ಕುಶಾಲನಗರ, ಏ. 7: ಸರಕಾರದ ನಿರ್ದೇಶನದಂತೆ ಬಿಪಿಎಲ್ ಪಡಿತರ ಚೀಟಿಗಳನ್ನು ಎಪಿಎಲ್ ಪಡಿತರ ಚೀಟಿಯನ್ನಾಗಿ ಪರಿವರ್ತಿಸಿದ ಹಿನ್ನೆಲೆಯಲ್ಲಿ ಉಂಟಾಗಿರುವ ಗೊಂದಲಗಳನ್ನು ನಿವಾರಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಮಡಿಕೇರಿ ಕ್ಷೇತ್ರ ಶಾಸಕÀ ಡಾ. ಮಂತರ್ ಗೌಡ ಆಹಾರ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕುಶಾಲನಗರದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಪುರಸಭೆ ಸಭಾಂಗಣದಲ್ಲಿ ನಡೆದ ಕುಶಾಲನಗರ ತಾಲೂಕು ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಸಮಗ್ರ ಮಾಹಿತಿ ಪಡೆದು ಶಾಸಕರು ಕೂಡಲೇ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಮತ್ತೆ ಎಪಿಎಲ್ ನಿಂದ ಬಿಪಿಎಲ್ ಗೆ ಮರು ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಈ ಸಂಬಂಧ ಅರ್ಹ ಬಿಪಿಎಲ್ ಪಡಿತರ ಚೀಟಿದಾರರು ಕೂಡಲೇ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು.
ಆಹಾರ ಇಲಾಖೆಯ ಉಪ ನಿರ್ದೇಶಕ ಭೀಮರಾಯ ಕೆಲ್ಲೂರು ಅವರಿಂದ ಸಮಗ್ರ ಮಾಹಿತಿ ಪಡೆದ ಶಾಸಕರು, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಏಕಾಏಕಿ ಬಿಪಿಎಲ್ ನಿಂದ ಎಪಿಎಲ್ ಮಾಡಿದ ಹಿನ್ನೆಲೆಯಲ್ಲಿ ಅರ್ಹ ಫಲಾನುಭವಿಗಳಿಗೆ ಸಮಸ್ಯೆ ಉಂಟಾಗಿದೆ. ಗಿರಿಜನ ಹಾಡಿಯಲ್ಲಿ ಹಲವರಿಗೆ ಪಡಿತರ ವಸ್ತುಗಳು ಹಾಗೂ ಸರಕಾರಿ ಸೌಲಭ್ಯಗಳು ಸಿಗದಂತಾಗಿದೆ ಎಂದು ಹೇಳಿದರು.
ಈ ಸಮಸ್ಯೆ ಬಗ್ಗೆ ಸುದೀರ್ಘ ಚರ್ಚೆ ನಡೆದು ಸಭೆಯಲ್ಲಿ ಉಪಸ್ಥಿತರಿದ್ದ ತಾಲೂಕು ಗ್ಯಾರಂಟಿ ಅನುμÁ್ಠನ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಅಧಿಕಾರಿಗಳು ಜನಪರ ಆಗಿರಬೇಕು, ಹೊರತು ಜನ ಪೀಡಕರಾಗಬಾರದು. ಇಲಾಖೆಯಲ್ಲಿ ಮಾನವೀಯತೆಯಿಂದ ಕೆಲಸ ನಿರ್ವಹಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಇದೇ ಸಂದರ್ಭ ಅನಿಲ ಸಿಲಿಂಡರ್ ಬಗ್ಗೆ ಮಾಹಿತಿ ನೀಡಿದ ಆಹಾರ ಇಲಾಖೆ ಅಧಿಕಾರಿ ಭೀಮರಾಯ ಅವರು ಜಿಲ್ಲೆಯಲ್ಲಿ ಮನೆಬಳಕೆ ಅನಿಲ ಸಿಲಿಂಡರ್ಗಳಿಗೆ ಯಾವುದೇ ರೀತಿಯ ಕೊರತೆ ಕಂಡುಬಂದಿಲ್ಲ. ಆದರೆ ವಾಣಿಜ್ಯ ಬಳಕೆ ಸಿಲಿಂಡರ್ಗಳಿಗೆ ತೊಂದರೆ ಉಂಟಾಗಿದೆ ಎಂದು ತಿಳಿಸಿದ ಅವರು ದಿನವೊಂದಕ್ಕೆ 1200 ಸಿಲಿಂಡರ್ ಅಗತ್ಯವಿದ್ದು ಕೇವಲ 250 ಸಿಲಿಂಡರ್ಗಳು ಸರಬರಾಜು ಆಗುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕ ಮಂತರ್ ಗೌಡ ಅವರು; ಆಸ್ಪತ್ರೆ, ವಸತಿಗೃಹಗಳು, ಅಂಗನವಾಡಿ ಹೊಟೆಲ್ ಮತ್ತು ರೆಸಾರ್ಟ್ ಗಳಿಗೆ ಆದ್ಯತೆ ಪ್ರಕಾರ ಸಿಲಿಂಡರ್ ಒದಗಿಸಲು ಕ್ರಮ ಕೈಗೊಳ್ಳಬೇಕು.
