ವೀರಾಜಪೇಟೆ, ಏ. 6: ಬಹುಭಾಷ ನಟಿ, ನ್ಯಾಷನಲ್ ಕ್ರಶ್ ಖ್ಯಾತಿಯ ಕೊಡಗು ಮೂಲದ ಚಲನಚಿತ್ರ ನಟಿ ರಶ್ಮಿಕಾ ಮಂದಣ್ಣ ಅವರಿಗೆ ತಂದೆ ಮಂದಣ್ಣ ಅವರು ವಾಸದ ಮನೆಯನ್ನು ಮದುವೆಯ ಉಡುಗೊರೆಯಾಗಿ ನೀಡಿದರು. ವೀರಾಜಪೇಟೆ ಚೆಂಚೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಕ್ಲೂರು ಗ್ರಾಮದ ನಿವಾಸಿ ಮಾಜಿ ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯರಾಗಿದ್ದ ಮುಂಡಚಾಡಿರ ಮದನ್ ಮಂದಣ್ಣ ಮತ್ತು ಪತ್ನಿ ಸುಮನ್ ಮಂದಣ್ಣ ಅವರ ಹೆಸರಿನಲ್ಲಿದ್ದ ಸರ್ವೆ ಸಂಖ್ಯೆ 142/1, ಮತ್ತು 142/2 ಐಷಾರಾಮಿ (ಸೆರಿನಿಟಿ) ಮನೆಯನ್ನು ಇವರು ವೀರಾಜಪೇಟೆ ಉಪ ನೋಂದಣಿ ಕಚೇರಿಯಲ್ಲಿ ತಮ್ಮ ಮಗಳಾದ ರಶ್ಮೀಕಾ ಮಂದಣ್ಣ ಹೆಸರಿನಲ್ಲಿ ಖಾತೆ ಬದಲಾವಣೆ ಮಾಡಿಕೊಟ್ಟರು. ಇತ್ತೀಚೆಗೆ ರಶ್ಮೀಕಾ ಮಂದಣ್ಣ ಅವರು ಖ್ಯಾತ ತೆಲುಗು ಚಿತ್ರನಟ ವಿಜಯ್ ದೇವಕೊಂಡ ಅವರನ್ನು ವಿವಾಹವಾಗಿದ್ದರು. ವಿವಾಹದ ಉಡುಗೊರೆಯಾಗಿ ಮನೆಯನ್ನು ನೀಡಲಾಗಿದೆ ಎಂದು ಕುಟುಂಬದ ಮೂಲದಿಂದ ತಿಳಿದುಬಂದಿದೆ. ದಾನ ಪತ್ರ ಮತ್ತು ದಾಖಲೆ ಪತ್ರಗಳನ್ನು ನಿರ್ವಹಿಸಿದ ವಕೀಲರು ಮತ್ತು ಮಂದಣ್ಣ ಕುಟುಂಬದ ವಕೀಲರಾದ ಪಟ್ಟಡ ರೀನಾ ಪ್ರಕಾಶ್ ಮತ್ತು ರಶ್ಮಿಕ ಮಂದಣ್ಣ ಅವರ ಖಾಸಗಿ ವ್ಯವಸ್ಥಾಪಕರು, ಅಂಗರಕ್ಷಕರು ಜತೆಗಿದ್ದರು.
ಸಂತೋಷ ಕೂಟ
ವಿವಾಹವಾದ ಬಳಿಕ ಆಗಮಿಸಿದ್ದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ದಂಪತಿಯರ ಪರವಾಗಿ ಸಂತೋಷ ಕೂಟ ಏರ್ಪಡಿಸಲಾಗಿತ್ತು. ರಶ್ಮಿಕಾ ಕುಟುಂಬದ ಆಪ್ತ ಬಳಗಕ್ಕೆ ಮಾತ್ರ ಆಮಂತ್ರಣವಿದ್ದುದರಿಂದ ನೂರರಷ್ಟು ಮಂದಿ ಮಾತ್ರ ಪಾಲ್ಗೊಂಡಿದ್ದರು. - ಕಿಶೋರ್ ಕುಮಾರ್ ಶೆಟ್ಟಿ