4ಕುಡೆಕಲ್ ಸಂತೋಷ್
ಮಡಿಕೇರಿ, ಏ. 6: ಒಂದಾನೊಂದು ಕಾಲದಲ್ಲಿ ಮಂಜಿನ ನಗರಿ ಮಡಿಕೇರಿಗೆ ಪ್ರವೇಶಿಸುತಿದ್ದಂತೆ ಎಲ್ಲರನ್ನು ಸ್ವಾಗತಿಸುತ್ತಿದ್ದುದು ಈ ಕಲಾ ಮಂದಿರ., ಅದೆಷ್ಟೋ ಸಹಸ್ರ ಮಂದಿ ಕಲಾವಿದರ ಬದುಕಿಗೆ ಭಾಷ್ಯ ಬರೆದ., ಅದೆಷ್ಟೋ ರಾಜಕಾರಣಿಗಳು, ಹೋರಾಟಗಾರರ ಬದುಕಿಗೆ ವೇದಿಕೆಯಾದ., ಅದೆಷ್ಟೋ ಕಾರ್ಯಕ್ರಮಗಳಿಗೆ ಸಾಕ್ಷಿಯಾದ ಈ ಕಲಾ ಮಂದಿರ ಮಡಿಕೇರಿ ನಗರದಿಂದ ಮರೆಯಾಗುತ್ತಿದೆ..!
ಮಡಿಕೇರಿ ನಗರದಲ್ಲಿರುವ ಏಕೈಕ ಕಲಾಮಂದಿರವೆಂದರೆ ಅದು ಕಾವೇರಿ ಕಲಾಕ್ಷೇತ್ರ. ನಗರದ ಹೃದಯಭಾಗದಲ್ಲಿರುವ ಈ ಕಲಾಮಂದಿರ ಹಿಂದಿನಿಂದಲೂ ‘ಟೌನ್ ಹಾಲ್’ ಎಂದೇ ಪ್ರಸಿದ್ಧಿ. ಈಗಲೂ ಅದರ ಗೋಡೆಯಲ್ಲಿ ‘ಟೌನ್ ಹಾಲ್’ ಎಂದೇ ಇದೆ. ಒಂದೊಮ್ಮೆ ಮಡಿಕೇರಿಯಲ್ಲಿ ಯಾವದೇ ಕಾರ್ಯಕ್ರಮ, ಸಭೆ-ಸಮಾರಂಭಗಳು., ರಾಜಕೀಯ-ಹೋರಾಟದ ಸಭೆಗಳು., ಸಾಹಿತ್ಯ-ಸಾಂಸ್ಕøತಿಕ ಕಾರ್ಯಕ್ರಮಗಳು., ನಾಡ ಹಬ್ಬವಾದ ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳೂ ಕೂಡ ಇದೇ ಕಲಾಮಂದಿರದಲ್ಲಿ ನಡೆಯುತ್ತಿದ್ದವು. ನಾಡಿನ ವೀರಯೋಧರು ಹುತಾತ್ಮರಾದ ಸಂದರ್ಭದಲ್ಲಿ ಇದೇ ಮಂದಿರದಲ್ಲಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುತ್ತಿತ್ತು.
1953ರಲ್ಲಿ ಅಡಿಗಲ್ಲು
ಅತ್ಯಂತ ಹಳೆಯದಾದ ಈ ಕಟ್ಟಡಕ್ಕೆ ತನ್ನದೇ ಆದ ಇತಿಹಾಸವಿದೆ. ಅಂದಿನ ಕಾಲದಲ್ಲಿ ಬ್ರಿಟಿಷರು ಸ್ಥಾಪಿಸಿದ್ದ ಮರ್ಕರ ಮುನಿಸಿಪಾಲಿಟಿ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಈ ಕಲಾಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲಾಯಿತು. ಅಂದಿನ ಚೀಫ್ ಕಮಿಷನರ್ ಆಫ್ ಕೂರ್ಗ್ ಲೆ.ಕ. ಡಿ.ಎಸ್.ಬೇಡಿ 18-1-1953ರಲ್ಲಿ ಟೌನ್ ಹಾಲ್ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು. ನಂತರದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಂಡಿತು.
1954ರಲ್ಲಿ ಉದ್ಘಾಟನೆ
ಒಂದು ವರ್ಷಗಳ ಕಾಲ ಕಟ್ಟಡ ನಿರ್ಮಾಣ ಕಾಮಗಾರಿ ನಡೆದು 1-1-1954ರಂದು ಕಲಾಮಂದಿರ ಲೋಕಾರ್ಪಣೆಗೊಂಡಿದೆ. ಕೊಡಗು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಿ.ಎಂ. ಪೂಣಚ್ಚ(ಚೆಪ್ಪುಡಿರ) ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಗ ಕೊಡಗು ರಾಜ್ಯದ ಕಾನೂನು ಮಂತ್ರಿಗಳಾಗಿದ್ದ ಕೆ. ಮಲ್ಲಪ್ಪ ಅವರು ಲೋಕಾರ್ಪಣೆಗೊಳಿಸಿದರು.
ನವೀಕೃತ ಕಲಾಕ್ಷೇತ್ರ
ನಂತರದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಸಾಕ್ಷಿಯಾದ ಟೌನ್ ಹಾಲ್ ಸರಿ ಸುಮಾರು 34 ವರ್ಷಗಳ ಕಾಲದೂಡುತ್ತಾ ಬಂದಿತು. ಕಟ್ಟಡ ಶಿಥಿಗೊಂಡಿದ್ದರಿಂದ ಅದನ್ನು ನವೀಕರಣಗೊಳಿಸಲಾಯಿತು. ನವೀಕೃತ ಕಟ್ಟಡಕ್ಕೆ ಹೊಸದಾಗಿ ‘ಕಾವೇರಿ ಕಲಾಕ್ಷೇತ್ರ’ ಎಂದು ಹೆಸರಿಸಿ 28-5-1990ರಂದು ಉದ್ಘಾಟನೆ ಮಾಡಲಾಯಿತು. ಅಂದು ಮಡಿಕೇರಿ ಕ್ಷೇತ್ರದ ಶಾಸಕರಾಗಿದ್ದ ಡಿ.ಎ.ಚಿಣ್ಣಪ್ಪ(ದಂಬೆಕೋಡಿ) ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅಂದಿನ ಸಣ್ಣ ಕೈಗಾರಿಕೆಗಳ ಉಪ ಸಚಿವರಾಗಿದ್ದ ಸುಮಾವಸಂತ್ ಅವರು ಉದ್ಘಾಟಿಸಿದರು. ಆ ಸಂದರ್ಭದಲ್ಲಿ ಹೆಚ್. ಭಾಸ್ಕರ್ ಅವರು ಜಿಲ್ಲಾಧಿಕಾರಿಯಾಗಿದ್ದು, ಪುರಸಭಾ ಆಡಳಿತಾಧಿಕಾರಿಗಳಾಗಿದ್ದರು. 4ಐದನೇ ಪುಟಕ್ಕೆ
(ಮೊದಲ ಪುಟದಿಂದ) ಎಲ್.ಕೆ. ಬೀರೇಗೌಡ್ರು ಪುರಸಭೆ ಮುಖ್ಯಾಧಿಕಾರಿಗಳಾಗಿದ್ದರು. ಪಾಲಿಬೆಟ್ಟದ ಟಾಟಾ ಸಂಸ್ಥೆ ಆ ಕಾಲದಲ್ಲೇ 12ಲಕ್ಷ ರೂಪಾಯಿ ದೇಣಿಗೆ ನೀಡಿ ಒಳಾಂಗಣವನ್ನು ಸಿಂಗರಿಸಿತ್ತು. ನಂತರದಲ್ಲಿ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿತು., ಸರಕಾರದ ಅನುದಾನವೂ ಹೆಚ್ಚಳವಾಯಿತು..!
ಮೂಲೆಗುಂಪಾದ ಮಂದಿರ..!
