ಮಡಿಕೇರಿ, ಏ. 6: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಪ್ರಗತಿ ಸಹಿಸಲಾಗದೆ ನಿರಾಧಾರ ಆರೋಪವನ್ನು ಸೃಷ್ಟಿಸಿ ಕಪ್ಪುಚುಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಬ್ಯಾಂಕ್‍ನ ಆಡಳಿತ ಮಂಡಳಿ ದೂರಿದೆ.

ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಅಧ್ಯಕ್ಷತೆಯಲ್ಲಿ ಡಿಸಿಸಿ ಬ್ಯಾಂಕ್‍ನ ಉನ್ನತಿ ಭವನದಲ್ಲಿ ಗ್ರಾಹಕರ ಅಹವಾಲು ಸಭೆಯನ್ನು ನಿಗದಿಪಡಿಸಲಾಗಿತ್ತು. ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಬಾಂಡ್ ಗಣಪತಿ ಆಹ್ವಾನ ನೀಡಿದ್ದರು. ಆದರೆ, ಯಾರು ಕೂಡ ಸಭೆಗೆ ಹಾಜರಾಗದ ಹಿನ್ನೆಲೆ ಆಡಳಿತ ಮಂಡಳಿಯ ಸಭೆ ನಡೆಸಿ ಈ ಕುರಿತು ವಿವರಣೆ ನೀಡಿದರು. ಬ್ಯಾಂಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ವಿಶೇಷವಾಗಿ ರೈತರಿಗಾಗಿ ಅನೇಕ ಯೋಜನೆಗಳನ್ನು ವಿಸ್ತರಿಸಲಾಗಿದೆ. ಉತ್ತಮ ಲಾಭದಲ್ಲೂ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವರು ಇಲ್ಲಸಲ್ಲದ ಆರೋಪವನ್ನು ಬ್ಯಾಂಕ್ ವಿರುದ್ಧ ಮಾಡುತ್ತಿದ್ದಾರೆ. ಅದರಲ್ಲೂ ತನ್ನ ವಿರುದ್ಧ ಗುರಿ ಮಾಡಿ ಅನಾವಶ್ಯಕ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ. ಬ್ಯಾಂಕ್‍ನಲ್ಲಿ ಯಾವುದೇ ಅವ್ಯವಹಾರವಾಗಲಿ, ಅಕ್ರಮಗಳಾಗಲಿ ನಡೆದಿಲ್ಲ. ಲೆಕ್ಕಪರಿಶೋಧನೆಗಳು ವ್ಯವಸ್ಥಿತವಾಗಿ ಕಾಲಕಾಲಕ್ಕೆ ನಡೆಯುತ್ತಿವೆ. ಪಾರದರ್ಶಕ ಆಡಳಿತವನ್ನು ನೀಡಲಾಗುತ್ತಿದೆ. ತಪ್ಪು ಮಾಡಿದ ಕೆಲ ಸಿಬ್ಬಂದಿಗಳನ್ನು ವರ್ಗಾವಣೆ, ವಜಾ ಮಾಡುವ ಕ್ರಮವನ್ನು ಆಡಳಿತ ಮಂಡಳಿ ಮುಂದಿಟ್ಟು ನಿರ್ಧರಿಸಿ ಕೈಗೊಳ್ಳಲಾಗಿದೆ ಹೊರತು ಏಕಪಕ್ಷೀಯ ನಿರ್ಧಾರವನ್ನು ಎಂದಿಗೂ ಕೈಗೊಂಡಿಲ್ಲ. ಕಾನೂನು ಮೀರಿ ಸಿಬ್ಬಂದಿ ನೇಮಕಾತಿಯೂ ಆಗಿಲ್ಲ. ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಸಮಕ್ಷಮದಲ್ಲಿ ಪ್ರಕ್ರಿಯೆ ನಡೆದು ನೇಮಕಾತಿ ಮಾಡಿಕೊಳ್ಳಲಾಗಿದೆ. ಅಲ್ಲದೆ ಆರ್‍ಬಿಐ ದಂಡ ವಿಧಿಸಿದ ಕುರಿತು ಇದೀಗ ಚರ್ಚಿಸಲಾಗುತ್ತಿದ್ದು, ಇದು ಯಾವುದೇ ಅವ್ಯವಹಾರ, ಅಕ್ರಮಕ್ಕಾಗಿ ವಿಧಿಸಿದ ದಂಡವಲ್ಲ. ರಾಜ್ಯದ ಬಹುತೇಕ ಡಿಸಿಸಿ ಬ್ಯಾಂಕ್‍ಗಳಿಗೆ ದಂಡವನ್ನು ವಿಧಿಸಲಾಗಿದೆ. ಸಾಲ ವಿತರಣೆಯಲ್ಲಿ ಆದ ನಿಯಮ ಉಲ್ಲಂಘನೆಗಾಗಿ ದಂಡ ವಿಧಿಸಲಾಗಿದೆ ಹೊರತು ಅಕ್ರಮಕ್ಕಲ್ಲ. ಇದರೊಂದಿಗೆ ಈ ಹಿಂದೆ ಹೆಚ್ಚಿನ ಮೊತ್ತದ ಹಣವನ್ನು ಮ್ಯೂಚವಲ್ ಫಂಡ್‍ಗೆ ವಿನಿಯೋಗಿಸಿದ ಕಾರಣಕ್ಕೆ ದಂಡ ವಿಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ರೈತರ ಆರ್ಥಿಕ ಪ್ರಗತಿಗಾಗಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ. ಆದೇಶ ಬಂದ ಬಳಿಕ ನಿರ್ದೇಶಕರಿಗೆ ಹಾಗೂ ಅವರ ಕುಟುಂಬಕ್ಕೆ ಸಾಲ ನೀಡುತ್ತಿಲ್ಲ. ಇದುವರೆಗೆ ಹಲವೆಡೆ ಗ್ರಾಹಕರ ಸಭೆಯನ್ನು ನಡೆಸಲಾಗಿದೆ. ಯಾವುದೇ ಒಂದು ಆರೋಪಗಳು ಬ್ಯಾಂಕ್ ವಿರುದ್ಧ ಬಂದಿಲ್ಲ. ತಪ್ಪು ಮಾಡಿ ಶಿಕ್ಷೆಗೆ ಒಳಗಾದವರು ಸೇರಿ ಈ ರೀತಿ ಕುತಂತ್ರ ಎಸಗುತ್ತಿದ್ದಾರೆ ಎಂದು ದೂರಿದ ಅವರು, ಬ್ಯಾಂಕ್‍ನ ಒಟ್ಟು ಲಾಭ 4ಐದನೇ ಪುಟಕ್ಕೆ