ಯಾವುದೇ ಸಂದರ್ಭ ಕಾಳ ಸಂತೆಯಲ್ಲಿ ಸಿಲಿಂಡರ್ ಮಾರಾಟ ಆಗದಂತೆ ಎಚ್ಚರ ವಹಿಸಬೇಕು. ಸಿಲಿಂಡರ್ ಕೊರತೆ ಹೆಸರಿನಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಹೊರೆ ಆಗಬಾರದು, ಆಟೋ ಮತ್ತಿತರ ವಾಹನಗಳಿಗೆ ಅಗತ್ಯವಿರುವ ಎಲ್ ಪಿ ಜಿ ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಅನಿಲ ಅಕ್ರಮ ರಿಫೀಲ್ ಬಗ್ಗೆ ದಾಳಿ ನಡೆಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದು ಮತ್ತು ಸಿಲಿಂಡರ್ ನಲ್ಲಿ ತೂಕ ವ್ಯತ್ಯಾಸ ಆಗದಂತೆ ಮತ್ತು ದುಬಾರಿ ದರದಲ್ಲಿ ಮಾರಾಟ ಆಗದಂತೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ನದಿ ತಟದಲ್ಲಿ ಯಾವುದೇ ರೀತಿಯ ಅಕ್ರಮ ಕಟ್ಟಡಗಳು ನಿರ್ಮಾಣವಾಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದ ಶಾಸಕರು; ಕುಶಾಲನಗರ ತಾವರೆಕೆರೆ ಅಭಿವೃದ್ಧಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ನದಿಯಿಂದ 50 ಮೀಟರ್ ಅಂತರದ ತನಕ ಹಾಗೂ ಕೆರೆಗಳಿಂದ ನೂತನ ಆದೇಶ ಪ್ರಕಾರ ಆರು ಮೀಟರ್ ದೂರದ ತನಕ ಯಾವುದೇ ಕಟ್ಟಡಗಳನ್ನು ನಿರ್ಮಾಣಕ್ಕೆ ಅವಕಾಶ ಕಲ್ಪಿಸಬಾರದು, ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ವಾರದ ಸಂತೆ ನಡೆಯುತ್ತಿದ್ದು ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದೆ. ತ್ಯಾಜ್ಯಗಳನ್ನು ನದಿ ಬದಿಯಲ್ಲಿ ರಾಶಿ ಹಾಕಿ ಬೆಂಕಿ ಹಾಕುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ತಿಳಿಸಿದ ಶಾಸಕರು ಮಾರುಕಟ್ಟೆಯ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡರು. ಸಮರ್ಪಕ ಸ್ವಚ್ಛತಾ ಕಾರ್ಯದ ಹಿನ್ನೆಲೆಯಲ್ಲಿ ತಕ್ಷಣ ಈ ಸ್ವಚ್ಛತಾ ವ್ಯವಸ್ಥೆಯನ್ನು ಮತ್ತು ಸಂತೆ ವ್ಯಾಪಾರಿಗಳಿಂದ ಸುಂಕ ವಸೂಲಿ ವ್ಯವಸ್ಥೆಯನ್ನು ಕುಶಾಲನಗರ ಪುರಸಭೆಯ ಸುಪರ್ದಿಗೆ ನೀಡುವಂತೆ ಶಾಸಕರು ಮಾರುಕಟ್ಟೆ ಅಧಿಕಾರಿಗೆ ತಿಳಿಸಿದರು. ತಾಲೂಕಿನ ಪ್ರತಿ ಪಂಚಾಯಿತಿಗಳ ಅಭಿವೃದ್ಧಿಗೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ 80 ಲಕ್ಷದಿಂದ ಒಂದು ಕೋಟಿ ತನಕ ಅನುದಾನ ನೀಡಲಾಗಿದೆ ಎಂದು ಶಾಸಕರು ಮಾಹಿತಿ ಒದಗಿಸಿದರು. ಕುಶಾಲನಗರ ಪಟ್ಟಣದ ಮುಖ್ಯ ರಸ್ತೆಯ ಅಭಿವೃದ್ಧಿಗೆ ಸರ್ಕಾರದಿಂದ ಈಗಾಗಲೇ 5.5 ಕೋಟಿ ಅನುದಾನ ಲಭಿಸಿದ್ದು ಪಟ್ಟಣದ ರಥ ಬೀದಿಯನ್ನು ಸೌಂದರೀಕರಣ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಶಾಸಕರು ಹೇಳಿದರು. ಸಭೆಯಲ್ಲಿ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಹಮೀದ್, ಟಿ.ಬಿ. ಜಗದೀಶ್, ಸ್ವಾಮಿ, ಹನೀಫ್, ಕೆ.ಎನ್. ಅಶೋಕ್ ಗ್ರಾಮ ಪಂಚಾಯಿತಿಗಳ ಆಡಳಿತ ಅಧಿಕಾರಿ ಅಬ್ದುಲ್ಲಾ, ಕಾರ್ಯ ನಿರ್ವಹಣಾಧಿಕಾರಿ ಪರಮೇಶ್ವರಪ್ಪ ತಾಲೂಕು ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಮತ್ತು ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ, ಪುರಸಭೆಯ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.