ಮಡಿಕೇರಿ, ಏ. 8: ಹೊದ್ದೂರು ಗ್ರಾಮದ ಶ್ರೀ ಭಗವತಿ, ಭದ್ರಕಾಳಿ - ಎತ್ತೋಳಮ್ಮೆ ಹಾಗೂ ಶ್ರೀ ವಿಷ್ಣುಮೂರ್ತಿ ಚಾಮುಂಡಿ ದೇವರ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಿಂದ ಜರುಗಿತು.
ಅಂಜಿತಲೆ ದೇವರೆಂದೇ ಖ್ಯಾತಿವೆತ್ತ ದೇವಾನು ದೇವತೆಗಳಲ್ಲಿ ಹೊದ್ದೂರು ಗ್ರಾಮದ ರಕ್ಷಕನಾದ ಶ್ರೀ ಶಾಸ್ತ - ಈಶ್ವರ ದೇವರ ವಾರ್ಷಿಕ ಉತ್ಸವ ಕಳೆದ ಫೆಬ್ರವರಿ 17 ರಂದು ನಡೆದ ಬಳಿಕ ಮಾರ್ಚ್ 14 ರಂದು ಗ್ರಾಮಸ್ಥರೆಲ್ಲರೂ ಸೇರಿ ಶ್ರೀ ಭಗವತಿ ದೇವಿಯ ನಡೆಯಲ್ಲಿ ಸಾಂಪ್ರದಾಯಿಕ ಕಟ್ಟುಪಾಡನ್ನು ಹಾಕಲಾಗಿತ್ತು.
ಮಾರ್ಚ್ 26 ರಂದು ಶ್ರೀ ಮಾದುರಪ್ಪ ದೇವಸ್ಥಾನದ ಸನ್ನಿಧಿಯಲ್ಲಿ ಹಾಗೂ ಶ್ರೀ ಭಗವತಿ ದೇವಿಯ ಸನ್ನಿಧಿಯಲ್ಲಿ ಅಂದಿಬೊಳಕ್ ಮೂಲಕ ಉತ್ಸವ ಆರಂಭಗೊಂಡಿತ್ತು.
ಮಾ. 27 ರಂದು ಬೆಳಿಗ್ಗೆ 7 ಗಂಟೆಗೆ ನೆರವಂಡ ಗುರು ಮನೆಯಿಂದ ಭಂಡಾರ ತರಲಾಯಿತು. ಬಳಿಕ ಪಟ್ಟಣಿ, ಬೋಡ್‍ಹಬ್ಬ, ಶ್ರೀ ಮಾದೇಶ್ವರ ದೇವಸ್ಥಾನದಲ್ಲಿ ತೆಂಗಿನಕಾಯಿ ಎಳೆಯುವುದು ನಂತರ ನಾಥಂಡ ಕಲ್ಲಿನಲ್ಲಿ ತೆಂಗಿನಕಾಯಿ ಒಡೆದು ಕಟ್ಟು ಮುರಿಯಲಾಯಿತು. ಬಳಿಕ ಕೂಡಂಡ ಕುಟುಂಬದ ಐನ್‍ಮನೆಯಲ್ಲಿ ಸೇರಿ ಸಾಂಪ್ರದಾಯಿಕ ಪಟ್ಟಣಿ ಕಾರ್ಯದ ಭೋಜನ ಸ್ವೀಕರಿಸಿದರು. ಅಂದು ಸಂಜೆ 4 ಗಂಟೆಗೆ ಶ್ರೀ ಭಗವತಿ ದೇವಿಯ ನೃತ್ಯಬಲಿ ನಡೆಯಿತು.