(ಮೊದಲ ಪುಟದಿಂದ) ಈ ಸಾಲಿನಲ್ಲಿ 30.46 ಕೋಟಿ ಇದ್ದು, 23.14 ಕೋಟಿ ನಿವ್ವಳ ಲಾಭವನ್ನು ಗಳಿಸಿದೆ. ಕಳೆದ 17 ವರ್ಷಗಳಲ್ಲಿ ಹೆಚ್ಚಿನ ಲಾಭವನ್ನು ಪಡೆದಿದೆ. ಶತಮಾನೋತ್ಸವ ಕಂಡ ಬ್ಯಾಂಕ್‍ಗೆ ಚ್ಯುತಿ ತರುವ ಪ್ರಯತ್ನ ನಡೆಯುತ್ತಿದೆ ಎಂದರು.

ನಿರ್ದೇಶಕ ಗುಮ್ಮಟಿರ ಕಿಲನ್ ಮಾತನಾಡಿ, ಬ್ಯಾಂಕ್ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ತಾಂತ್ರಿಕ ಸಮಸ್ಯೆಗೆ ಹಾಕಿದ ದಂಡವನ್ನು ಮುಂದಿಟ್ಟು ಅಪಪ್ರಚಾರ ಮಾಡುವುದು ಸರಿಯಲ್ಲ. 2021ರಲ್ಲಿ ಆರ್‍ಬಿಐ ಆಡಳಿತ ಮಂಡಳಿಯವರಿಗೆ ಸಾಲ ನೀಡುವಂತಿಲ್ಲ ಎಂದು ತಿಳಿಸಿತ್ತು. ಆದರೆ, ಯಾವುದೇ ಸುತ್ತೋಲೆಗಳು ಬಂದಿರಲಿಲ್ಲ. 2025ರಲ್ಲಿ ಆದೇಶ ಬಂದಿದ್ದು, ಆದಾದ ನಂತರ ಯಾರಿಗೂ ಸಾಲ ನೀಡಿಲ್ಲ ಎಂದರು. ನಿರ್ದೇಶಕ ಟಿ.ಆರ್. ಶರವಣ ಕುಮಾರ್ ಮಾತನಾಡಿ, ಬಂದಿರುವ ಆರೋಪಗಳೆಲ್ಲ ನಿರಾಧಾರವಾಗಿದ್ದು, ಇದು ಖಂಡನೀಯ. ಬ್ಯಾಂಕ್ ಏಳಿಗೆ ಸಹಿಸದೆ ಈ ರೀತಿ ಮಾಡಲಾಗುತ್ತಿದೆ ಎಂದರು.

ನಾಪಂಡ ಉತ್ತಪ್ಪ ಮಾತನಾಡಿ, ಬ್ಯಾಂಕ್‍ನಲ್ಲಿ ಯಾವುದೇ ರೀತಿಯ ತಾರತಮ್ಯವಾಗಿಲ್ಲ. ಆಡಳಿತ ಮಂಡಳಿಯವರು ಸಿಬ್ಬಂದಿ ನೇಮಕಾತಿಯಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದು ಹೇಳಿದರು.

ಅರುಣ್ ಭೀಮಯ್ಯ ಮಾತನಾಡಿ, ರಾಜ್ಯದಲ್ಲಿಯೇ ಅತೀ ಸಣ್ಣ ಬ್ಯಾಂಕ್ ಆಗಿರುವ ಡಿಸಿಸಿ ಬ್ಯಾಂಕ್ ಸದಸ್ಯರಿಗೆ ಅತೀ ಹೆಚ್ಚು ಡಿವಿಡೆಂಟ್ ನೀಡುತ್ತಿದೆ. ಇದು ಹೆಸರು ಕೆಡಿಸುವ ಪ್ರಯತ್ನ. ಅಧ್ಯಕ್ಷರು ಸರ್ವಾಧಿಕಾರಿ ಧೋರಣೆಯನ್ನು ತೋರುತ್ತಿಲ್ಲ. ಬದಲಾಗಿ ಉತ್ತಮ ಆಡಳಿತವನ್ನು ನೀಡುತ್ತಿದ್ದಾರೆ ಎಂದರು.

ಮುಂಡಂಡ ಸಿ. ನಾಣಯ್ಯ ಮಾತನಾಡಿ, ಬ್ಯಾಂಕ್ ಅತ್ಯಂತ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ. ಸಮಸ್ಯೆಗಳಿದ್ದಿದ್ದಲ್ಲಿ ಅಹವಾಲು ಸಭೆಯಲ್ಲಿ ಹೇಳಿಕೊಳ್ಳುವ ಅವಕಾಶವಿತ್ತು. ಯಾರೊಬ್ಬರೂ ಮುಂದೆ ಬಂದಿಲ್ಲ. ಇದರಿಂದ ಯಾವುದೇ ಲೋಪಗಳಿಲ್ಲದಿರುವುದು ಕಂಡುಬರುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೆಳ್ಳಿಯ್ಯಪ್ಪ, ನಿರ್ದೇಶಕರುಗಳಾದ ಹೊಸೂರು ಸತೀಶ್ ಕುಮಾರ್, ಪಟ್ರಪಂಡ ರಘು ನಾಣಯ್ಯ, ಜಲಜಾ ಶೇಖರ್, ಶರತ್ ಶೇಖರ್, ಕಾಂಗೀರ ಸತೀಶ್, ಮಾದಪ್ಪ, ಹೊಟ್ಟೆಂಗಡ ರಮೇಶ್, ವ್ಯವಸ್ಥಾಪಕಿ ಬೋಜಮ್ಮ ಹಾಜರಿದ್ದರು.