ಮಡಿಕೇರಿ, ಏ. 7: ಒಂದು ಕಡೆ ಶರಣು ಸಿದ್ದಿ ವಿನಾಯಕ ಎಂಬ ಗೀತೆ.. ಮತ್ತೊಂದೆಡೆ ವೈಷ್ಣವೋ ಜನತೋ.. ಎಂಬ ಭಜನೆ. ಇನ್ನೊಂದೆಡೆ ಜೇಡಿಮಣ್ಣಿನಲ್ಲಿ ಗಡಿಗೆ ತಯಾರಿಸುತ್ತಿರುವ ಮಕ್ಕಳು.. ಅಲ್ಲೊಂದು ಬದಿಯಲ್ಲಿ ಪೇಪರ್‍ನಲ್ಲಿಯೇ ವರ್ಣಮಯ ಕಲಾಚಿತ್ರ ರೂಪಿಸುತ್ತಿರುವ ಚಿಣ್ಣರು.. ಮೈದಾನದಲ್ಲಿ ಸ್ಕೇಟಿಂಗ್.. ಕ್ರಿಕೆಟ್, ಹಾಕಿಯ ಸಂಭ್ರಮ...
ಹಳೇ ಕಾಲದಲ್ಲಿ ಬೇಸಿಗೆ ರಜೆಯಲ್ಲಿ ಅಲ್ಲಲ್ಲಿ ಕಂಡು ಬರುತ್ತಿದ್ದ ಮಕ್ಕಳ ಸಂಭ್ರಮದ ಆಟೋಟ, ಕ್ರಿಯಾಚಟುವಟಿಕೆಗಳನ್ನು ಮತ್ತೆ ನೆನಪಿಸುವಂತೆ ಮಡಿಕೇರಿಯ ಕೊಡಗು ವಿದ್ಯಾಲಯದಲ್ಲಿ ಸಮಾಗಮ ಹೆಸರಿನ ಬೇಸಿಗೆ ಶಿಬಿರದಲ್ಲಿ ನೂರಾರು ವಿದ್ಯಾರ್ಥಿಗಳು ಹತ್ತಾರು ಚಟುವಟಿಕೆಗಳಲ್ಲಿ ತಲ್ಲೀನರಾಗಿ ತೊಡಗಿಸಿಕೊಂಡಿದ್ದಾರೆ.
ರಜೆ ಬಂತೆಂದರೆ ಸಾಕು. ಮನೆಯಲ್ಲಿ ಮೊಬೈಲ್ ನೋಡಿಕೊಂಡು ಸೋಷಿಯಲ್ ಮೀಡಿಯಾದೊಳಕ್ಕೆ ನುಸುಳಿ ಬಿಡುವ ಮಕ್ಕಳಿಗೆ ಮೊಬೈಲ್ ಬಿಟ್ಟು ಬಿಡಿ... ಮನಸ್ಸಿಗೆ ಉಲ್ಲಾಸ, ಕ್ರಿಯಾಶೀಲತೆ ನೀಡಿ ಎಂಬಂತೆ ಸಮಾಗಮ ಶಿಬಿರವನ್ನು ಆಯೋಜಿಸಲಾಗಿದೆ.
ಮಂಗಳೂರಿನ ಟೇಬಲ್ ಟೆನ್ನಿಸ್ ತರಬೇತುದಾರರಾದ ಶುಭಂ, ಸಾಥ್ವಿಕ್ 30 ವಿದ್ಯಾರ್ಥಿಗಳಿಗೆ ರೋಬೋಟ್ ಮಾದರಿಯ ಟೇಬಲ್ ಟೆನ್ನಿಸ್ ಕ್ರೀಡೆಯಲ್ಲಿ ತರಬೇತಿ ನೀಡುತ್ತಿದ್ದಾರೆ. ಕೊಡಗಿನಲ್ಲಿ ಬೇಸಿಗೆ ಶಿಬಿರದಲ್ಲಿ ರೋಬೋಟ್ ಮಾದರಿಯನ್ನು ಬಳಸಿಕೊಂಡು ಟೇಬಲ್ ಟೆನ್ನಿಸ್ ತರಬೇತಿ ನೀಡಲಾಗುತ್ತಿರುವುದು ಇದೇ ಮೊದಲು ಎಂದು ಶುಭಂ ಹೇಳಿದರು. ಟೇಬಲ್ ಟನ್ನಿಸ್ ಕ್ರೀಡೆಯಿಂದ ಬಾಲ್ಯದಲ್ಲಿಯೇ ಏಕಾಗ್ರತೆ, ಸ್ವಯಂ ನಿಯಂತ್ರಣ ಗುಣಗಳು ಲಭಿಸುತ್ತವೆ ಎಂದೂ ಅವರು ನುಡಿದರು.
