ನಾಪೋಕ್ಲು, ಏ. 5: ಕೊಡವ ಕುಟುಂಬಗಳ ನಡುವಿನ ಗಿನ್ನಿಸ್ ಬುಕ್ ಆಫ್ ರೆಕಾಡ್ರ್ಸ್ ಖ್ಯಾತಿಯ ಕೌಟುಂಬಿಕ ಹಾಕಿ ಉತ್ಸವ ಭಾನುವಾರದಿಂದ ಶುಭಾರಂಭಗೊಂಡಿದೆ. ನಾಲ್ಕುನಾಡು ವ್ಯಾಪ್ತಿಯ ನಾಪೋಕ್ಲುವಿನಲ್ಲಿ 26ನೆಯ ವರ್ಷದ ಹಾಕಿ ಉತ್ಸವಕ್ಕೆ ಚಾಲನೆ ದೊರಕಿದ್ದು, ಜಿಲ್ಲೆಯಲ್ಲಿ ಹಾಕಿ ಕಲರವ ಕಂಡುಬರುತ್ತಿದೆ.
26ನೆಯ ವರ್ಷದ ಕೌಟುಂಬಿಕ ಹಾಕಿ ನಮ್ಮೆಯನ್ನು ಕೋಕೇರಿ ಮೂಲದ ಚೇನಂಡ ಕುಟುಂಬಸ್ಥರು ಆಯೋಜಿಸಿದ್ದಾರೆ. ನಾಪೋಕ್ಲುವಿನಲ್ಲಿ ಕೌಟುಂಬಿಕ ಹಾಕಿ ಆರನೆಯ ಬಾರಿಗೆ ನಡೆಯುತ್ತಿದ್ದು, ಚೇನಂಡ ಕಪ್ ಹಾಕಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಒಂದಷ್ಟು ಸರಳತೆಯ ನಡುವೆ ಉದ್ಘಾಟನೆಗೊಂಡಿತು. ಹಾಕಿ ಅಭಿಮಾನಿಗಳ ಉತ್ಸಾಹ, ಕುಟುಂಬವಾರು ಸ್ಪರ್ಧೆಯ ಏಳು-ಬೀಳುಗಳ ಹೋರಾಟ ಮುಂದಿನ ಒಂದು ತಿಂಗಳ ಕಾಲ ಹಾಕಿ ಪ್ರೇಮಿಗಳಿಗೆ ರಸದೌತಣ ನೀಡಲಿದೆ.
ಭಾನುವಾರ ಬೆಳಿಗ್ಗೆ ನಾಪೋಕ್ಲುವಿನ ಪೊನ್ನಾಡ್ ಬಳಿಯಿಂದ ಸಾಂಸ್ಕøತಿಕ ಮೆರವಣಿಗೆ ಮುಖ್ಯರಸ್ತೆಯಲ್ಲಿ ಸಾಗಿ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸಮಾಪನಗೊಂಡಿತು.
ಒಡ್ಡೋಲಗ, ದುಡಿಕೊಟ್ಟ್ಪಾಟ್, ತಳಿಯ ತಕ್ಕಿ ಬೊಳಕ್ ಸಹಿತವಾಗಿ ಸಮವಸ್ತ್ರಧಾರಿಗಳಾಗಿದ್ದ ಚೇನಂಡ ಕುಟುಂಬಸ್ಥರು, ತವರುಮನೆ ಹುಡುಗಿಯರು, ಕೊಡವ ಹಾಕಿ ಅಕಾಡೆಮಿ ಪ್ರಮುಖರು, ಈ ಹಿಂದಿನ ವರ್ಷಗಳ ಆಯೋಜಕರು, ಕೋಕೇರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಮೆರವಣಿಗೆಯಲ್ಲಿ ಹೆಜ್ಜೆಹಾಕಿದರು.