ನವೀಕೃತ ಕಲಾಕ್ಷೇತ್ರದಲ್ಲಿ ಸುಮಾರು ಮುನ್ನೂರು ಮಂದಿಗಾಗುವಷ್ಟು ಆಸನದ ವ್ಯವಸ್ಥೆ, ವೇದಿಕೆ, ಮೇಲ್ಭಾಗದಲ್ಲಿ ಪುರಸಭಾ ಸಭಾಂಗಣ, ಕೆಳಭಾಗದಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳ ಕಚೇರಿ, ಪಕ್ಕದಲ್ಲಿ ಶೌಚಾಲಯ., ಹೀಗೇ ಎಲ್ಲ ವ್ಯವಸ್ಥೆಗಳಿದ್ದವು. ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತಲೇ ಬರುತ್ತಿದ್ದವು. ದಸರಾ ಸಂದರ್ಭದಲ್ಲಿ ಒಂಭತ್ತು ದಿನಗಳ ಕಾಲ ಸಾಂಸ್ಕøತಿಕ ಕಾರ್ಯಕ್ರಮಗಳು ಇದೇ ಕಲಾ ಕ್ಷೇತ್ರದಲ್ಲಿ ನಡೆಯುತ್ತಿದ್ದದುದರಿಂದ ಪ್ರತಿ ವರ್ಷ ದುರಸ್ತಿ ಕಾರ್ಯಗಳೊಂದಿಗೆ ವ್ಯವಸ್ಥೆಗಳನ್ನೂ ಕಲ್ಪಿಸಲಾಗುತ್ತಿತ್ತು. ಬರಬರುತ್ತಾ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಲೇ ಸಭಾಂಗಣದಲ್ಲಿ ಜಾಗದ ಕೊರತೆಯಿಂದಾಗಿ ದಸರಾ ಕಾರ್ಯಕ್ರಮವನ್ನು ಗಾಂಧಿ ಮೈದಾನಕ್ಕೆ ಸ್ಥಳಾಂತರಿಸಲಾಯಿತು. ತದನಂತರದಲ್ಲಿ ಕಾವೇರಿ ಕಲಾಕ್ಷೇತ್ರ ಸೊರಗಲಾರಂಭಿಸಿತು. ಛಾವಣಿಯಲ್ಲಿ ಸೋರುವಿಕೆ ಆರಂಭವಾಯಿತು, ಕಿಟಕಿ, ಬಾಗಿಲುಗಳು ಶಕ್ತಿ ಕಳೆದುಕೊಂಡವು. ವೇದಿಕೆಯಲ್ಲಿ ಹಾಸಲಾಗಿದ್ದ ಮರದ ಹಲಗೆಗಳು ಕಳಚಿಕೊಳ್ಳತೊಡಗಿದವು. ಕಬ್ಬಿಣದ ಆಸನಗಳು ತುಕ್ಕು ಹಿಡಿಯಲಾರಂಭಿಸಿದವು. ಛಾವಣಿಯ ಮೇಲ್ಭಾಗದಲ್ಲಿ ಗಿಡ ಗಂಟಿಗಳು ಬೆಳೆಯತೊಡಗಿದವು. ಒಟ್ಟಾರೆಯಾಗಿ ದುರಸ್ತಿಪಡಿಸಲಾಗದಷ್ಟರ ಮಟ್ಟಿಗೆ ಶಿಥಿಲಗೊಂಡ ಕಟ್ಟಡ ಮೂಲೆಗುಂಪಾಯಿತು. ಸÀÀದ್ಯಕ್ಕೆ ಕಲಾಕ್ಷೇತ್ರದ ಆವರಣ ನಗರಸಭೆಯ ಕಸ ಸಂಗ್ರಹಣಾ ವಾಹನಗಳು ಹಾಗೂ ಗುತ್ತಿಗೆದಾರರು, ಸಾರ್ವಜನಿಕರ ವಾಹನಗಳ ನಿಲುಗಡೆಯ ಪ್ರದೇಶವಾಗಿ ಮಾರ್ಪಟ್ಟಿದೆ..!
ಇನ್ನು ಹೊಸ ಕಟ್ಟಡ..!
ಯಾವದೇ ಕಟ್ಟಡವಾಗಲಿ ಒಮ್ಮಿಂದೊಮ್ಮಿಗೆ ಶಿಥಿಲಗೊಳ್ಳವುದಿಲ್ಲ. ಸರಿಯಾದ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಮಾತೆ ಕಾವೇರಿಯ ಹೆಸರಿನಲ್ಲಿರುವ ಈ ಕಲಾಕ್ಷೇತ್ರ ಶಿಥಿಲಗೊಳ್ಳುವಂತಾಯಿತು. ಇದೀಗ ಕಟ್ಟಡವನ್ನು ದುರಸ್ತಿ ಮಾಡಲು ಹೊರಟರೆ ಕೋಟಿಗಟ್ಟಲೆ ಹಣ ವೆಚ್ಚವಾಗಲಿದೆ. ಈ ಹಿನ್ನೆಲೆಯಲ್ಲಿ ಶಾಸಕರ ಮುತುವರ್ಜಿಯೊಂದಿಗೆ ಈಗ ಇರುವ ಕಟ್ಟಡವನ್ನು ಕೆಡವಿ ಅದೇ ಜಾಗದಲ್ಲಿ ಮಲ್ಟಿ ಪಾರ್ಕಿಂಗ್ ವ್ಯವಸ್ಥೆಯೊಂದಿಗೆ ಸುಸಜ್ಜಿತ ಕಲಾಕ್ಷೇತ್ರ ನಿರ್ಮಾಣಕ್ಕೆ ಮುನ್ನಡಿಯಿಡಲಾಗಿದೆ. ಶೀಘ್ರದಲ್ಲೇ ಈ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆಯಲಿದೆ.
