ಸೋಮವಾರಪೇಟೆ, ಏ. 5: ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆ ಗಣಗೂರು ಗ್ರಾ.ಪಂ. ವ್ಯಾಪ್ತಿಯ ಪರಿಶಿಷ್ಟ ಜಾತಿ ಹಾಗೂ ಪಂಗಡದ ಕಾಲೋನಿಗಳ ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಮುಂದಾಗಿದ್ದು, ಗ್ರಾಮದಲ್ಲಿ ಕಸ ತುಂಬಿ ಮುಚ್ಚಿಹೋಗಿದ್ದ ಮೋರಿ ಹಾಗು ಚರಂಡಿಗಳು ಕಸದಿಂದ ಮುಕ್ತಗೊಂಡಿವೆ.
ತಾಲೂಕಿನ ಗಣಗೂರು ಗ್ರಾಮ ಪಂಚಾಯಿತಿಗೆ ಒಳಪಡುವ ಎಸ್.ಸಿ-ಎಸ್.ಟಿ. ಕಾಲೋನಿಗಳಲ್ಲಿ ಚರಂಡಿಗಳು ನಿರ್ಮಾಣಗೊಂಡು 15 ವರ್ಷ ಕಳೆದಿದ್ದು, ಇಲ್ಲಿಯವರೆಗೂ ಚರಂಡಿಯ ಸ್ವಚ್ಛತೆ ಹಾಗೂ ಹೂಳೆತ್ತುವ ಕಾರ್ಯಕ್ಕೆ ಪಂಚಾಯಿತಿ ಮುಂದಾಗಿರಲಿಲ್ಲ. ಚರಂಡಿಗಳಲ್ಲಿ ಕಸ, ಕಡ್ಡಿ, ಮಣ್ಣು ತುಂಬಿಕೊಂಡಿದ್ದು, ಇದರಿಂದ ಮಳೆಗಾಲದಲ್ಲಿ ಚರಂಡಿಯಲ್ಲಿ ಹರಿಯಬೇಕಿದ್ದ ನೀರು ಮನೆಯಂಗಳಕ್ಕೆ ಹರಿದು ಸೊಳ್ಳೆಗಳ ಕಾಟದಿಂದ ಜನ ಕಾಯಿಲೆ ಗೊಳಗಾಗುತ್ತಿದ್ದರು.
ಗ್ರಾಮಸ್ಥರು ಪಂಚಾಯಿತಿಯ ಪಿಡಿಓ ಚಂದ್ರಶೇಖರ್ ಹಾಗೂ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಅವರಿಗೆ ಅಲ್ಲಿನ ಪರಿಸ್ಥಿತಿ ಬಗ್ಗೆ ತಿಳಿಸಿದ್ದು, ಗ್ರಾಮ ಪಂಚಾಯಿತಿಯಲ್ಲಿರುವ ಎಸ್ಸಿ-ಎಸ್ಟಿ ಅನುದಾನ ಬಳಕೆ ಮಾಡಿ ಕಾಲೋನಿಯ ಸ್ವಚ್ಛತಾ ಕಾರ್ಯ ಮಾಡುವಂತೆ ಅಧಿಕಾರಿಗಳು ಸೂಚಿಸಿದ್ದರು. ಅದರಂತೆ ಗಣಗೂರು ಗ್ರಾಮ ಪಂಚಾಯಿತಿಗೆ ಒಳಪಡುವ ಕಾಲೋನಿಯ ಪೂರ್ಣ ಸ್ವಚ್ಛತಾ ಕಾರ್ಯಕ್ರಮಕ್ಕೆ ಪಂಚಾಯಿತಿ ಮುಂದಾಗಿದ್ದು, ಇದೀಗ ಚರಂಡಿ ಹಾಗೂ ಮೋರಿಗಳನ್ನು ಸ್ವಚ್ಛಗೊಳಿಸಲಾಗಿದೆ.