ಮೈದಾನದ ಆವರಣ ಪ್ರವೇಶಿಸಿದ ಬಳಿಕ ಮೈದಾನದ ಸುತ್ತಲೂ ಪ್ರದಕ್ಷಿಣೆ ಬರಲಾಯಿತು. ಚೇನಂಡ ಕುಟುಂಬದ ಧ್ವಜಾರೋಹಣ, ಕೊಡವ ಹಾಕಿ ಅಕಾಡೆಮಿ ಧ್ವಜಾರೋಹಣ, ಹಿಂದಿನ ವರ್ಷಗಳ ಆಯೋಜಕ ಕುಟುಂಬಗಳಿಗೆ ಗೌರವ ಸೂಚಕವಾಗಿ ಆಗಸಕ್ಕೆ ಗುಂಡು ಹಾರಿಸಲಾಯಿತು. ಕುಪ್ಯಚೇಲೆಯೊಂದಿಗೆ ಪುರುಷರು, ಏಕವರ್ಣದ ಸೀರೆಯಲ್ಲಿ ವಸ್ತ್ರಧಾರಿಗಳಾಗಿದ್ದ ಮಹಿಳೆಯರು, ತವರುಮನೆ ಹುಡುಗಿಯರು ಪಾಲ್ಗೊಂಡಿದ್ದರು. ಮೈದಾನದ ಎದುರು ಹಾಕಿ ಉತ್ಸವದ ಜನಕ ಪಾಡಂಡ ಕುಟ್ಟಪ್ಪ ಅವರ ಪುತ್ಥಳಿಯನ್ನು ನಿರ್ಮಿಸಲಾಗಿದ್ದು, ಇದಕ್ಕೆ ಪ್ರಮುಖರು ಮಾಲಾರ್ಪಣೆ ಮೂಲಕ ಗೌರವಾರ್ಪಣೆ ಮಾಡಿದರು.
ಪ್ರದರ್ಶನ ಪಂದ್ಯ
ಉದ್ಘಾಟನಾ ಸಮಾರಂಭದ ಅಂಗವಾಗಿ ಎರಡು ಪ್ರದರ್ಶನ ಪಂದ್ಯಗಳನ್ನು ಏರ್ಪಡಿಸಲಾಗಿತ್ತು. ಪ್ರಥಮ ಪಂದ್ಯ ಟೀಂ ಯುಎಇ ಹಾಗೂ ತಾಮನೆ ಘಿಟ ತಂಡಗಳ ನಡುವೆ ನಡೆಯಿತು. ಇದರಲ್ಲಿ ಟೀಂ ಯುಎಇ 4-1 ಗೋಲಿನ ಅಂತರದಿಂದ ಜಯಗಳಿಸಿತು.
ಮತ್ತೊಂದು ಪಂದ್ಯ ಎಂಇಜಿ ಬಾಯ್ಸ್ ಹಾಗೂ ಜೈನ್ ವಿವಿ ತಂಡದ ನಡುವೆ ಜರುಗಿತು. ಇದರಲ್ಲಿ ಎಂಇಜಿ ಬಾಯ್ಸ್ ಏಕೈಕ ಗೋಲಿನ ಜಯ ದಾಖಲಿಸಿತು. ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ. ಬೋಪಣ್ಣ ಅವರು ಬೆಳ್ಳಿಯ ಸ್ಟಿಕ್ನಿಂದ ಬೆಳ್ಳಿಯ ಚೆಂಡನ್ನು ತಳ್ಳುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.
ಶಾಸಕರಾದ ಎ.ಎಸ್. ಪೊನ್ನಣ್ಣ, ಸುಜಾ ಕುಶಾಲಪ್ಪ ಸೇರಿದಂತೆ ಚೇನಂಡ ಕುಟುಂಬದ ಪ್ರಮುಖರು, ಹಾಕಿ ಅಕಾಡೆಮಿ ಪದಾಧಿಕಾರಿಗಳು ಹಾಜರಿದ್ದರು. ಅಪರಾಹ್ನದ ನಂತರ ಅಧಿಕೃತ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.