ವಾಷಿಂಗ್‍ಟನ್ ಡಿಸಿ, ಏ.8: ಕಳೆದ 40 ದಿನಗಳಿಂದ ನಡೆಯುತ್ತಿದ್ದ ಅಮೇರಿಕಾ - ಇಸ್ರೇಲ್ - ಇರಾನ್ ನಡುವಿನ ಯುದ್ಧಕ್ಕೆ ಬುಧವಾರ ತಾತ್ಕಾಲಿಕ ಕದನ ವಿರಾಮ ಘೋಷಿಸಲ್ಪಟ್ಟಿದೆ. ಇರಾನ್, ಇಸ್ರೇಲ್ ಹಾಗೂ ಮಧ್ಯಪ್ರಾಚ್ಯ ದೇಶಗಳಲ್ಲಿ ಭಾರೀ ಆಸ್ತಿ-ಪಾಸ್ತಿ ನಾಶದೊಂದಿಗೆ ಮಕ್ಕಳು, ಮಹಿಳೆಯರೂ ಸೇರಿದಂತೆ ಸಹಸ್ರಾರು ಅಮಾಯಕರ ಪ್ರಾಣ ಹಾನಿಯಿಂದ ವಿನಾಶದತ್ತ ಸಾಗುತ್ತಿದ್ದ, ವಿಶ್ವವೇ ತಲ್ಲಣಗೊಂಡಿದ್ದ ವಾತಾವರಣಕ್ಕೆ ತಾತ್ಕಾಲಿಕ ತೆರೆÉ ಬಿದ್ದಿದೆ. ತೈಲ ಬೆಲೆ, ಅನಿಲ ಬೆಲೆಯ ಭಾರೀ ಏರಿಕೆಯೊಂದಿಗೆ ಹಾಗೂ ಅನಿಲದ ಅಲಭ್ಯತೆಯಿಂದ ಭಾರತ ಸೇರಿದಂತೆ ವಿಶ್ವದ ಆರ್ಥಿಕ ಸ್ಥಿತಿಯನ್ನು ಅಧೋಗತಿಗೆ ತಳ್ಳಲ್ಪಡುತ್ತಿದ್ದ ದ್ವೇಷಾಸೂಯೆಯ ಈ ಆಸುರೀ ಸಮರಕ್ಕೆ ಇದೀಗ ನೀಡಿರುವ ಬಿಡುವಿನಿಂದಾಗಿ ತುಸು ನೆಮ್ಮದಿಯ ಬದಲಾವಣೆಯೊಂದಿಗೆ ಎಲ್ಲ್ಲೆಡೆ ಆಶಾಭಾವನೆ ವ್ಯಕ್ತಗೊಂಡಿದೆ. ಒಂದೆಡೆ ಅಮೆರಿಕಾ - ಇಸ್ರೇಲ್ ಸೇರಿ ಇರಾನ್ ಅನ್ನು ಪುಡಿಗಟ್ಟುವ ಕಾರ್ಯದಲ್ಲಿ ನಿರತವಾಗಿದ್ದರೆ ಇದಕ್ಕೆ ಪ್ರತೀಕಾರವಾಗಿ ಇರಾನ್ ಇಸ್ರೇಲ್ ಮೇಲಿನ ಧಾಳಿಯೊಂದಿಗೆ ಅಮೇರಿಕ ಸೇನಾ ನೆಲೆ ಹೊಂದಿದ್ದ ಮಧ್ಯಪ್ರಾಚ್ಯ ದೇಶಗಳನ್ನು ನಾಶಗೊಳಿಸುವ ಕಾರ್ಯದಲ್ಲಿ ತೊಡಗಿದ್ದು, ಅಮೇರಿಕಾದ ವಿಮಾನಗಳನ್ನೂ ಹೊಡೆದುರುಳಿಸುತ್ತಿದ್ದು ಇದೀಗ ಈ ಎಲ್ಲಾ ವಿನಾಶಕಾರೀ ಕೃತ್ಯಗಳಿಗೆ ಸದ್ಯದ ಮಟ್ಟಿಗೆ ಕಡಿವಾಣ ಹಾಕಿದಂತಾಗಿದೆ. ಇಂದು ಬೆಳಗಿನ ಜಾವ ನಡೆದ ದಿಢೀರ್ ಒಪ್ಪಂದದಂತೆ ಉಭಯ ರಾಷ್ಟ್ರಗಳು ಸೇನಾ ಕಾರ್ಯಾಚರಣೆಗಳನ್ನು ನಿಲ್ಲಿಸಲು ಮತ್ತು ಮುಂದಿನ ಶಾಂತಿ ಮಾತುಕತೆಗಳಿಗೆ ಅವಕಾಶ ಕಲ್ಪಿಸಲು ಒಪ್ಪಿಕೊಂಡಿವೆ. ಇರಾನ್ ಮೇಲೆ ವಿನಾಶಕಾರಿ ದಾಳಿ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದ್ದ ಗಡುವು ಮುಗಿಯಲು ಕೇವಲ ಎರಡು ಗಂಟೆ ಗಳಿರುವಾಗ ಬಹುದೊಡ್ಡ ರಾಜತಾಂತ್ರಿಕ ಬೆಳವಣಿಗೆಯೊಂದು ನಡೆದಿದೆ. ವಿಶ್ವವೇ ಚಕಿತಗೊಳ್ಳುವಂತೆ ಟ್ರಂಪ್ ಕದನ ವಿರಾಮ ಘೋಷಿಸಿದ್ದು ಇರಾನ್ ಸಮ್ಮತಿ ನೀಡಿದೆ.