ಚೆಸ್ ಕ್ರೀಡೆಯ ತರಬೇತುದಾರರಾಗಿ ಮಡಿಕೇರಿಯ ಹಿರಿಯ ಚೆಸ್ ತರಬೇತುದಾರರಾದ ಎನ್.ಟಿ. ಶಂಕರ ನಾರಾಯಣ 7 ವಿದ್ಯಾರ್ಥಿಗಳಿಗೆ ತದೇಕಚಿತ್ತತೆಯ ಕ್ರೀಡಾ ಪಾಠ ಮಾಡುತ್ತಿದ್ದಾರೆ. ಕಲೆ ಮತ್ತು ಗುಡಿ ಕೈಗಾರಿಕೆಯಲ್ಲಿಯೂ ನುರಿತ ತರಬೇತುದಾರರು ಸಮಾಗಮದಲ್ಲಿ ತರಬೇತಿ ನೀಡುತ್ತಿದ್ದಾರೆ. ಮುಖ್ಯವಾಗಿ ಮೈಸೂರಿನ ಸಾಂಪ್ರದಾಯಿಕ ಕಲೆ. ವರ್ಲಿ ಆರ್ಟ್, ಸಾಂಚಿ ಆರ್ಟ್, ಪೇಪರ್ ಕಟ್ಟಿಂಗ್, ಫೇಸ್ ಮೇಕಪ್, ಪೆಬ್ಬಲ್ ಪೇಯಿಂಟ್ ಹೀಗೆ ವೈವಿಧ್ಯಮಯ ಕಲಾಪ್ರಕಾರಗಳನ್ನು ಹೇಳಿಕೊಡಲಾಗುತ್ತಿದೆ. ರಾಜ್ಯ ಬಾಲವಿಕಾಸ ಅಕಾಡೆಮಿಯ ಸದಸ್ಯ, ನಾಡಿನ ಖ್ಯಾತ ಕಲಾವಿದ ಎಸ್. ಎಫ್. ಹುಸೇನಿ ಹೇಳಿಕೊಡುತ್ತಿರುವ ಪೇಪರ್ ನಲ್ಲಿ ವಿನೂತನವಾದ ಕಲಾರಚನೆಗಳನ್ನು ಶಿಬಿರಾರ್ಥಿಗಳು ಸಂಭ್ರಮದಿಂದ ಕಲಿಯುತ್ತಿದ್ದಾರೆ.