ಮಾ. 28 ರಂದು ಸಂಜೆ 4 ಗಂಟೆಗೆ ಶ್ರೀ ಭಗವತಿ ದೇವಿಯ ಜಳಕ, ಕಾವೇರಿ ಹೊಳೆಯಲ್ಲಿ ಜಳಕದ ನಂತರ ಚಂಡೆ ಮದ್ದಳೆಯೊಂದಿಗೆ ಗ್ರಾಮದ ಮುಖ್ಯರಸ್ತೆಯಲ್ಲಿ ಮೆರವಣಿಗೆ ಹಾಗೂ ದೇವಸ್ಥಾನದಲ್ಲಿ ನೃತ್ಯಬಲಿ, ಭಂಡಾರ ಹಾಕುವುದು ಬಳಿಕ ಸಂಪ್ರೋಕ್ಷಣೆಯೊಂದಿಗೆ ರಾತ್ರಿ ಅನ್ನಸಂತರ್ಪಣೆ ನಡೆಯಿತು.
ಮಾ. 29 ರಂದು ಶುದ್ಧ ಕಲಶ, ಮಾ. 30 ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಭದ್ರಕಾಳಿ ಹಾಗೂ ಎತ್ತೋಳಮ್ಮೆ ದೇವಿಯ ಕೋಲ, ಹರಕೆ ಒಪ್ಪಿಸುವುದು, ಮಾ. 31 ರಂದು ಶ್ರೀ ವಿಷ್ಣುಮೂರ್ತಿ ದೇವರ ಮೇಲೇರಿಗೆ ಸೌದೆ ಕಡಿಯುವುದು ಹಾಗೂ ಸಂಜೆ 6 ಗಂಟೆಗೆ ವಿಷ್ಣುಮೂರ್ತಿ ದೇವರ ಕೊಟ್ಟಿಪಾಡ್‍ವೊ, ಗುಡಿಯ ಬಾಗಿಲು ತೆರೆಯುವುದು ಬಳಿಕ ಶ್ರೀ ವಿಷ್ಣುಮೂರ್ತಿ ದೇವಿಯ ತೋಯತ ತೆರೆ ನಡೆಯಿತು.
ತಾ. 1 ರಂದು ಸಂಜೆ 6 ಗಂಟೆಗೆ ತೋಯತ ತೆರೆ ಬಳಿಕ 8 ಗಂಟೆಗೆ ಶ್ರೀ ವಿಷ್ಣುಮೂರ್ತಿ ದೇವರ ಮೇಲೇರಿಗೆ ಅಗ್ನಿಸ್ಪರ್ಶ ನಡೆದ ಬಳಿಕ ತೋತ ತೆರೆ ಹಾಗೂ ಕುಟ್ಟಿಂಜಾತ, ಮಂದಣ್ಣಮೂರ್ತಿ, ನುಚ್ಚುಟೆ ಕೋಲ ಜರುಗಿತು.
ತಾ. 2 ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಕಲ್ಯಾಟಜ್ಜಪ್ಪ ದೇವರ ಕೋಲ ಜರುಗಿತು. ಬಳಿಕ 11 ಗಂಟೆಗೆ ಶ್ರೀ ವಿಷ್ಣುಮೂರ್ತಿ ದೇವರ ಅಗ್ನಿಸ್ಪರ್ಶ ನೆರೆದಿದ್ದ ಸಾವಿರಾರು ಭಕ್ತರನ್ನು ರೋಮಾಂಚನಗೊಳಿಸುವುದರ ಮೂಲಕ ಭಕ್ತಪರವಶೆಗೆ ಕೊಂಡೊಯ್ಯುವಂತಿತ್ತು. ಅಧಿಕ ಸಂಖ್ಯೆಯಲ್ಲಿ ಗ್ರಾಮದ ಹಾಗೂ ಹೊರ ಗ್ರಾಮದ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು. ಭಕ್ತರಿಗೆ ಮಧ್ಯಾಹ್ನದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಶ್ರೀ ಮಾದೇಶ್ವರ ದೇವಸ್ಥಾನದ ಅಧ್ಯಕ್ಷರು, ತಕ್ಕಮುಖ್ಯಸ್ಥರು, ಆಡಳಿತ ಮಂಡಳಿ ಸದಸ್ಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. - ಸಾಬ ಸುಬ್ರಮಣಿ