ವಾಷಿಂಗ್‍ಟನ್, ಏ.7: 1970ರಲ್ಲಿ ಅಪಾಲೋ-13 ಯೋಜನೆಯಡಿಯಲ್ಲಿ ಚಂದ್ರಲೋಕವನ್ನು ಪರಿಭ್ರಮಿಸಿ ಭೂಮಿಯಿಂದ ಮಾನವರು ಅತಿ ದೂರ ಸಾಗಿದ್ದ ದಾಖಲೆ ನಿರ್ಮಾಣವಾಗಿದ್ದು, ಇದೀಗ 5 ದಶಕಗಳ ಬಳಿಕ ಆರ್ಟಿಮಿಸ್-2 ಯೋಜನೆ ಮೂಲಕ ಆ ದಾಖಲೆ ಮುರಿದಂತಾಗಿದೆ.

ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ(ನಾಸಾ)ಯ 4 ಗಗನಯಾತ್ರಿಕರು ತಾ.6ರ ತಡರಾತ್ರಿ ಹೊತ್ತಿಗೆ (11:26) ಈ ದಾಖಲೆ ಮುರಿದಿದ್ದಾರೆ. ಅಪೋಲೋ 13 ಗಗನಯಾತ್ರಿಕರು ಭೂಮಿಯಿಂದ 4 ಲಕ್ಷ 171 ಕಿ.ಮೀ ದೂರ ಸಾಗಿ ಭೂಮಿಯಿಂದ ಮಾನವನು ಅತಿ ದೂರ ಸಾಗಿದ್ದ ದಾಖಲೆ ನಿರ್ಮಿಸಿದ್ದರು. ಈ ದಾಖಲೆ ಇದೀಗ ಮುರಿದಿದ್ದು, ಆರ್ಟಿಮಿಸ್-2 ಗಗನಯಾತ್ರಿಕರು 4 ಲಕ್ಷ 6 ಸಾವಿರ 771 ಕಿ.ಮೀ ದೂರ ಸಾಗಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಚಂದ್ರ ಪರಿಭ್ರಮಣೆ ಸಂದರ್ಭ ಚಂದ್ರನ ಪದರದಿಂದ ಕನಿಷ್ಟ ದೂರ 6,535 ಕಿ.ಮೀ ಎತ್ತರದಲ್ಲಿ ನೌಕೆಯು ಸಾಗಿತ್ತು. ನಿನ್ನೆ ರಾತ್ರಿ (ತಾ.6) 10:30ರ ಹೊತ್ತಿಗೆ ಚಂದ್ರನನ್ನು ಸಮೀಪಿಸಿದ ಗಗನಯಾತ್ರಿಕರನ್ನು ಹೊತ್ತ ಒರಯನ್ ನೌಕೆ, ತಡರಾತ್ರಿ 11:26ರ ವೇಳೆಗೆ ಅಪಾಲೋ 13ರ ದಾಖಲೆ ಮುರಿಯಿತು. ಮಧ್ಯರಾತ್ರಿ (ತಾ.7) 12:15ರ ವೇಳೆಗೆ ಗಗನಯಾತ್ರಿಕರು ಚಂದ್ರನ ವೀಕ್ಷಣೆ-ಅಧ್ಯಯನದಲ್ಲಿ ತೊಡಗಿಸಿಕೊಂಡರು. ತಾ.7ರ ಬೆಳಿಗ್ಗೆ 4:15ರ ವೇಳೆಗೆ ನೌಕೆಯು ಚಂದ್ರನ ಹಿಂದೆ ಸಾಗಿದರಿಂದ ಸುಮಾರು 40 ನಿಮಿಷಗಳ ಕಾಲ ಭೂಮಿಯೊಂದಿಗೆ ಸಂಪೂರ್ಣ ಸಂಪರ್ಕ ಕಳೆದುಕೊಂಡಿತು. ಇದು ಈ ಯೋಜನೆಯ ಆತಂಕಕಾರಿ ಘಟ್ಟವಾಗಿತ್ತು. 4:30ಕ್ಕೆ ಚಂದ್ರನ ಪದರದಿಂದ ಅತಿ ಹತ್ತಿರದಲ್ಲಿ(6,535 ಕಿ.ಮೀ ಎತ್ತರ) ನೌಕೆ ಸಾಗಿತು. 4:35ಕ್ಕೆ ಹೊಸ ದಾಖಲೆ (ಭೂಮಿಯಿಂದ ಅತಿ ದೂರ ಸಾಗಿರುವ ಮಾನವ - 4 ಲಕ್ಷ 6 ಸಾವಿರ 771 ಕಿ.ಮೀ) ನಿರ್ಮಾಣಗೊಂಡಿತು. 4:55 ವೇಳೆಗೆ ಭೂಮಿಯೊಂದಿಗೆ ಮತ್ತೆ ಸಂಪರ್ಕ ಸಾಧನೆ ಮಾಡಿದ ನೌಕೆ, 6:05ರ ವೇಳೆಗೆ ಸೂರ್ಯ-ಚಂದ್ರರ ಹಿಂದೆ ನೇರವಾಗಿ ಸರಿದ ಕಾರಣ ನೌಕೆಯಿಂದ ಸೂರ್ಯಗ್ರಹಣ ವೀಕ್ಷಣೆ ಸಾಧ್ಯವಾಯಿತು. ಬೆಳಿಗ್ಗೆ 7 ಗಂಟೆಯ ತನಕವೂ ಇದು ಮುಂದುವರಿಯಿತು.

