ವೀರಾಜಪೇಟೆ ಏ. 6: ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ 1979ನೇ ಸಾಲಿನಲ್ಲಿ ಬಿ. ಎ ವ್ಯಾಸಂಗ ಪೂರ್ಣ ಗೊಳಿಸಿದ ಹಳೆಯ ವಿದ್ಯಾರ್ಥಿಗಳ ಆರನೇ ವರ್ಷದ ಸಮ್ಮಿಲನ ಕಾರ್ಯಕ್ರಮ ಅತ್ತೂರಿನಲ್ಲಿರುವ ದಿ ಬಾರ್ನ್ ರೆಸಾರ್ಟ್‍ನಲ್ಲಿ ನಡೆಸಲಾಯಿತು.
ಅಮ್ಮಾಟಂಡ ರತಿ, ಬೇಬಿ ರೈ, ವಾಟೇರಿರ ಪುಷ್ಪ ಮತ್ತು ಕೋಟ್ರಮಾಡ ಸಾವಿತ್ರಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬೆಳಗಿನಿಂದಲೇ ಉತ್ಸಾಹದಿಂದ ಪಾಲ್ಗೊಂಡಿದ್ದ ಹಳೆ ವಿದ್ಯಾರ್ಥಿಗಳು ಹಲವಾರು ರೀತಿಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಭಾಗವಹಿಸಿ ಬಹುಮಾನಗಳನ್ನು ಗಳಿಸುವುದರ ಮೂಲಕ ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿದರು. ಅಲ್ಲದೆ ಕಾವೇರಿ ಕಾಲೇಜು ಅಲುಮಿನೈ ಅಸೋಸಿಯೇಷನ್ ಕಟ್ಟಿಸುತ್ತಿರುವ ಕಟ್ಟಡಕ್ಕೆ 6,25,000 ರೂಗಳನ್ನು ತಮ್ಮ ಬ್ಯಾಚಿನಿಂದ ನೀಡುವಂತೆ ಈ ಸಂದರ್ಭದಲ್ಲಿ ತೀರ್ಮಾನಿಸಿದರು. ಚೋನಿರ ದಿನಕರ್ ಮತ್ತು ಪಳಂಗಂಡ ವಾಣಿ ಚೆಂಗಪ್ಪ ಆರು ವರ್ಷಗಳಿಂದ ಸಮ್ಮಿಲನ ಕಾರ್ಯಕ್ರಮ ಸಾಗಿ ಬಂದ ಹಾದಿಯನ್ನು ಕುರಿತು ವಿವರಣೆ ನೀಡಿದರು. ಗುಮ್ಮಟಿರ ಗಂಗಮ್ಮ ವಾರ್ಷಿಕ ವರದಿ ಓದಿದರು. ಮಲ್ಲೆಂಗಡ ಮಧು ಕುಶಾಲಪ್ಪ ಲೆಕ್ಕಪತ್ರ ವರದಿ ಓದಿದರು. ಮಧ್ಯಾಹ್ನದ ಬೋಜನದ ನಂತರ ಮಲ್ಲೆಂಗಡ ಮಧು ಕುಶಾಲಪ್ಪ, ನಾಮೆರ ರವಿ ದೇವಯ್ಯ ಮತ್ತು ಪಳಂಗಂಡ ವಾಣಿ ಚಂಗಪ್ಪ ಅವರ ಉಪಸ್ಥಿತಿಯಲ್ಲಿ ಮನೋರಂಜನಾ ಕಾರ್ಯಕ್ರಮ ನಡೆಯಿತು.
ಮೊದಲಿಗೆ 79ನೇ ಬ್ಯಾಚ್‍ನ ವಿದ್ಯಾರ್ಥಿಯಾಗಿದ್ದ ಕಾವೇರಿ ಕಾಲೇಜಿನ ನಿವೃತ್ತ ಪೆÇ್ರ.ತಿರುನಲ್ಲಿಮಾಡ ದೇವಯ್ಯ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು. ಹಾಗೆಯೇ ವಾಲಗತಾಟ್ ಕಾರ್ಯಕ್ರಮ, ಕವನ ಓದುವುದು, ಕೊಡವ ಕ್ವಿಜ್, ಜೋಕ್ಸ್, ಹಳೆಯ ಕೊಡವ, ಹಿಂದಿ, ಕನ್ನಡ ಹಾಡುಗಳನ್ನು ಪ್ರಸ್ತುತಪಡಿಸಿದರು. ತಾವೇ ಆಯೋಜಿಸಿಕೊಂಡ ಕಾರ್ಯಕ್ರಮದ ಸ್ಪರ್ಧೆಗೆ ತಮ್ಮದೇ ಪ್ರಾಯೋಜಕತ್ವದಲ್ಲಿ ಬಹುಮಾನವನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವುದರೊಂದಿಗೆ ಕಾಲೇಜಿನ ಯುವ ಮನಸ್ಸಿನ ನೆನಪುಗಳನ್ನು ಮೆಲುಕು ಹಾಕಿ ಸಂಜೆಯವರೆಗೂ ಜೊತೆ ಸೇರಿ ಸಂತಸವನ್ನು ಹಂಚಿಕೊಂಡರು.