ವೀರಾಜಪೇಟೆ, ಏ. 8: ವೀರಾಜಪೇಟೆ ಪುರಸಭೆ ವ್ಯಾಪ್ತಿಯ ಮೊಗರಗಲ್ಲಿಗೆ ಅಂದಾಜು ಮೊತ್ತ ರೂ. 50 ಲಕ್ಷ ಅನುದಾನದಲ್ಲಿ ನೂತನ ಕಾಂಕ್ರಿಟ್ ರಸ್ತೆ ಚರಂಡಿ ಹಾಗೂ ಮೂಲ ಸೌಕರ್ಯಗಳ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಸರಕಾರದಿಂದ ನಡೆಯುವ ಕಾಮಗಾರಿಗಳನ್ನು ಗುತ್ತಿಗೆದಾರರು ಸಮಯಕ್ಕೆ ಸರಿಯಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮುಗಿಸಿ ಕೊಡಬೇಕು ಹಾಗೂ ಕಾಮಗಾರಿ ನಡೆಸುವಾಗ ಗುಣಮಟ್ಟ ಕಾಪಾಡಿಕೊಳ್ಳುವಂತೆ ಸ್ಥಳೀಯ ನಿವಾಸಿಗಳು ಎಚ್ಚರ ವಹಿಸಬೇಕು ಎಂದು ಹೇಳಿದರು.

ಬಳಿಕ ನೆಹರು ನಗರದಲ್ಲಿ ರೂ. 25 ಲಕ್ಷ ವಿಶೇಷ ಅನುದಾನದಲ್ಲಿ ನಿರ್ಮಾಣವಾದ ನೂತನ ಕಾಂಕ್ರಿಟ್ ರಸ್ತೆ ಉದ್ಘಾಟಿಸಿದರು. ಪುರಸಭೆ ಸ್ಥಳೀಯ ವಾರ್ಡ್ ಸದಸ್ಯೆ, ಮಾಜಿ ಅಧ್ಯಕ್ಷೆ ಮನೆಯಪಂಡ ದೇಚಮ್ಮ ಕಾಳಪ್ಪ ಮಾತನಾಡಿ, ಕೆಲವು ವರ್ಷಗಳಿಂದ ವೀರಾಜಪೇಟೆಗೆ ಅನುದಾನಿಗಳಿಲ್ಲದೆ ರಸ್ತೆಗಳು ದುಸ್ಥಿತಿಯಲ್ಲಿತ್ತು. ಈಗ ಶಾಸಕ ಪೊನ್ನಣ್ಣ ಅವರ ಶ್ರಮದಿಂದ ಪಟ್ಟಣ ಹಾಗೂ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದರು.

ಈ ಸಂದರ್ಭ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪ್ರಚಾರ ಸಮಿತಿ ಅಧ್ಯಕ್ಷ ಎಸ್.ಹೆಚ್. ಮತೀನ್ ಮತ್ತು ಬ್ಲಾಕ್ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ನಯನ ಜಗತ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೊಳುಮಂಡ ರಫೀಕ್, ನರೇಂದ್ರ ಕಾಮತ್, ಮಸೀದಿ ಅಧ್ಯಕ್ಷ ನಿಸ್ಸಾರ್, ಏಜಾಜ್ ಅಹ್ಮದ್, ಮುನಾವರ್, ಜಾಫರ್ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಕಾವೇರಮ್ಮ, ಪುರಸಭೆ ಮುಖ್ಯ ಅಧಿಕಾರಿ ಪಿ.ಕೆ ನಾಚಪ್ಪ, ಪುರಸಭೆ ಮಾಜಿ ಸದಸ್ಯ ಮಹಮ್ಮದ್ ರಾಫಿ ಸ್ಥಳೀಯರು, ಕಾಂಗ್ರೆಸ್ ಮುಖಂಡರು ಇದ್ದರು.