ಮಡಿಕೇರಿ, ಏ. 6: ನಾಪೋಕ್ಲು ಸನಿಹದ ಚೆರಿಯಪರಂಬುವಿನ ಜ. ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಕೊಡವ ಕೌಟುಂಬಿಕ ಚೇನಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ ಕೊಕ್ಕಂಡ, ಪುತ್ತರಿರ, ಚೊಟ್ಟೆಯಂಡಮಾಡ, ಬಡುವಮಂಡ ಸೇರಿದಂತೆ ವಿವಿಧ ತಂಡಗಳು ಮುನ್ನಡೆ ಸಾಧಿಸಿದವು.

ಮಾದಂಡ ಮತ್ತು ಕೊಕ್ಕಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೊಕ್ಕಂಡ 4 -0 ಅಂತರದ ಗೆಲುವು ಸಾಧಿಸಿತು. ಮೊಣ್ಣಂಡ ಮತ್ತು ಪುತ್ತರಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪುತ್ತರಿರ ತಂಡ ಟೈಬ್ರೇಕರ್‍ನಲ್ಲಿ ಗೆಲುವು ಸಾಧಿಸಿತು. ಚೊಟ್ಟೆಯಂಡಮಾಡ ತಂಡವು ತಾತಂಡ ವಿರುದ್ಧ 3 -0 ಅಂತರದ ಗೆಲುವು ಸಾಧಿಸಿದರೆ, ಬಡುವಮಂಡ ತಂಡವು ಬಡುವಂಡ ತಂಡದ ವಿರುದ್ಧ 7-1 ಅಂತರದ ಭರ್ಜರಿ ಗೆಲುವು ಸಾಧಿಸಿತು. ಪೂಳಂಡ ಹಾಗೂ ಪಾಲಚಂಡ ವಿರುದ್ಧ ನಡೆದ ಪಂದ್ಯದಲ್ಲಿ 0-4 ಅಂತರÀದಿಂದ ಪೂಳಂಡ ಸೋಲನ್ನು ಅನುಭವಿಸಿತು. ಚಂದುರ ಮತ್ತು ಮೂಕಳೇರ ನಡುವೆ ನಡೆದ ಪಂದ್ಯದಲ್ಲಿ ಚಂದುರ 2-1 ಅಂತರದಿಂದ ಗೆಲುವು ಸಾಧಿಸಿತು. ಚಂದಪಂಡ ಮತ್ತು ಬಲ್ಲಚಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಲ್ಲಚಂಡ 4-1 ಅಂತರದಿಂದ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು.

ಮೈದಾನ ಎರಡರಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮರುವಂಡ ತಂಡ ಅಯ್ಯಮಂಡ ವಿರುದ್ಧ ಸ್ಪರ್ಧಿಸಿತು. ಮರುವಂಡ 3- 2 ಅಂತರದಿಂದ ಅಯ್ಯಮಂಡ ವಿರುದ್ಧ ಗೆಲುವು ಸಾಧಿಸಿತು. ಹಂಚೆÀಟ್ಟಿರ ಮತ್ತು ಅಲ್ಲುಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಲ್ಲುಮಾಡ 1-0 ಅಂತರದ ಗೆಲುವು ಸಾಧಿಸಿತು. ಬಾರಿಯಂಡ ಮತ್ತು ಬಲ್ಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಾರಿಯಂಡ 6-0 ಅಂತರದ ಭರ್ಜರಿ ಜಯ ಸಾಧಿಸಿತು. ಬೈರಾÀಜಂಡ ಮತ್ತು ಪೆÇನ್ನಚಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪೆÇನ್ನಚಂಡ ಜಯ ಸಾಧಿಸಿತು. ಅಯ್ಯನೆರವಂಡ ತಂಡ ಬಾರದ ಕಾರಣ ಕುಟ್ಟಂಡ ತಂಡವು ವಾಕ್ ಓವರ್‍ನಲ್ಲಿ ಮುಂದಿನ ಸುತ್ತು ಪ್ರವೇಶಿಸಿತು. ಮಾಚಂಗಡ ಮತ್ತು ಕುಟ್ಟೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಾಚಂಗಡ 3-0 ಗೋಲುಗಳ ಅಂತರದ ಗೆಲುವು ಸಾಧಿಸಿತು. ಅಜ್ಜಿನಿಕಂಡ ಮತ್ತು ಬಟ್ಟೀರ ತಂಡಗಳ ನಡುವಿನ ಪಂದ್ಯದಲ್ಲಿ ಬಟ್ಟೀರ ತಂಡ ಜಯ ಸಾಧಿಸಿತು. ಮೈದಾನ ಮೂರರಲ್ಲಿ ನಡೆದ ಪಂದ್ಯದಲ್ಲಿ ಬೊಟ್ಟಂಗಡ ಕೆಚ್ಚೇಟಿರ ವಿರುದ್ಧ 2-0 ಅಂತರದಿಂದ, ಅಚ್ಚಪಂಡ ಕೂಪದಿರ ವಿರುದ್ಧ 4-1 ಅಂತರದಿಂದ, ಅಳಮೇಂಗಡ ಚೆಟ್ಟಂಗಡ ವಿರುದ್ಧ 6-0 ಅಂತರದಿಂದ, ಮಾಣಿಪಂಡ ಬೊಡ್ಡಂಡ ವಿರುದ್ಧ 7-0 ಅಂತರದಿಂದ ಗೆಲುವು ಸಾಧಿಸಿತು .ಅಮ್ಮಾಟಂಡ ಕೊರವಂಡ ವಿರುದ್ದ 1-0 ಅಂತರದಲ್ಲಿ ಗೆಲುವು ಸಾಧಿಸಿತು. ಕುಂಚೆಟ್ಟಿರ ತಂಡ ಬಾರದ ಕಾರಣ ಮಾಳೇಟಿರ (ಕೆದಮುಳ್ಳೂರು) ತಂಡ ವಾಕ್‍ಓವರ್ ಮೂಲಕ ಮುನ್ನಡೆ ಸಾಧಿಸಿತು. ಮಾಚಮಂಡ ತಂಡ ಮಾಳೇಟಿರ (ಕುಕ್ಲೂರು) ತಂಡದ ವಿರುದ್ಧ 3-0 ಅಂತರದಿಂದ ಗೆಲುವು ಸಾಧಿಸಿತು.

