ಮಡಿಕೇರಿ, ಏ. 8: ನಗರದ ಪಾರಂಪರಿಕ ಕಸ ವಿಲೇವಾರಿ ವಿಳಂಬವಾಗುತ್ತಿರುವ ಕುರಿತು ಸಂಸದ ಯದುವೀರ್ ಅತೃಪ್ತಿ ವ್ಯಕ್ತಪಡಿಸಿದರು. ಅಧಿಕಾರಿಗಳು ಒತ್ತಡ ಹಾಕಿ ಕೆಲಸವಾಗುವಂತೆ ನೋಡಿಕೊಳ್ಳಬೇಕೆಂದು ತಾಕೀತು ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪೌರಾಯುಕ್ತ ರಮೇಶ್ ಈ ಬಗ್ಗೆ ಮಾಹಿತಿ ನೀಡಿದರು. 76 ಸಾವಿರ ಟನ್ ಕಸ ವಿಲೇವಾರಿಗೆ ಟೆಂಡರ್ ಆಗಿದ್ದು, ವಿಂಗಡಣೆ ಕಾರ್ಯ ನಡೆಯುತ್ತಿದೆ. ತಡವಾಗುತ್ತಿರುವ ಕುರಿತು ಹಲವು ಬಾರಿ ನೋಟೀಸ್ ಕೂಡ ನೀಡಲಾಗಿದೆ. ಗುತ್ತಿಗೆದಾರರು ಸಮಂಜಸ ಉತ್ತರವನ್ನೂ ನೀಡಿಲ್ಲ. ಈ ನಿಟ್ಟಿನಲ್ಲಿ ಕಾನೂನು ಪ್ರಕಾರ ಮತ್ತೊಮ್ಮೆ ನೋಟೀಸ್ ನೀಡಲಾಗಿದೆ ಎಂದರು. ಸಂಸದ ಯದುವೀರ್ ಮಾತನಾಡಿ, ವರ್ಷ ಕಳೆದರೂ ಕಸ ವಿಲೇವಾರಿ ಸಮರ್ಪಕವಾಗಿ ನಡೆದಿಲ್ಲ. ಇದರಲ್ಲಿ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಒತ್ತಡ ಹಾಕಿ ಕೆಲಸ ಮಾಡಿಸಿಕೊಳ್ಳಬೇಕು. ಬಂದಾಗಲೆಲ್ಲ ಕಸದ ದರ್ಶವನವಾಗುತ್ತದೆ. ಪರಿಹಾರ ತ್ವರಿತವಾಗಿ ಆಗಬೇಕೆಂದರು. ಅಲ್ಲದೆ, ನೂತನ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಆಗುತ್ತಿರುವ ತೊಡಕು ನಿವಾರಿಸಬೇಕೆಂದು ಸೂಚಿಸಿದರು. ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಮಾತನಾಡಿ, ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರೋಪಾಯಕ್ಕೆ ಮುಂದಾಗಲಾಗುವುದು ಎಂದರು. ಇದೇ ಸಂದರ್ಭ ಅಮೃತ್ ಯೋಜನೆ ಕಾಮಗಾರಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಸಭೆಯಲ್ಲಿ ನಗರಸಭಾ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಸದಸ್ಯ ಉಮೇಶ್ ಸುಬ್ರಮಣಿ ಸೇರಿದಂತೆ ಇನ್ನಿತರರು ಹಾಜರಿದ್ದರು