ಕಣಿವೆ, ಏ. 5: ಯುಗಾದಿ ಪೂರ್ವದಲ್ಲಿ ಹಾಗೂ ನಂತರದಲ್ಲಿ ಉತ್ತಮವಾದ ಹದ ಮಳೆ ಸುರಿದ ಕಾರಣ ಅನ್ನದಾತರು ಸಂತಸಗೊಂಡಿದ್ದಾರೆ.

ಕುಶಾಲನಗರ ತಾಲೂಕು ವ್ಯಾಪ್ತಿಯ ಬಹುತೇಕ ಕಡೆಗಳಲ್ಲಿ ಮಳೆ ಉತ್ತಮವಾಗಿ ಸುರಿದ ಪರಿಣಾಮ ಭೂಮಿಯ ಉಳುಮೆ ಕಾರ್ಯ ಭರದಿಂದ ಸಾಗಿದೆ. ಹಾಗೆಯೇ, ಉಳುಮೆಯೊಂದಿಗೆ ಜೋಳ ಬಿತ್ತನೆ, ದ್ವಿದಳ ಧಾನ್ಯಗಳ ಬಿತ್ತನೆಯೂ ಅನುಚಾನವಾಗಿ ಸಾಗಿದೆ.

ಈಗಾಗಲೇ ಬಿತ್ತನೆ ಮಾಡಿದ್ದ ಜೋಳದ ಗಿಡಗಳು ಬೆಳೆದ ಪರಿಣಾಮ ಹಸಿರು ಗಿಡಗಳ ಖಾಂಡಗಳಿಗೆ ಬಾಧಿಸುವ ಕೀಟಗಳ ಹತೋಟಿಗೆ ರೈತರಿಂದ ರಸಾಯನಿಕ ಸಿಂಪಡಣೆ ಕಾರ್ಯವೂ ಸಾಗಿದೆ.

ಯುಗಾದಿಯ ಮೂರು ದಿನ ಮೊದಲು ಹಾಗೂ ಯುಗಾದಿಯ ನಂತರದ ದಿನಗಳಲ್ಲಿ ಉತ್ತಮವಾಗಿ ಮಳೆ ಸುರಿದ ಪರಿಣಾಮ ಭೂಮಿಯ ತಾಪಮಾನ ಒಂದಷ್ಟು ನಿಯಂತ್ರಣಕ್ಕೆ ಬಂದಿದೆ.

ಇನ್ನೊಂದೆಡೆ ಬೇಸಗೆಯ ಬಿಸಿಲ ಬವಣೆಗೆ ಸಿಲುಕಿ ಕಾವೇರಿ ನದಿಯಲ್ಲಿ ನೀರಿನ ಹರಿವು ಕ್ಷೀಣಿಸಿತ್ತಾದರೂ ಮಳೆಯಿಂದಾಗಿ ನದಿಯಲ್ಲಿಯೂ ನೀರಿನ ಹರಿವು ಕಾಣುತ್ತಿದೆ.

ಈಗಾಗಲೇ ಶುಂಠಿ ಬಿತ್ತನೆಗೈದ ಕೃಷಿಕರಿಗೂ ಯುಗಾದಿ ಸಮಯದ ಮಳೆ ಅತ್ಯುಪಯುಕ್ತವಾಗಿದೆ. ಮಳೆ ಬಂದ ಸಂದರ್ಭಗಳಲ್ಲಿ ಕೊಳವೆ ಬಾವಿಗಳು ವಿಶ್ರಾಂತಿಗೂ ತೆರಳುತ್ತಿದ್ದು ಅಂತರ್ಜಲದ ಮಟ್ಟವೂ ಯಥಾಸ್ಥಿತಿ ಕಾಯ್ದುಕೊಂಡಿದೆ. ಒಟ್ಟಾರೆ ಈ ಬಾರಿಯ ಯುಗಾದಿ ಸಂವತ್ಸರ ಕೃಷಿಕರ ಪಾಲಿಗೆ ಸಂತಸ ತಂದಿದೆ.