ಟೂರ್ನಿಯ ಮೊದಲ ಹ್ಯಾಟ್ರಿಕ್ ಬಾರಿಸಿದ ಅಯ್ಯಣ್ಣ

ಇಂದು ನಡೆದ ಮರುವಂಡ ಹಾಗೂ ಅಯ್ಯಮಂಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಮರುವಂಡ ಅಯ್ಯಣ್ಣ ಅವರು 3 ಗೋಲುಗಳನ್ನು ಬಾರಿಸಿ ಟೂರ್ನಿಯ ಮೊದಲ ಹ್ಯಾಟ್ರಿಕ್ ಸಾಧನೆ ಗೈದು ತಂಡದ ಗೆಲುವಿಗೆ ಸಾಕ್ಷಿಯಾದರು. ಎದುರಾಳಿ ಅಯ್ಯಮಂಡ ತಂಡವು 2 ಗೋಲುಗಳನ್ನು ಪೇರಿಸಿ ಸೋಲನುಭವಿಸಿತು.

ಕಂದಮ್ಮಗಳ ವಿಶೇಷ ಕಳೆ

ಚೇನಂಡ ಹಾಕಿ ಪಂದ್ಯಾವಳಿಯ ಮೈದಾನ 2ರಲ್ಲಿ ನಡೆದ ಬಟ್ಟಿರ ಹಾಗೂ ಅಜ್ಜಿನಿಕಂಡ ತಂಡಗಳ ನಡುವಿನ ಹಾಕಿ ಪಂದ್ಯದಲ್ಲಿ ಪುಟಾಣಿ ಮಕ್ಕಳ ಭಾಗವಹಿಸುವಿಕೆ ಎಲ್ಲರ ಗಮನ ಸೆಳೆಯಿತು. ಬಟ್ಟೀರ ಕುಟುಂಬದ ಪರವಾಗಿ 6 ವರ್ಷದ ಸುಮನ್ ಸುಬ್ಬಯ್ಯ, 6 ವರ್ಷದ ಕವಿನ್ ಕುಶಾಲಪ್ಪ, 3 ವರ್ಷದ ಬನ್ವಿತ್ ಮಾಚಯ್ಯ, ಜೊತೆಗೆ ತಂದೆ ಚಿರಂತ್ ಚಂಗಪ್ಪ, ತಾಯಿ ಮುತ್ತಮ್ಮ, ಹಾಗೂ ಮೂರುವರೆ ವರ್ಷದ ಬ್ರಹತಿ ಅಕ್ಕಮ್ಮ ಸಮವಸ್ತ್ರ ತೊಟ್ಟು ಮೈದಾನದಲ್ಲಿ ಕಾಣಿಸಿಕೊಂಡರು.

ತಂದೆ-ತಾಯಿ-ಪುತ್ರಿ

ಬಡುವಂಡ ಕುಟುಂಬದ ಪರವಾಗಿ ತಂದೆ, ತಾಯಿ ಹಾಗೂ ಪುತ್ರಿ ಆಟವಾಡಿ ಗಮನ ಸೆಳೆದರು. ಬಡುವಂಡ ಚಂಗಪ್ಪ ಹಾಗೂ ಪತ್ನಿ ಆಟಗಾರರಾಗಿದ್ದರೆ ಪುತ್ರಿ ಅನುಶಿಕ ಗೋಲ್ ಕೀಪರ್ ಆಗಿದ್ದು ವಿಶೇಷವಾಗಿತ್ತು.

ಬಾಲಕ-ಬಾಲಕಿಯರು

ಪೂಳಂಡ ಕುಟುಂಬದ ಪರ ಮೂವರು ಪುಟ್ಟ ಬಾಲಕರು ಹಾಗೂ ಮೂವರು ಬಾಲಕಿಯರು ಮೈದಾನಕ್ಕಿ ಇಳಿದಿದ್ದರು. ದೇಚಮ್ಮ, ಜಶ್ಮಿಕ, ತನ್ವಿ ತಂಗಮ್ಮ, ಗೆರಿ ಅಚ್ಚಯ್ಯ, ತಮನ್ ಮೊಣ್ಣಪ್ಪ ಹಾಗೂ ನಮನ್ ಪೂವಯ್ಯ ಆಟಗಾರರಾಗಿದ್ದರು.