ಇದುವರೆಗೆ ದಾರಿಹೋಕರನ್ನು ಒಂದು ಕ್ಷಣ ತನ್ನತ್ತ ಸೆಳೆಯುತ್ತಿದ್ದ ‘ಕಲಾ ಕ್ಷೇತ್ರ’ ಮರೆಯಲಾಗದ ನೆನಪುಗಳನ್ನು ಹೊತ್ತು ಮರೆಯಾಗುತ್ತಿದೆ., ಆದರೂ ಆ ಕಲಾಕ್ಷೇತ್ರದೊಳಗೆ ಅಡಿಯಿಟ್ಟವರ ಮನದಲ್ಲಿ ಆ ನೆನಪುಗಳು ಅಚ್ಚಳಿಯದೇ ಉಳಿಯಲಿದೆ..!
ಎಷ್ಟೊಂದು ನೆನಪುಗಳಿವೆ..!
ಕಲಾ ಪ್ರದರ್ಶನ, ಸಭೆ- ಸಮಾರಂಭಗಳ ನೆನಪುಗಳು ಮಾತ್ರವಲ್ಲ., ಇನ್ನಷ್ಟು ವಿಶೇಷ ನೆನಪುಗಳನ್ನು ಈ ಕಲಾಕ್ಷೇತ್ರ ತನ್ನ ಒಡಲೊಳಗೆ ಬಚ್ಚಿಟ್ಟುಕೊಂಡು ಕಣ್ಮರೆಯಾಗುತ್ತಿದೆ..! ಆ ಕಾಲದಲ್ಲಿ ಕೊಡಗು ಜಿಲ್ಲೆ ಪ್ರತ್ಯೇಕ ರಾಜ್ಯವಾಗಿತ್ತು.., ರಾಜ್ಯಕ್ಕೆ ಓರ್ವ ಮುಖ್ಯಮಂತ್ರಿ ಇದ್ದರು.., ಕಾನೂನು ಮಂತ್ರಿಯೂ ಇದ್ದರು., ಅವರು ಈ ಕಟ್ಟಡವನ್ನು ಲೋಕಾರ್ಪಣೆ ಮಾಡಿದರೆಂಬ ಮಾಹಿತಿ ಒದಗಿಸುತ್ತದೆ..! ಕೊಡಗು ಜಿಲ್ಲೆಗೂ ಓರ್ವ ಚೀಫ್ ಕಮಿಷನರ್ ಇದ್ದರೆಂಬದನ್ನೂ ನೆನಪಿಸುತ್ತದೆ..! ನಂತರದಲ್ಲೂ ಜಿಲ್ಲೆಯಲ್ಲಿ ಸಚಿವರಿದ್ದು., ಅವರು ನವೀಕೃತ ಕಲಾ ಕ್ಷೇತ್ರವನ್ನು ಉದ್ಘಾಟನೆ ಮಾಡಿದರೆಂಬದನ್ನು ಹೇಳುತ್ತದೆ..! ಇವೆಲ್ಲದರೊಂದಿಗೆ ಯಾರೂ ಮರೆಯಲಾಗದ., ರಾಜಕೀಯ ಪ್ರಹಸನದಡಿ ಗಲಾಟೆ, ಕಲ್ಲು ತೂರಾಟ ನಡೆದು ಹಲವರು ಗಾಯಗೊಂಡ ಘಟನೆ ಕೂಡ ಈ ಕಟ್ಟಡದ ಗೋಡೆಯಲ್ಲಿ ಅಚ್ಚೊತ್ತಿದೆ..!