ಪಾಕಿಸ್ತಾನ ಮಧ್ಯಸ್ಥಿಕೆ

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಅಮೇರಿಕಾ ಮತ್ತು ಇರಾನ್ ನಡುವೆ 2 ವಾರಗಳ ಕಾಲ ಕದನ ವಿರಾಮ ಒಪ್ಪಂದವಾಗಿದೆ. ಇಸ್ರೇಲ್ ಸಹ ಸೇನಾ ಕಾರ್ಯಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಸಮ್ಮತಿಸಿದೆ. ಆದರೆ, ಲೆಬನಾನ್‍ನÀಲ್ಲಿ ಹಿಜ್ಬುಲ್ಲಾ ಸಂಘಟನೆ ನಾಶಗೊಳ್ಳ್ಳುವವರೆಗೆ ದಾಳಿ ಮುಂದುವರಿಸುವುದಾಗಿ ಇಸ್ರೇಲ್ ಅಧ್ಯಕ್ಷÀ ನೆತನ್ಯಾಹು ಪಟ್ಟು ಹಿಡಿದಿದ್ದಾರೆ. ಈ ನಡುವೆ ಅಮೇರಿಕಾ ಅಧ್ಯಕ್ಷ ಟ್ರಂಪ್ ತಮ್ಮ ಹೇಳಿಕೆಯಲ್ಲಿ ಚೀನಾ ದೇಶದ ಮಧ್ಯಪ್ರವೇಶದಿಂದ ಈ ಸಮರ ಸಮಾಧಾನಕ್ಕೆ ಇರಾನ್ ಸಮ್ಮತಿ ನೀಡುವಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾತ್ಕಾಲಿಕ ಯುದ್ಧ ವಿರಾಮಕ್ಕೆ ಬಯಸಿದಂತೆ ಪ್ರಾರಂಭಿಕ ಒಪ್ಪಂದದಲ್ಲಿ ಪ್ರಮುಖವಾಗಿ ಇರಾನ್ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಸುರಕ್ಷಿತವಾಗಿ ತೆರೆಯಲು ಒಪ್ಪಿಕೊಂಡಿದೆ.

