ಗೋಣಿಕೊಪ್ಪಲು, ಏ. 8: ದಕ್ಷಿಣ ಕೊಡಗಿನಲ್ಲಿ ಆನೆ ಮಾನವ ಸಂಘರ್ಷ ಮುಂದುವರೆಯುತ್ತಿದ್ದು ಕಾಡಾನೆ ದಾಳಿಗೆ ಸಿಲುಕಿ ಬೆಳೆಗಾರ ಮೃತಪಟ್ಟ ಘಟನೆ ಶ್ರೀಮಂಗಲ ಹೋಬಳಿಯ ಕಾಯಿಮಾನಿ ಗ್ರಾಮದಲ್ಲಿ ಸಂಭವಿಸಿದೆ. ಕಾಫಿ ಬೆಳೆಗಾರ ಮೂಕಳಮಾಡ ರತ್ತು ಆನೆ ದಾಳಿಗೆ ಬಲಿಯಾದವರು. ರತ್ತು (52)ತನ್ನ ತೋಟಕ್ಕೆ ಎಂದಿನಂತೆ ಮುಂಜಾನೆ ವೇಳೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾಫಿ ತೋಟದಲ್ಲಿದ್ದ ಕಾಡಾನೆಯೊಂದು ದಿಢೀರನೆ ದಾಳಿ ಮಾಡಿದೆ. ವಿಷಯ ತಿಳಿದ ನಾಗರಿಕರು ಕುಟ್ಟ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದರಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಶ್ರೀಮಂಗಲ ಸುತ್ತಮುತ್ತಲಿನ ಗ್ರಾಮಸ್ಥರು ಕೊಡಗಿನ ಗಡಿಭಾಗವಾದ ಕುಟ್ಟದ ಆಸ್ಪತ್ರೆಗೆ ತೆರಳಿ ಸ್ಥಳದಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೆ ತಮ್ಮ ಅಸಮಾಧಾನ ಹೊರಹಾಕಿದರು. 11 ಗಂಟೆಯ ನಂತರ ಸ್ಥಳೀಯ ಗ್ರಾಮಸ್ಥರು ಒಟ್ಟು ಗೂಡಿ ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಿ ತಮ್ಮ ಅಕ್ರೋಶ ವ್ಯಕ್ತಪಡಿಸಿದರು.

ಕಾಡಾನೆಯ ದಾಳಿ ಸುದ್ದಿ ತಿಳಿದ ವೀರಾಜಪೇಟೆ ಡಿಎಫ್‍ಓ ಜಗನ್ನಾಥ್ ಹಾಗೂ ಸಿಬ್ಬಂದಿಗಳು ವಿರಾಜಪೇಟೆಯಿಂದ ಕುಟ್ಟ ಆಸ್ಪತ್ರೆಗೆ ತೆರಳಿ ಆಸ್ಪತ್ರೆಯ ಮುಂದೆ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಗ್ರಾಮಸ್ಥರು ಘಟನೆಯ ಬಗ್ಗೆ ತಮ್ಮ ಅಸಮಾಧಾನವನ್ನು ಅಧಿಕಾರಿಗಳ ಮುಂದೆ ಹೊರಹಾಕಿದರು. ಡಿಎಫ್‍ಓ ಜಗನ್ನಾಥ್ ಗ್ರಾಮಸ್ಥರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದರಾದರೂ ಗ್ರಾಮಸ್ಥರು ಇಲಾಖೆ ವಿರುದ್ಧ ಕಿಡಿಕಾರಿದರು.