ಶಾಲೆಗಳಲ್ಲಿ ನಿತ್ಯ ಪ್ರಾರ್ಥನಾ ವೇಳೆ. ಪ್ರಮುಖ ಕಾರ್ಯಕ್ರಮಗಳಲ್ಲಿ ಮೊಳಗಲು ಅತ್ಯಗತ್ಯವಾದ ಬ್ಯಾಂಡ್ ವಾದನದ ಬಗ್ಗೆಯೂ ಶಿಬಿರದಲ್ಲಿ ಕಲಿಸಲಾಗುತ್ತಿದ್ದು, ಗೋವಿಂದ್ ವಿಶ್ವಕರ್ಮ ಬ್ಯಾಂಡ್ ತರಬೇತಿಯನ್ನು 50 ಮಕ್ಕಳಿಗೆ ಕಲಿಸುವ ಮೂಲಕ ಶಾಲೆಗಳಲ್ಲಿ ಬ್ಯಾಂಡ್ ಕಲೆಯನ್ನು ಜೀವಂತವಾಗಿರಿಸಲು ನೆರವಾಗಿದ್ದಾರೆ. ಸಮಾಗಮದಲ್ಲಿ 1 ರಿಂದ 6ನೇ ತರಗತಿಯ ಚಿಣ್ಣರಿಗೂ ಕಿಡ್ಸ್ ಫೆಸ್ಟಿವಲ್ ವಿಭಾಗದಲ್ಲಿ ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆ. ವಿಶೇಷವಾಗಿ ಪ್ರಾರ್ಥನಾ ಗೀತೆ, ಸರ್ವಧರ್ಮ ಪ್ರಾರ್ಥನೆ, ಜಾನಪದ ಗೀತೆ,, ಶಿಶುಗೀತೆಗಳನ್ನು ಪ್ರತಿಭಾ ಶೇಟ್ ಮಾರ್ಗದರ್ಶನದಲ್ಲಿ ಕಲಿಸಲಾಗುತ್ತಿದೆ. ಅಂತೆಯೇ ಬಾಲ್ಯದಲ್ಲಿಯೇ ಸಂಸ್ಕಾರ ಸಂಸ್ಕøತಿಯ ತಿಳುವಳಿಕೆ ಮೂಡಿಸಬೇಕೆಂದು ಯೋಗ, ಧ್ಯಾನದ ಬಗ್ಗೆಯೂ ತರಬೇತಿ ನೀಡಲಾಗುತ್ತಿದೆ. ವೈವಿಧ್ಯಮಯ ನೃತ್ಯಗಳನ್ನು ಇಲ್ಲಿ ಮಕ್ಕಳು ಆಸಕ್ತಿಯಿಂದ ಕಲಿಯುತ್ತಿದ್ದಾರೆ.
ನಶಿಸಿ ಹೋಗುತ್ತಿರುವ ಕುಂಬಾರಿಕೆ ಕಲೆಯ ಬಗ್ಗೆಯೂ ಪ್ರತ್ಯೇಕ ವಿಭಾಗದಲ್ಲಿ ತರಬೇತಿ ನೀಡಲಾಗುತ್ತಿದೆ. ಮಂಗಳೂರಿನ ಕಲಾವಿದ ನಾರಾಯಣ್, ಮಣ್ಣಿನ ಕಲಾಕೃತಿಗಳ ಬಗ್ಗೆ 21 ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ಕ್ಲೇಮಾಡೆಲಿಂಗ್ ಸಂಬಂಧಿತ ತರಬೇತಿಯೂ ಇಲ್ಲಿ ನೀಡಲ್ಪಡುತ್ತಿದೆ. ವಿಶೇಷ ಚೇತನ ಮಕ್ಕಳಿಗೂ ವಿಶೇಷವಾಗಿ ಬೋಚಿ ಗೇಮ್ ಎಂಬ ಕ್ರೀಡಾಶಿಕ್ಷಣದ ಮೂಲಕ ಸಂಭ್ರಮದ ಆಟವನ್ನು ಶಿಬಿರದಲ್ಲಿ ಕಲಿಸಲಾಗುತ್ತಿರುವುದು ವಿಶೇಷ. ಕ್ರೀಡಾ ವಿಭಾಗಗಳಲ್ಲಿ ನುರಿತ ತರಬೇತುದಾರರು ಕ್ರೀಡಾಸಕ್ತ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದು ಎ.