ಮಡಿಕೇರಿ, ಏ. 7: ಕೊಡಗು - ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪ್ರಯತ್ನದ ಮೇರೆಗೆ ಕೊಡಗು ಜಿಲ್ಲೆಯಲ್ಲಿ ಪಾಸ್‍ಪೋರ್ಟ್ ಮೇಳ ಆಯೋಜನೆ ಮಾಡಲಾಗಿದ್ದು, ತಾ. 8 ರಂದು (ಇಂದು) ಮೇಳಕ್ಕೆ ಚಾಲನೆ ದೊರೆಯಲಿದೆ.
ಮಡಿಕೇರಿಯ ಗಾಂಧಿ ಭವನದಲ್ಲಿ ಆಯೋಜನೆ ಮಾಡಲಾಗಿರುವ ಮೇಳಕ್ಕೆ ಬೆಳಿಗ್ಗೆ 10.30ಕ್ಕೆ ಸಂಸದರು ಚಾಲನೆ ನೀಡಲಿದ್ದಾರೆ. ಪಾಸ್‍ಪೋರ್ಟ್ ಅಗತ್ಯವಿರುವವರು ಈ ಮೇಳದ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ಮೇಳವು ಮೂರು ದಿನಗಳ ಕಾಲ ನಡೆಯಲಿದೆ.
ಇದಕ್ಕೂ ಮುನ್ನ ಸಂಸದರು ಬೆಳಿಗ್ಗೆ 9ಗಂಟೆಗೆ ಸೋಮವಾರಪೇಟೆಯ ತಾಕೇರಿ ಗ್ರಾಮದ ಕಾಲಭೈರವೇಶ್ವರ ಮತ್ತು ವನದುರ್ಗಾದೇವಿ ಪುನರ್ ಪ್ರತಿಷ್ಠಾಪನಾ ಮತ್ತು ಅಷ್ಟಬಂಧ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ನಂತರ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 12.30ಗಂಟೆಗೆ ಮಡಿಕೇರಿ ನಗರದ ಪಾರಂಪರಿಕ ಕಸ ವಿಲೇವಾರಿ ಘಟಕ ಕಾಮಗಾರಿ ವೀಕ್ಷಣೆ, 1.30ಕ್ಕೆ ಅಮೃತ್-2.0 ಯೋಜನೆಯಡಿ ಮಡಿಕೇರಿ ನಗರದಲ್ಲಿ ನಡೆಯುತ್ತಿರುವ ಕಾಮಗಾರಿ ಹಾಗೂ ಕಾವೇರಿ ಬಡಾವಣೆಯಲ್ಲಿ ಅಮೃತ್ 2.0 ಯೋಜನೆಯಡಿ ನಡೆಯುತ್ತಿರುವ ಪಾರ್ಕ್ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಲಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.