ಕುಶಾಲನಗರ, ಏ. 4: ಜನಗಣತಿ ಕಾರ್ಯವು ರಾಷ್ಟ್ರೀಯ ಕಾರ್ಯಕ್ರಮ ವಾಗಿದ್ದು, ಕಾನೂನು ಬದ್ಧ ಕರ್ತವ್ಯವಾಗಿದೆ. ಶಿಕ್ಷಕರು ಉತ್ತಮ ಕೆಲಸದ ಮೂಲಕ ಜನಗಣತಿ ಕಾರ್ಯವನ್ನು ಯಶಸ್ವಿಯಾಗಿಸಬೇಕು ಎಂದು ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಹೇಳಿದರು. ಕುಶಾಲನಗರ ಪಟ್ಟಣದ ಕನ್ನಡ ಭಾರತಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕಂದಾಯ ಇಲಾಖೆಯ ವತಿಯಿಂದ ಗಣತಿ ಕಾರ್ಯಕ್ಕೆ ನಿಯೋಜನೆಗೊಂಡಿರುವ ಮೇಲ್ವಿಚಾರಕರು ಹಾಗೂ ಗಣತಿದಾರರಿಗೆ ಮೂರು ದಿನಗಳ ಕಾಲ ಮನೆ ಪಟ್ಟಿ ಹಾಗೂ ಜನಗಣತಿ ಕಾರ್ಯದ ಕುರಿತು ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನಗಣತಿ ಕಾರ್ಯವನ್ನು ಶಿಕ್ಷಕರು ಜವಬ್ದಾರಿಯಿಂದ ನಿರ್ವಹಿಸುವ ವಿಶ್ವಾಸವಿದೆ. ಕುಶಾಲನಗರ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ 164 ಬ್ಲಾಕ್‍ಗಳನ್ನು ಗುರುತಿಸಿದ್ದು, 30 ಮಂದಿ ಮೇಲ್ವಿಚಾರಕರು ಹಾಗೂ 174 ಗಣತಿದಾರರು ಗಣತಿ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಮಾಹಿತಿ ಒದಗಿಸಿದರು. ರಾಷ್ಟ್ರೀಯ ಜನಗಣತಿ ಕಾರ್ಯಕ್ಕೆ ನೇಮಕಗೊಂಡಿರುವ ಗಣತಿದಾರರು ಮೊದಲ ಹಂತದ ಮನೆ ಪಟ್ಟಿ ಕಾರ್ಯದಲ್ಲಿ ನಿಗದಿಪಡಿಸುವ ಪ್ರದೇಶಗಳ ನಕ್ಷೆಯನ್ನು ಸಮರ್ಪಕವಾಗಿ ತಯಾರಿಸಿಕೊಂಡರೆ ಜನಗಣತಿ ಕಾರ್ಯ ಸುಲಭವಾಗುತ್ತದೆ ಎಂದು ಕಿರಣ್ ಗೌರಯ್ಯ ಹೇಳಿದರು. ರಾಷ್ಟ್ರೀಯ ಜನಗಣತಿಯ ಮೊದಲ ಭಾಗವಾಗಿ ಮನೆ ಮನೆಗಳ ಪಟ್ಟಿ ಸರ್ವೆ ಕಾರ್ಯ ಏಪ್ರಿಲ್ 16 ರಿಂದ ಪ್ರಾರಂಭಗೊಂಡು ಮೇ 15ಕ್ಕೆ ಮುಕ್ತಾಯಗೊಳ್ಳಲಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಜನಗಣತಿ ಕಾರ್ಯವನ್ನು ಸುಲಭಗೊಳಿಸಲು ಆನ್‍ಲೈನ್ ಅಪ್ಲಿಕೇಶನ್ ವ್ಯವಸ್ಥೆ ಮಾಡಲಾಗಿದೆ. ಗಣತಿದಾರರು ಮನೆ ಮನೆಗೆ ಭೇಟಿ ನೀಡುವ ಸಮಯದಲ್ಲಿ 33 ಪ್ರಶ್ನೆಗಳಿಗೆ ಸರಿಯಾದ ಉತ್ತರ ಪಡೆಯಬೇಕು. ಉತ್ತರ ನೀಡಲು ಕೆಲವು ಮಂದಿ ನಿರಾಕರಿಸಿದರೆ ಅವರೊಂದಿಗೆ ಸಂಯಮದಿಂದ ಮಾತನಾಡಿ ಗಣತಿಯ ಮಹತ್ವವನ್ನು ಅವರಿಗೆ ಅರ್ಥ ಮಾಡಿಸಿ ಮಾಹಿತಿ ಪಡೆಯುವಂತೆ ತಹಶೀಲ್ದಾರ್ ಸಲಹೆ ನೀಡಿದರು. ಗಣತಿ ಕಾರ್ಯದಲ್ಲಿ ಗಣತಿದಾರರಿಗೆ ಏನೇ ಸಮಸ್ಯೆ ಎದುರಾದರೂ ತಕ್ಷಣವೇ ಮೇಲ್ವಿಚಾರಕರು ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿದರೆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು. ತರಬೇತಿ ಕಾರ್ಯಾಗಾರದಲ್ಲಿ ಉಪ ತಹಶೀಲ್ದಾರ್ ಎಂ.ಪಿ. ಪ್ರೀತು, ಕಂದಾಯ ನಿರೀಕ್ಷಕ ಹೆಚ್.ಎಸ್. ಸಂತೋμï, ಕಂದಾಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು/ಸಿಬ್ಬಂದಿ ಇದ್ದರು. ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಎಸ್.ಪಿ. ಪರಮೇಶ್, ಎಸ್.ಎನ್. ಲೋಕೇಶ್, ಕೆ. ಶಾಂತಕುಮಾರ್, ಪಿ.ಎಸ್. ರವಿಕೃಷ್ಣ, ಮನೆ ಸಮೀಕ್ಷೆ ಹಾಗೂ ಜನಗಣತಿ ಸಮೀಕ್ಷಾ ಕಾರ್ಯ ನಡೆಸುವ ಕುರಿತು ಪಿ.ಪಿ.ಟಿ. ಮೂಲಕ ಪೂರಕ ಮಾಹಿತಿ ನೀಡಿದರು. ತರಬೇತಿ ಕಾರ್ಯಕ್ರಮದಲ್ಲಿ ಜನಗಣತಿ ಕಾರ್ಯದ ವಿಧಾನಗಳು, ಅಪ್ಲಿಕೇಶನ್ ಬಳಕೆ, ಮಾಹಿತಿ ಸಂಗ್ರಹಣೆಯ ನಿಯಮಗಳು ಹಾಗೂ ಜನರೊಂದಿಗೆ ಸಂವಹನ ಮಾಡುವ ವಿಧಾನಗಳ ಕುರಿತು ವಿವರವಾಗಿ ತಿಳಿಸಲಾಯಿತು. ಜನಗಣತಿಗೆ ಪೂರಕವಾಗಿ ಮೊದಲ ಹಂತದ ಮನೆ ಪಟ್ಟಿ ಕಾರ್ಯಾಚರಣೆ ಮಾಡುವ ಬಗ್ಗೆ ವಿವರ ಮಾಹಿತಿ ನೀಡಲಾಯಿತು.