ವೀರಾಜಪೇಟೆ, ಏ. 5: ವೀರಾಜಪೇಟೆಯ ಅರಸುನಗರದ ಶ್ರೀ ಮತ್ತಪ್ಪ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ತೆರೆ ಮಹೋತ್ಸವ ಮತ್ತು ತಾಲಪ್ಪೊಲಿ ಮೆರವಣಿಗೆÉ ಶ್ರದ್ಧಭಕ್ತಿ ಹಾಗೂ ವಿಜೃಂಭಣೆಯಿಂದ ಅಚರಿಸಲಾಯಿತು
ಮಾ.26 ರಂದು ಬೆಳಿಗ್ಗೆ ದೇವಸ್ಥಾನದ ಕಳಸ ಪ್ರತಿಷ್ಠೆ, ಕೇರಳದ ಪ್ರಸಿದ್ಧ ತಂತ್ರಿ ಬ್ರಹ್ಮಶ್ರೀ ಶ್ರೀಕುಮಾರ್ ಅವರಿಂದ ಪುನರ್ ಪ್ರತಿಷ್ಠಾಪನಾ ಪೂಜಾ ಕಾರ್ಯಗಳೊಂದಿಗೆ ಪ್ರರಂಭಗೊಂಡು, 27 ರಂದು ಮುಂಜಾನೆ ಗಣಪತಿ ಹೋಮ, ನಂತರ ಕಳಸ ಪೂಜೆ, ಶ್ರೀ ಮುತ್ತಪ್ಪ ಹಾಗೂ ತಿರುವಪ್ಪನ್ ಮತ್ತು ಗುಳಿಗನ್ ದೇವರ ಪ್ರತಿಷ್ಠಾಪನೆ ಬಳಿಕ, ಕಳಶಾಭಿಷೇಕ, ಮಹಾಪೂಜೆ ನಡೆಯಿತು.
ನಂತರ ದೇವಸ್ಥಾನ ಆವರಣದಲ್ಲಿ ಏರ್ಪಡಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಎಸ್ ಸದಾನಂದ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಅತಿಥಿಗಳಾಗಿ ಕೇರಳದ ಚೆಂಗಳಾಯಿ ಪಣೆಕರ್ ಇ.ಕೆ ಬಾಲನ್, ಕೇರಳದ ತಂತ್ರಿ ಬ್ರಹ್ಮ ಶ್ರೀಕುಮಾರ್, ಸ್ಥಳೀಯ ಜ್ಯೋತಿಷ್ಯರಾದ ದಿವಾಕರ್ ಭಟ್, ಪುರಸಭೆಯ ಮಾಜಿ ಸದಸ್ಯ ಪಟ್ಟಡ ರಂಜಿ ಪೂಣಚ್ಚ, ಬಿ.ಕೆ.ಚಂದ್ರು, ಮೀನುಪೇಟೆ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಜಿ ಸುಮೇಶ್, ಬಾಲನ್, ನಗರ ಬಿಜೆಪಿ ಅಧ್ಯಕ್ಷ ಅಂಜಪರವಂಡ ಅನಿಲ್ ಮಂದಣ್ಣ, ಉದ್ಯಮಿ ಬಿ.ವಿ ಹೇಮಂತ್ ಅವರುಗಳು ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಎಂ.ಎಂ ಶಶಿಧರನ್ ಸ್ವಾಗತಿಸಿ ನಿರೂಪಿಸಿದರು. ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಮಾ.28ರ ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮದ ಬಳಿಕ ಶ್ರೀ ಮುತ್ತಪ್ಪನ ಮಲೆಯಿಳಿಸುವುದು ಹಾಗೂ ವೆಳ್ಳಾಟಂ, ಸಂಜೆ 6 ಗಂಟೆಗೆ ಕಳಸದೊಂದಿಗೆ ಪುಟ್ಟ ಮಕ್ಕಳು, ಮಹಿಳೆಯರು ದೀಪ ಹಿಡಿದು, ತಾಲಪ್ಪೊಲಿ ಮೆರವಣಿಗೆಯು ತೆಲುಗರ ಬೀದಿಯ ಶ್ರೀ ಮಾರಿಯಮ್ಮ ದೇವಸ್ಥಾನದಿಂದ ಮೆರವಣಿಗೆ ಹೊರಟು ಜೈನರ ಬೀದಿ, ದೊಡ್ಡಟ್ಟಿ ಚೌಕಿಗಾಗಿ ಚರ್ಚ್ ರಸ್ತೆ ಮಾರ್ಗವಾಗಿ ಅರಸುನಗರ ಮುತ್ತಪ್ಪ ದೇವಸ್ಥಾನ ತಲುಪಿದ ಬಳಿಕ ಶ್ರೀ ಮತ್ತಪ್ಪ ಹಾಗೂ ತಿರುವಪ್ಪನ್ ವೆಳ್ಳಾಟಂ ನಂತರ ಅನ್ನಸಂತರ್ಪಣೆ ನಡೆಯಿತು.
ಬಳಿಕ ರಾತ್ರಿ ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು, ಮಾ.29 ರಂದು ಪ್ರಾತಃಕಾಲ ಸಿಡಿಮದ್ದು ಪ್ರದರ್ಶನ, ಗುಳಿಗನ್ ವೆಳ್ಳಾಟಂ, ಮುತ್ತಪ್ಪನ ಮತ್ತು ತಿರುವಪ್ಪನ್ ಕೋಲ ವಿಜೃಂಭಣೆಯಿಂದ ಆಚರಿಸಲಾಯಿತು.