ಅರಣ್ಯ ಇಲಾಖೆ ವತಿಯಿಂದ ಮೃತಪಟ್ಟ ಕುಟುಂಬಕ್ಕೆ ತಕ್ಷಣ 50 ಲಕ್ಷ ಪರಿಹಾರ ಒದಗಿಸುವಂತೆ ಗ್ರಾಮಸ್ಥರು ಪಟ್ಟುಹಿಡಿದರು. ಈ ವೇಳೆ ಅಧಿಕಾರಿಗಳು ಸಮಜಾಯಿಸಿಕೆ ನೀಡಿ ಸರ್ಕಾರದ ವತಿಯಿಂದ ಸಿಗುವ ಪರಿಹಾರವನ್ನು ಒದಗಿಸುತ್ತೇವೆಂದು ಗ್ರಾಮಸ್ಥರಿಗೆ ತಿಳಿಸಿದರು. ಆದರೆ ಅಧಿಕಾರಿಗಳ ಮಾತಿಗೆ ಗ್ರಾಮಸ್ಥರು ಒಪ್ಪಿಗೆ ನೀಡಲಿಲ್ಲ. ಪರಿಹಾರ ಚೆಕ್‍ಅನ್ನು ಸ್ಥಳದಲ್ಲಿಯೇ ನೀಡಬೇಕು ಎಂದು ಪಟ್ಟುಹಿಡಿದರು. ಪರಿಹಾರದ ಚೆಕ್ ನೀಡದಿದ್ದಲ್ಲಿ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಿಲ್ಲವೆಂದು ಗ್ರಾಮಸ್ಥರು ತಮ್ಮ ಬಿಗಿಪಟ್ಟನ್ನು ಮುಂದಿಟ್ಟರು. ಮುಂಜಾನೆಯಿಂದ ಮಧ್ಯಾಹ್ನದವರೆಗೂ ಗ್ರಾಮಸ್ಥರು ತಮ್ಮ ಪ್ರತಿಭಟನೆ ಮುಂದುವರೆಸಿದರು. ಅಧಿಕಾರಿಗಳು ಗ್ರಾಮಸ್ಥರ ನಡುವಿನ ಮಾತುಕತೆ ನಂತರ ಅರಣ್ಯ ಇಲಾಖೆ ವತಿಯಿಂದ ಮೊದಲ ಕಂತಿನಲ್ಲಿ 5 ಲಕ್ಷ ಪರಿಹಾರ ಮೊತ್ತವನ್ನು ಚೆಕ್ ಮೂಲಕ ಕುಟುಂಬಸ್ಥರಿಗೆ ನೀಡಲಾಯಿತು. ಉಳಿದ ಪರಿಹಾರ ಹಣವನ್ನು ವಾರದೊಳಗೆ ಕುಟುಂಬದ ಬ್ಯಾಂಕ್ ಖಾತೆಗೆ ರವಾನಿಸಲಾಗುವುದೆಂದು ಡಿಎಫ್‍ಓ ಜಗನ್ನಾಥ್ ತಿಳಿಸಿದರು. ನಂತರ ಗ್ರಾಮಸ್ಥರು ಮರಣೋತ್ತರ ಪರೀಕ್ಷೆಗೆ ಅವಕಾಶ ಕಲ್ಪಿಸಿದರು. 4ಆರನೇ ಪುಟಕ್ಕೆ

4ಆರನೇ ಪುಟಕ್ಕೆ ಈ ವೇಳೆ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ತಾಲೂಕು ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಶ್ರೀಮಂಗಲ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪಲ್ವೀನ್ ಪೂಣಚ್ಚ, ಕುಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ವೈ. ರಾಮಕೃಷ್ಣ, ಬೆಳೆಗಾರರಾದ ಮಾಣಿರ ವಿಜಯ್ ನಂಜಪ್ಪ, ಮಚ್ಚಮಾಡ ಡಾಲಿ ಚಂಗಪ್ಪ, ಅಜ್ಜಿಕುಟ್ಟಿರ ಬೋಪಣ್ಣ, ತೀತಿರ ವೇಣು, ಮಚ್ಚಮಾಡ ಬೋಸು ಸೇರಿದಂತೆ ಅನೇಕ ಸಂಘ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು. ವನ್ಯಜೀವಿ ವಿಭಾಗದ ಡಿಎಫ್‍ಒ ನೆಹರು ಅರಣ್ಯ ಅಧಿಕಾರಿಗಳಾದ ಗಂಗಾಧರ್, ಶಿವರಾಮ್, ಕುಶಾಲನಗರ ಎಸಿಎಫ್ ಗೋಪಾಲ್, ಬೋಸ್ ಮಾದಪ್ಪ, ಡಿಆರ್‍ಎಫ್‍ಓ ತಂಡ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು. ಮಧ್ಯಾಹ್ನದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ನಂತರ ಮೃತ ದೇಹವನ್ನು ಸಂಬಂಧಿಸಿದ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ಮೃತ ವ್ಯಕ್ತಿ ಓರ್ವ ಪುತ್ರ, ಪತ್ನಿಯನ್ನು ಅಗಲಿದ್ದಾರೆ. ಮಧ್ಯಾಹ್ನದ ನಂತರ ಸಿಬ್ಬಂದಿಗಳು ಅಧಿಕಾರಿಗಳು, ಕಾಡಾನೆಯನ್ನು ಕಾಡಿಗೆ ಅಟ್ಟುವ ಕಾರ್ಯಚರಣೆ ಆರಂಭಿಸಿದರು. -ಹೆಚ್.ಕೆ.ಜಗದೀಶ್