್ತು ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜನರು ಮಳೆಮಲ್ಲೇಶ್ವರ ಬೆಟ್ಟಕ್ಕೆ ತೆರಳಿ ಮಳೆಗಾಗಿ ಮಳೆಮಲ್ಲೇಶ್ವರ ದೇವರಲ್ಲಿ ಪ್ರಾರ್ಥಿಸಿದರು.
ವಾದ್ಯ ವೃಂದದೊಂದಿಗೆ ಕಾಲ್ನಡಿಗೆಯಲ್ಲಿ ಮಳೆಕರೆಯುತ್ತ ಕೃಷಿಕರು ಮಹಿಳೆಯರಾದಿಯಾಗಿ ಬೆಟ್ಟ ಹತ್ತಿದರು. ಬೆಟ್ಟದ ತುತ್ತತುದಿಯಲ್ಲಿರುವ ಮಳೆಮಲ್ಲೇಶ್ವರ ಮತ್ತು ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ ಭರತ್ ಕುಮಾರ್ ಮಾತನಾಡಿ, ಮುಂಗಾರು, ಹಿಂಗಾರು ಮಳೆಯನ್ನೇ ನಂಬಿ ಬಹುತೇಕ ಕೃಷಿಕರು ಕೃಷಿ ಮಾಡುತ್ತಿದ್ದಾರೆ. ನಾವು ನಂಬಿದ ದೇವರುಗಳ ಆಶೀರ್ವಾದದಿಂದ ಪ್ರತಿವರ್ಷ ಸಕಾಲದಲ್ಲಿ ಮಳೆ ಸುರಿಯುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ಮಳೆಮಲ್ಲೇಶ್ವರ ದೇವರಿಗೆ ಪೂಜೆ ಸಲ್ಲಿಸಿದ್ದೇವೆ. ಗ್ರಾಮಗಳ ದೇವಾಲಯದಲ್ಲಿ ಬೆಳಿಗ್ಗೆ ಪೂಜೆ ಸಲ್ಲಿಸಿ ಬೆಟ್ಟ ಹತ್ತಿದ್ದೇವೆ. ಮುಂಗಾರು ಮಳೆಯೂ ಉತ್ತಮವಾಗಿ ಸುರಿದು ಎಲ್ಲಾ ಗ್ರಾಮಗಳು ಸಮೃದ್ಧಿ ಆಗಲಿ ಎಂದು ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿದ್ದೇವೆ ಎಂದು ಹೇಳಿದರು.
ಬೆಟ್ಟದಿಂದ ಇಳಿದ ಭಕ್ತಾದಿಗಳಿಗೆ ನಂದಿಗುಂದ ಗ್ರಾಮದ ಶ್ರೀ ನಂಜುಂಡೇಶ್ವರ ದೇವಾಲಯದಲ್ಲಿ ಅನ್ನದಾನ ಏರ್ಪಡಿಸಲಾಗಿತ್ತು.
ಈ ಸಂದರ್ಭ ಸಹಕಾರ ಸಂಘದ ನಿರ್ದೇಶಕರುಗಳಾದ ರೇಖಾ, ಬಿ.ಪಿ ಮೊಗಪ್ಪ, ಜಿ.ಎಂ ಹೂವಯ್ಯ, ದಿನೇಶ್ ಮತ್ತಿತರರು ಇದ್ದರು.