ಶಾಶ್ವತ ವಿರಾಮಕ್ಕೆ ಇರಾನ್ 10 ಬೇಡಿಕೆ

ಆದರೆ, ಇರಾನ್ ಶಾಶ್ವತ ಕದನ ವಿರಾಮಕ್ಕೆ 10 ಅಂಶಗಳ ಬೇಡಿಕೆ-ನಿರ್ಬಂಧ ಮುಂದೊಡ್ಡಿದೆ. ಅವುಗಳೆಂದರೆ, 1. ಎರಡೂ ಕಡೆಯಿಂದ ಆಕ್ರಮಣಶೀಲತೆಯನ್ನು ತಡೆಯುವುದು ಮತ್ತು ಇರಾನ್‍ನ ಯುರೇನಿಯಂ ಪುಷ್ಟೀಕರಣವನ್ನು ಒಪ್ಪಿಕೊಳ್ಳುವುದು. 2.ಇರಾನ್‍ನ ಸಶಸ್ತ್ರ ಪಡೆಗಳ ಸಮನ್ವಯದೊಂದಿಗೆ ಹಾರ್ಮುಜ್ ಜಲಸಂಧಿಯ ಮೂಲಕ ನಿಯಂತ್ರಿತ ಮಾರ್ಗ. 3. ಲೆಬನಾನ್‍ನಲ್ಲಿರುವ ಹಿಜ್ಬುಲ್ಲಾ ಗುಂಪಿನ ವಿರುದ್ಧ ಸೇರಿದಂತೆ ಎಲ್ಲಾ ರಂಗಗಳಲ್ಲಿ ಯುದ್ಧವನ್ನು ಕೊನೆಗೊಳಿಸುವುದು. 4. ಪ್ರದೇಶದಲ್ಲಿನ ಎಲ್ಲಾ ನೆಲೆಗಳು ಮತ್ತು ನಿಯೋಜನೆ ಸ್ಥಳಗಳಿಂದ ಯುಎಸ್ ಯುದ್ಧ ಪಡೆಗಳನ್ನು ಹಿಂತೆಗೆದುಕೊಳ್ಳುವುದು. 5. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಆಡಳಿತ ಮಂಡಳಿಯ ಎಲ್ಲಾ ನಿರ್ಣಯಗಳ ಮುಕ್ತಾಯ. 6. ಒಪ್ಪಿದ ನಿಯಮಗಳ ಅಡಿಯಲ್ಲಿ ಇರಾನಿನ ಪ್ರಾಬಲ್ಯವನ್ನು ಖಾತರಿಪಡಿಸುವ ಹಾರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಸಾರಿಗೆ ಪೆÇ್ರೀಟೋಕಾಲ್ ಸ್ಥಾಪನೆ. 7. ಅಂದಾಜಿನ ಪ್ರಕಾರ ಇರಾನ್‍ಗೆ ಹಾನಿಯ ಸಂಪೂರ್ಣ ಪಾವತಿ. 8. ಇರಾನ್ ವಿರುದ್ಧದ ಎಲ್ಲಾ ಪ್ರಾಥಮಿಕ ಮತ್ತು ದ್ವಿತೀಯ ಆರ್ಥಿಕ ನಿರ್ಬಂಧಗಳನ್ನು ತೆಗೆದುಹಾಕುವುದು. 9. ವಿದೇಶಗಳಲ್ಲಿ ನಿರ್ಬಂಧಿಸಲಾದ ಎಲ್ಲಾ ಇರಾನಿನ ಆಸ್ತಿಗಳು ಮತ್ತು ಸ್ವತ್ತುಗಳನ್ನು ಬಿಡುಗಡೆ ಮಾಡುವುದು. 10. ಯುಎನ್ ಭದ್ರತಾ ಮಂಡಳಿಯ ನಿರ್ಣಯದ ಮೂಲಕ ಈ ಎಲ್ಲಾ ಷರತ್ತುಗಳ ಅನುಮೋದನೆ, ಇದರಿಂದಾಗಿ ಅವುಗಳನ್ನು ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಬದ್ಧವಾಗಿಸುತ್ತದೆ ಎಂದು ಇರಾನ್ ಆಗ್ರಹಿಸಿದೆ. 4ಆರನೇ ಪುಟಕ್ಕೆ

(ಮೊದಲ ಪುಟದಿಂದ) ಇಸ್ಲಾಮಿಕ್ ಗಣರಾಜ್ಯವು ತನ್ನ ವಿಜಯವನ್ನು ಘೋಷಿಸಿಕೊಂಡಿದ್ದು ಇರಾನ್ ಜನತೆ ಸಂಭ್ರಮಾಚರಣೆ ನಡೆಸಿದ್ದಾರೆ. ಇತ್ತ ಅಮೇರಿಕಾವು ತಾನೂ ಜಯ ಸಾಧಿಸಿರುವುದಾಗಿ ಹೇಳಿಕೊಂಡಿದೆ.

