ಮಡಿಕೇರಿ, ಏ. 5: ಮಡಿಕೇರಿಯ ದೇಚೂರು ಕೊಡವಕೇರಿ ಸಂಘದ 27ನೇ ವರ್ಷದ ಮಹಾಸಭೆ ಮತ್ತು ಒತ್ತೊರ್ಮೆ ಕೂಟದ ಕಾರ್ಯಕ್ರಮ ಕೊಡವ ಸಮಾಜ ಮಡಿಕೇರಿಯಲ್ಲಿ ಕೇರಿಯ ಅಧ್ಯಕ್ಷ ಮೂವೆರ ಕೆ. ಜಯರಾಮ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೇರಿಯ ಮಹಿಳಾ ನಿರ್ದೇಶಕಿಯರಿಂದ ಕಾವೇರಿ ಮಾತೆಗೆ ಆರತಿ ಬೆಳಗುವ ಮೂಲಕ ಪೂಜೆ ನೆರವೇರಿಸಲಾಯಿತು.

ನಿರ್ದೇಶಕಿ ಚೆನ್ನಪಂಡ ಪ್ರತಿಮ ತಿಮ್ಮಯ್ಯ ಅವರು ಕಾವೇರಿ ಮಾತೆಯ ಸ್ತೋತ್ರವನ್ನು ಹಾಡುವುದರೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಅಧ್ಯಕ್ಷ ಮೂವೆರ ಕೆ. ಜಯರಾಮ್ ಸಭೆಯನ್ನುದ್ದೇಶಿಸಿ ಕೇರಿಯ ಪ್ರಗತಿಯ ಬಗ್ಗೆ ವಿವರಿಸುತ್ತಾ ಕೇರಿಯ ಸದಸ್ಯರು ಮೃತರಾದ ಸಂದರ್ಭ ಎಲ್ಲರೂ ಭಾಗಿಯಾಗುವಂತೆ ಮನವಿ ಮಾಡಿದರು.

ಕಳೆದ ಮಹಾಸಭೆಯ ವರದಿ ಮತ್ತು ವಾರ್ಷಿಕ ಲೆಕ್ಕಪತ್ರವನ್ನು ಗೌರವ ಕಾರ್ಯದರ್ಶಿ ಬಟ್ಟಿರ ಎ. ಮೇದಪ್ಪ ಅವರು ಸಭೆಗೆ ಮಂಡನೆ ಮಾಡಿದರು.

ಕೇರಿಯ ಆಡಳಿತ ಮಂಡಳಿಯ ಸೇವೆಯಿಂದ ನಿವೃತ್ತರಾದ ಸಲಹೆ ಗಾರರಾಗಿದ್ದ ಮಾದೆಯಂಡ ಬಿ. ಕುಂಞಪ್ಪ, ನಿರ್ದೇಶಕರುಗಳಾದ ಕುಂಞÂರ ಕೆ. ಸೋಮಯ್ಯ, ಕಿರುಂದಂಡ ಎ. ಗಣೇಶ್ ಮತ್ತು ಕೋಡಿಮಣಿಯಂಡ ಕರುಂಬಯ್ಯ ಅವರನ್ನು ಸನ್ಮಾನಿಸಲಾಯಿತು.

ಸಂಘದ ಸದಸ್ಯರ ಮಕ್ಕಳಲ್ಲಿ ಹೆಚ್ಚು ಅಂಕ ಪಡೆದು ಕಾಲೇಜಿಗೆ 5ನೇ ರ್ಯಾಂಕ್‍ನಲ್ಲಿ ಉತ್ತೀರ್ಣರಾದ ಪಾಲೆಕಂಡ ನಿಹಾರಿಕಾ ಚಿಣ್ಣಪ್ಪ ಅವರಿಗೆ ಬಹುಮಾನ ನೀಡಲಾಯಿತು. ಸನ್ಮಾನ ಸ್ವೀಕರಿಸಿದವರು ಸಭೆಯನ್ನುದ್ದೇಶಿಸಿ ಮಾತನಾಡಿ, ಅಭಿವೃದ್ಧಿಯ ಕುರಿತು, ಕೇರಿಯ ಮುಖಾಂತರ ಆಟ್ ಪಾಟ್ ತಂಡ ಮಾಡುವಂತೆಯೂ, ಕೈಲ್‍ಪೊಳ್ದ್ ಮತ್ತು ಪುತ್ತರಿ ಹಾಗೂ ಸಂಘದ ಮಹಾಸಭೆ ಇವೆಲ್ಲವನ್ನು ಸಂಘದ ಆರ್ಥಿಕ ಪರಿಸ್ಥಿತಿಗನುಸಾರ ಎರಡು ಕಾರ್ಯಕ್ರಮವನ್ನು ನಡೆಸುವಂತೆಯೂ ಸಲಹೆ ನೀಡಿದರು. ನಿರ್ದೇಶಕ ನೂರೆರ ಎಂ. ಭೀಮಯ್ಯ ಸ್ವಾಗತಿಸಿ, ತಾಪಂಡ ಸರೋಜ ತಮ್ಮಯ್ಯ ವಂದಿಸಿದರು. ರಾಷ್ಟ್ರಗೀತೆ, ಊಟೋಪಚಾರದೊಂದಿಗೆ ಸಭೆ ಮುಕ್ತಾಯಗೊಂಡಿತು.