ಕರಿಕೆ: ಏ, 5: ಕೊಡಗು ಅರಣ್ಯ ವೃತ್ತದ ಮಡಿಕೇರಿ ಉಪವಿಭಾಗದ ಭಾಗಮಂಡಲ ಪ್ರಾದೇಶಿಕ ಅರಣ್ಯ ವಲಯದ ವತಿಯಿಂದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ-ಮಡಿಕೇರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಭಾಗಮಂಡಲ ಸಂಯುಕ್ತ ಆಶ್ರಯದಲ್ಲಿ ಚೆಟ್ಟಿಮಾನಿ ಗ್ರಾಮದ ಸಮುದಾಯ ಭವನದಲ್ಲಿ ಅರಣ್ಯದ ಅಂಚಿನ ಗ್ರಾಮಸ್ಥರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಂಜುಂಡಯ್ಯ ನೆರವೇರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಭಾಗಮಂಡಲ ಪ್ರಾದೇಶಿಕ ವಲಯದ ವಲಯ ಅರಣ್ಯ ಅಧಿಕಾರಿ ಬಿ.ಎಂ ಶಂಕರ್ ಅವರು, ಕರ್ನಾಟಕ ಅರಣ್ಯ ಇಲಾಖೆ ವಿಶೇಷವಾಗಿ ಕಾಡಂಚಿನಲ್ಲಿ ವಾಸ ಮಾಡುವ ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದು ಅರಣ್ಯ ಇಲಾಖೆ ಮತ್ತು ಗ್ರಾಮಸ್ಥರ ನಡುವೆ ಉತ್ತಮ ಬಾಂಧವ್ಯವನ್ನು ಬೆಸೆಯುವ ಕಾರ್ಯಕ್ರಮವಾಗಿದೆ ಎಂದರು. ಇಲಾಖೆ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅರಣ್ಯ, ವನ್ಯಜೀವಿಸಂಕುಲ ಉಳಿಯಬೇಕಾದಲ್ಲಿ ಗ್ರಾಮಸ್ಥರ ಸಹಕಾರ ಅಗತ್ಯ ವಾಗಿದೆ ಎಂದರು. ಅದೇ ರೀತಿ ಅರಣ್ಯದ ಅಂಚಿನಲ್ಲಿ ಇರುವ ಗ್ರಾಮಸ್ಥರಿಗೆ ಇಲಾಖೆ ಉತ್ತಮವಾಗಿ ಸ್ಪಂದಿಸುವ ಅಗತ್ಯವಿದ್ದು ಇದನ್ನು ಮನಗೊಂಡು ಈ ಭಾಗದ ಕಾಡಿನ ಅಂಚಿನ ಗ್ರಾಮಸ್ಥರಿಗೆ ಪ್ರಪ್ರಥಮವಾಗಿ ಉಚಿತವಾಗಿ ಆರೋಗ್ಯ ಶಿಬಿರ ಹಮ್ಮಿಕೊಂಡಿದ್ದು ಮುಂದಕ್ಕೆ ಕೂಡ ಅರಣ್ಯ ಇಲಾಖೆ ಸದಾಕಾಲವೂ ಗ್ರಾಮಸ್ಥರಿಗೆ ಸ್ಪಂದಿಸಲು ಸಿದ್ದವಿದೆ ಎಂದರು.

ಶಿಬಿರದಲ್ಲಿ ಜನರಲ್ ಮೆಡಿಸಿನ್, ಶಸ್ತ್ರಚಿಕಿತ್ಸೆ ವಿಭಾಗ, ಹೆರಿಗೆ ಮತ್ತು ಸ್ತ್ರೀ ರೋಗ ವಿಭಾಗ, ಎಲುಬು ಮತ್ತು ಕೀಲುರೋಗ, ಕಿವಿ, ಮೂಗು, ಗಂಟಲು, ಮನೋ ಚಿಕಿತ್ಸೆ ಮತ್ತು ಫಿಜಿಯೋತೆರಪಿ, ಮಕ್ಕಳ ವಿಭಾಗ, ನೇತ್ರ ಚಿಕಿತ್ಸೆ, ಚರ್ಮ ರೋಗ, ಶ್ವಾಸಕೋಶ ವಿಭಾಗ, ಸಮುದಾಯ ಔಷಧ ವಿಭಾಗದ ತಜ್ಞ ವೈದ್ಯರು ಆರೋಗ್ಯ ತಪಾಸಣೆ ನಡೆಸಿ ಔಷಧಿ ವಿತರಿಸಿದರು.

ಉಪವಲಯ ಅರಣ್ಯ ಅಧಿಕಾರಿ ಎಂ.ಯು ಮೀನಾಕ್ಷಿ ಸ್ವಾಗತಿಸಿ, ಸೀಮಾ ಪ್ರಾರ್ಥನೆ ಸಲ್ಲಿಸಿದರು. ಉಪವಲಯ ಅರಣ್ಯ ಅಧಿಕಾರಿ ಸಿದ್ದಲಿಂಗಪ್ಪ ಕಾರ್ಯಕ್ರಮ ನಿರೂಪಿಸಿ, ಭಾಗಮಂಡಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುನಿಲ್ ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಆರೋಗ್ಯ ಶಿಬಿರದಲ್ಲಿ 200 ಕ್ಕೂ ಅಧಿಕ ಗ್ರಾಮಸ್ಥರು ಪಾಲ್ಗೊಂಡು ಶಿಬಿರದ ಸದುಪಯೋಗಪಡೆದುಕೊಂಡರು.