ಐದು ವಾರಗಳ ಸಂಘರ್ಷದ ಆರಂಭದಿಂದಲೂ ಸಮುದ್ರ ಸಂಚಾರಕ್ಕೆ ಹೆಚ್ಚಾಗಿ ಮುಚ್ಚಲ್ಪಟ್ಟಿರುವ ಜಾಗತಿಕ ತೈಲ ಪೂರೈಕೆಯ ಐದನೇ ಒಂದು ಭಾಗದಷ್ಟು ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೇಲೆ ಇರಾನಿನ ನಿಯಂತ್ರಣವನ್ನು ವಿಸ್ತರಿಸಲು ಒಪ್ಪಂದದಲ್ಲಿ ಅಳವಡಿಸುವಂತೆಯೂ ಇರಾನ್ ತಿಳಿಸಿದೆ. ಹಾರ್ಮುಜ್ ಜಲಸಂಧಿ ಜಾಗತಿಕ ತೈಲ ಸಾಗಣೆ ಮಾರ್ಗಗಳಲ್ಲಿ ಪ್ರಮುಖ ಸ್ಥಾನ ಪಡೆದಿದ್ದು, ಈ ಮಾರ್ಗ ಬಂದ್ ಆಗಿದ್ದರಿಂದ ಜಾಗತಿಕ ತೈಲ ಬೆಲೆ ಹೆಚ್ಚಾಗಿದ್ದವು. ಜಲಸಂಧಿಯ ಪುನರ್ ತೆರವಿನಿಂದ ಜಾಗತಿಕ ಸರಬರಾಜು ಸುಧಾರಿಸಲಿದೆ,

ಈ ಕದನ ವಿರಾಮ ಒಪ್ಪಂದವು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಸೇನಾ ಪ್ರಮುಖ ಫೀಲ್ಡ್ ಮಾರ್ಷಲ್ ಅಸೀಂ ಮುನೀರ್ ಮಧ್ಯಸ್ಥಿಕೆಯಲ್ಲಿ ನಡೆದಿದೆ. ಇವರುಗಳ ಮನವಿಯ ನಂತರ ಇರಾನ್ ಮೇಲಿನ ದಾಳಿಯನ್ನು ಎರಡು ವಾರಗಳ ಕಾಲ ನಿಲ್ಲಿಸಲು ಅಮೇರಿಕ ನಿರ್ಧರಿಸಿದೆ. ಪಾಕಿಸ್ತಾನವು ಎರಡೂ ದೇಶಗಳ ನಡುವಿನ ಮಾತುಕತೆಗೆ ದಾರಿ ಮಾಡಿಕೊಟ್ಟಿದೆ ಎಂದು ಇರಾನ್ ಸಹ ದೃಢಪಡಿಸಿದೆ.

ಈ ಕುರಿತು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೆÇೀಸ್ಟ್ ಮಾಡಿದ್ದು, ಪಶ್ಚಿಮ ಏμÁ್ಯ ಸಂಘರ್ಷದ ಮಧ್ಯೆ ಅಮೇರಿಕ ಮತ್ತು ಇರಾನ್ ತಮ್ಮ ಮಿತ್ರ ರಾಷ್ಟ್ರಗಳೊಂದಿಗೆ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಘೋಷಿಸಿದ್ದಾರೆ.

ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ತಮ್ಮ ಮಿತ್ರ ರಾಷ್ಟ್ರಗಳೊಂದಿಗೆ, ಲೆಬನಾನ್ ಮತ್ತುಇತರೆಡೆ ಸೇರಿದಂತೆ ಎಲ್ಲೆಡೆ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅತ್ಯಂತ ನಮ್ರತೆಯಿಂದ ಘೋಷಿಸಲು ನನಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ಏಪ್ರಿಲ್ 10 ರಂದು ಮಾತುಕತೆ

ಎಲ್ಲಾ ವಿವಾದಗಳನ್ನು ಇತ್ಯರ್ಥಪಡಿಸಲು ನಿರ್ಣಾಯಕ ಒಪ್ಪಂದವನ್ನು ತಲುಪುವ ಗುರಿಯನ್ನು ಎರಡೂ ರಾಷ್ಟ್ರಗಳು ಹೊಂದಿವೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಏಪ್ರಿಲ್ 10 ರಂದು ಎರಡೂ ದೇಶಗಳ ನಿಯೋಗಗಳನ್ನು ಇಸ್ಲಾಮಾಬಾದ್‍ಗೆ ಆಹ್ವಾನಿಸಿದೆ ಎಂದು ಪಾಕ್ ಪ್ರಧಾನಿ ಷರೀಫ್ ಹೇಳಿದ್ದಾರೆ. ಪ್ರಸ್ತಾವಿತ ಇಸ್ಲಾಮಾಬಾದ್ ಮಾತುಕತೆ ಈ ಪ್ರದೇಶದಲ್ಲಿ ಸುಸ್ಥಿರ ಶಾಂತಿ ಮತ್ತು ಸ್ಥಿರತೆಯನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ಪಾಕ್ ಪ್ರಧಾನಿ ಆಶಿಸಿದ್ದಾರೆ.

ಯುದ್ಧದ ಅಂತ್ಯವಲ್ಲ - ಇರಾನ್

ಇರಾನ್ ಮತ್ತು ಅಮೆರಿಕಾ ನಡುವಿನ ಸಂಘರ್ಷಕ್ಕೆ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಗೆ ವ್ಯಕ್ತವಾಗಿ, ಇದರಿಂದ ತಾತ್ಕಾಲಿಕ ಶಾಂತಿಯ ವಾತಾವರಣ ನಿರ್ಮಾಣವಾಗಿದೆಯಾದರೂ, ಇದು ಯುದ್ಧದ ಅಂತ್ಯವಲ್ಲ ಎಂದು ಇರಾನ್‍ನ ಪರಮೋಚ್ಚ ನಾಯಕ ಮೊಜ್ತಾಬಾ ಖಮೇನಿ ಸ್ಪಷ್ಟಪಡಿಸಿದ್ದಾರೆ.

2 ವಾರಗಳ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ ನಂತರ ಇರಾನ್ ನೀಡಿರುವ ಹೇಳಿಕೆ ವಿಶ್ವದ ಗಮನ ಸೆಳೆಯುವಂತೆ ಮಾಡಿದೆ. ಎರಡು ವಾರಗಳ ಕಾಲ ದಾಳಿ ನಿಲ್ಲಿಸುವುದು ಕೇವಲ ತಾತ್ಕಾಲಿಕ ತಂತ್ರ ಮಾತ್ರ, ಅಂತಿಮ ಸಮಸ್ಯೆಗಳು ಇನ್ನೂ ಇತ್ಯರ್ಥಗೊಂಡಿಲ್ಲ ಎಂದು ಹೇಳಿದ್ದಾರೆ.

ಇರಾನ್‍ನ ಎಲ್ಲಾ ಮಿಲಿಟರಿ ಘಟಕಗಳು ತಕ್ಷಣವೇ ದಾಳಿಯನ್ನು ನಿಲ್ಲಿಸಬೇಕು. ಆದರೆ, ಇದು ಯುದ್ಧದ ಅಂತ್ಯವಲ್ಲ."ಶತ್ರುಗಳ ಮೇಲೆ ನಿಗಾ ಇರಲಿ ಮತ್ತು ಕೈಗಳು ಟ್ರಿಗರ್ ಮೇಲಿರಲಿ" ಎನ್ನುವ ಮೂಲಕ ಯಾವುದೇ ಪರಿಸ್ಥಿತಿಯಲ್ಲೂ ಯುದ್ಧಕ್ಕೆ ಸನ್ನದ್ಧರಾಗಿರಿ ಎಂದು ಸಂದೇಶ ನೀಡಿದ್ದಾರೆ.