ಎಂ. ಕ್ರಿಸ್ಟೋಫರ್ (ಪುಟ್ಬಾಲ್), ಹಾಕಿ (ನರೇನ್ ಬೆಳ್ಯಿಯಪ್ಪ, ನಾಗೇಶ್ ಎಸ್.) ಕ್ರಿಕೆಟ್ (ಡಾ. ಎನ್. ಟ್ರೇವರ್ ಡೇಸ್), ಬಾಸ್ಕೆಟ್ ಬಾಲ್ (ಶೋಯಲ್ ಜಯಂ,) ಹ್ಯಾಂಡ್ ಬಾಲ್ (ಗ್ರಿನಿಚ್ ಡಿಕುನ), ರೇಷ್ಮ ದೇವಯ್ಯ (ಅಥ್ಲೆಟಿಕ್ಸ್,) ಪಿಕಲ್ ಬಾಲ್. (ರಜತ್), ಸ್ಕೇಟ್ ಬೋರ್ಡ್ (ಮೇಕೇರಿರ ಸೋಮಣ್ಣ) ಕರಾಟೆ (ಶೋಭಿತಾ ಕೆ.ಆರ್,) ಬಬಿತಾ, ಮತ್ತು ಇಂದು (ಕುಂಬಾರಿಕೆ) ಯೋಗ (ವಿದ್ಯಾ), ರೋಜಾ (ಸುಗಮ ಸಂಗೀತ), ದಿವ್ಯ (ನೃತ್ಯ) ರಮ್ಯ (ಕಲಾಕೃತಿ ರಚನೆ) ಕಲಿಕೆಯ ಹೊಣೆ ನಿರ್ವಹಿಸುತ್ತಿದ್ದಾರೆ. ಕೊಡಗು ವಿದ್ಯಾಲಯದಲ್ಲಿ 30 ವರ್ಷಗಳಿಂದ ಬೇಸಿಗೆಯಲ್ಲಿ ಕ್ರೀಡಾಶಿಬಿರ ಆಯೋಜಿಸುತ್ತಾ ಬರಲಾಗಿದೆ. ಕಳೆದ 5 ವರ್ಷಗಳಿಂದ ಕ್ರೀಡೆಯ ಜೊತೆಗೇ ಇತರ ಸಾಂಸ್ಕøತಿಕ ಚಟುವಟಿಕೆಗಳ ತರಬೇತಿಯನ್ನೂ ಸಮಾಗಮ ಹೆಸರಿನ ಶಿಬಿರದಲ್ಲಿ ನೀಡಲಾಗುತ್ತಿದೆÀ. ಈ ವರ್ಷ ಕೊಡಗು ವಿದ್ಯಾಲಯ ಮಾತ್ರವಲ್ಲದೇ ಇತರ ಶಿಕ್ಷಣ ಸಂಸ್ಥೆಗಳಿಂದಲೂ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಶಿಬಿರಕ್ಕೆ ಬಂದಿರುವುದು ಆಶಾದಾಯಕವಾಗಿದೆ. 218 ವಿದ್ಯಾರ್ಥಿಗಳು ಸಮಾಗಮದ ವಿವಿಧ ತರಬೇತಿ ಕಾರ್ಯಕ್ರಮಗಳಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದಾರೆ ಎಂದು ಕೊಡಗು ವಿದ್ಯಾಲಯದ ಪ್ರಾಂಶುಪಾಲೆ ಕೆ.ಎಸ್. ಸುಮಿತ್ರಾ ಹೇಳಿದರು. ತಾ. 22 ರಂದು ಸಮಾಗಮದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳು ತಯಾರಿಸಿದ ವೈವಿಧ್ಯಮಯ ಕಲಾಕೃತಿಗಳ ಪ್ರದರ್ಶನ ಆಯೋಜಿತವಾಗಿದೆ. ಸಾರ್ವಜನಿಕರಿಗೆ ಪ್ರವೇಶವಿದೆ. ಮೊಬೈಲ್ ಗುಂಗಿನಿಂದ ವಿದ್ಯಾರ್ಥಿಗಳು ಹೊರಬಂದದ್ದೇ ಆದಲ್ಲಿ ಪುಟಾಣಿಗಳಲ್ಲಿರುವ ಅಪೂರ್ವ ಕ್ರಿಯಾಶೀಲತೆ, ಬುದ್ಧಿ ವಂತಿಕೆ ಮತ್ತು ಏಕಾಗ್ರತೆಗೆ ಸಮಾಗಮದಂತಹ ಬೇಸಿಗೆ ಶಿಬಿರ ಸೂಕ್ತ ವೇದಿಕೆ ಕಲ್ಪಿಸುತ್ತದೆ. ಮಕ್ಕಳಲ್ಲಿ ಬೇಸಿಗೆ ರಜೆಯ ಮೋಜು ಮಜದ ಕಲ್ಪನೆಯೇ ಮರೆಯಾಗುತ್ತಿರುವ ಸಂದರ್ಭ ಇಂಥ ಕ್ರಿಯಾಶೀಲ ಬೇಸಿಗೆ ಶಿಬಿರಗಳ ಅಗತ್ಯತೆ ಹೆಚ್ಚಾಗಿದೆ. - ಅನಿಲ್ ಎಚ್.ಟಿ.