ಇದಾದ ಬಳಿಕ ಯು.ಎಸ್.ಎ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೇರ ಸಂಪರ್ಕ ಮೂಲಕ 4 ಗಗನಯಾತ್ರಿಕರಾದ ಕಮಾಂಡರ್ ರೀಡ್ ವೈಸ್‍ಮ್ಯಾನ್, ಪೈಲೆಟ್ ವಿಕ್ಟರ್ ಗ್ಲೋವರ್, ಮಿಷನ್ ಸ್ಪೆಷಲಿಸ್ಟ್ ಕ್ರಿಸ್ಟೀನಾ ಕೋಚ್ ಹಾಗೂ ಜೆರೆಮಿ ಹ್ಯಾನ್‍ಸನ್ ರೊಂದಿಗೆ ಸಂಭಾಷಣೆ ನಡೆಸಿದರು. ಅಮೇರಿಕಾವು ಇತ್ತೀಚಿನ ದಿನಗಳಲ್ಲಿ ಅದ್ಭುತ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ಈ ನಡುವೆ ಇಂತಹ ಒಂದು ಯೋಜನೆಯನ್ನು ನಾಸಾ ಮೂಲಕ ಗಗನಯಾತ್ರಿಕರು ಪೂರೈಸಿದ್ದು ದೇಶಕ್ಕೆ ಇನ್ನಷ್ಟು ಹೆಮ್ಮೆ ತಂದಿದೆ ಎಂದರು. ನಾಸಾ ನಿರ್ಮಿತ ಅತ್ಯಂತ ಶಕ್ತಿಶಾಲಿ ರಾಕೆಟ್ ಸಹಕಾರದಲ್ಲಿ ಗಗನಯಾತ್ರಿಕರು ನೌಕೆ ಮೂಲಕ ಉಡಾವಣೆಗೊಂಡು ಅಪಾಲೋ-13ರ ದಾಖಲೆ ಮುರಿದಿರುವುದು ವಿಶೇಷ. ಮುಂದಿನ ದಿನಗಳಲ್ಲಿ ಚಂದ್ರನಲ್ಲಿ ಮತ್ತೇ ಮಾನವ ಕಾಲಿಡಲು ಈ ಯೋಜನೆ ಸಹಕಾರಿಯಾಗಿದೆ. ಈ ಯೋಜನೆ ಬಳಿಕ ಸುಮ್ಮನಿರುವುದಿಲ್ಲ, ಚಂದ್ರನಲ್ಲಿ ಕೇವಲ ಹೆಜ್ಜೆ ಇಟ್ಟು ವಾಪಸ್ಸು ಬರುವುದಿಲ್ಲ. ಅಲ್ಲಿ ಶಾಶ್ವತ ನೆಲೆ ಶೀಘ್ರದಲ್ಲಿಯೇ ನಿರ್ಮಾಣ ಮಾಡುವ ಮಹಾತ್ವಾಕಾಂಕ್ಷೆಯ ಗುರಿ ಹೊಂದಿದೆ ಹಾಗೂ ಮಂಗಳ ಗ್ರಹಕ್ಕೂ ಗಗನಯಾತ್ರಿಕರು ಪಯಣ ಬೆಳೆಸಲಿದ್ದಾರೆ ಎಂದರು.

ಇದೀಗ ಭೂಮಿಯತ್ತ ಮುಖ ಮಾಡಿರುವ ನೌಕೆಯು ಇನ್ನು 4 ದಿನಗಳಲ್ಲಿ ಭೂ-ಕಕ್ಷೆ ಸೇರಿ ಪೆಸಿಫಿಕ್ ಮಹಾಸಾಗರದಲ್ಲಿ ಬಂದಿಳಿಯುವ ನಿರೀಕ್ಷೆಯಿದೆ.