ಇರಾನ್ ರಾಷ್ಟ್ರ್ರದ ವಿರುದ್ಧ ಅನ್ಯಾಯದ, ಕಾನೂನುಬಾಹಿರ ಮತ್ತು ಕ್ರಿಮಿನಲ್ ಯುದ್ಧ ಎಂದು ಕರೆದ ಅಮೇರಿಕಾಕ್ಕೆ ಇದು "ಹೀನಾಯ ಸೋಲು" ಎಂದು ಬಣ್ಣಿಸಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಈ ವಿರಾಮ ಒಪ್ಪಂದದಲ್ಲಿ ಉಭಯ ರಾಷ್ಟ್ರಗಳು ಸಮ್ಮತಿ ಸೂಚಿಸಿದ್ದು, ಮಧ್ಯಪ್ರಾಚ್ಯ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಕಡಿಮೆ ಮಾಡಲು ಇದು ಮೊದಲ ಹೆಜ್ಜೆಯಾಗಿದೆ ಎಂದು ಪರಿಗಣಿಸಲಾಗುತ್ತಿದೆ.

ವಿಶೇಷವಾಗಿ ಸಮುದ್ರ ಮಾರ್ಗಗಳಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ, ಹಾರ್ಮುಜ್ ಜಲಸಂಧಿಯಲ್ಲಿ ಸಾಗಾಣಿಕೆ ಹಡಗುಗಳಿಗೆ ಸುರಕ್ಷಿತ ಮಾರ್ಗ ಒದಗಿಸುವುದೂ ಈ ಒಪ್ಪಂದದ ಪ್ರಮುಖ ಅಂಶವಾಗಿದೆ.

ಫೆಬ್ರವರಿ 28 ರಂದು ಪ್ರಾರಂಭವಾದ ಸಂಘರ್ಷವನ್ನು ತಗ್ಗಿಸಲು ಪಾಕಿಸ್ತಾನದ ರಾಜತಾಂತ್ರಿಕ ಪ್ರಯತ್ನಗಳ ನಂತರ ಈ ಬೆಳವಣಿಗೆಯಾಗಿದೆ. ಇರಾನ್ ನಾಗರಿಕತೆಯನ್ನು ನಾಶಪಡಿಸುವುದಾಗಿ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ ಕದನ ವಿರಾಮ ಒಪ್ಪಂದ ಜಾರಿಯಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ ಹೇಳಿಕೊಂಡಿದ್ದಾರೆ.

ಷೇರುಪೇಟೆ ಬೆಳವಣಿಗೆ

ಈ ನಡುವೆ ಜಾಗತಿಕ μÉೀರುಪೇಟೆಯಲ್ಲಿ ಕದನ ವಿರಾಮದಿಂದ ಆಶಾಭಾವನೆ ವ್ಯಕ್ತಗೊಂಡಿದ್ದು ಸೆನ್ಸೆÀ್ಸಕ್ಸ್, ನಿಫ್ಟಿ ಹಾಗೂ ಇತರ ಕೆಲವು ಸೂಚ್ಯಂಕಗಳು ಉತ್ತಮ ದಾಖಲೆ ಮಾಡಿವೆ. ಬಹುತೇಕ ಶೇ. 4 ರಷ್ಟು ಹೆಚ್ಚಳ ಕಂಡಿವೆ. ಬ್ಯಾಂಕ್ ನಿಫ್ಟಿ ಬರೋಬ್ಬರಿ ಶೇ. 6 ರಷ್ಟು ಹೆಚ್ಚಿವೆ. ಅಲ್ಲದೆ 110 ಡಾಲರ್ ದಾಟಿ ಹೋಗಿದ್ದ ಕಚ್ಚಾ ತೈಲ ಬೆಲೆ ಎರಡಂಕಿ ಡಾಲರ್ ಮೊತ್ತಕ್ಕೆ ಇಳಿದಿರುವುದು ಮತ್ತೊಂದು ಬೆಳವಣಿಗೆ.