ವೀರಾಜಪೇಟೆ, ಏ. 3; ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ. ಮುಂದೆ ಈ ಭರತ ಭೂಮಿ ರಾಮ ರಾಜ್ಯವಾಗಬೇಕಿರುವುದರಿಂದ ಹಿಂದೂಗಳ ಶಕ್ತಿಯನ್ನು ಪುನಶ್ಚೇತನಗೊಳಿಸಬೇಕಿದೆ ಎಂದು ಬಸವಪಟ್ಟಣ ತೋಟಂದಾರ್ಯ ಮಠದ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ವೀರಾಜಪೇಟೆಯ ಹನುಮ ಜಯಂತಿ ಆಯೋಜನಾ ಸಮಿತಿ ವತಿಯಿಂದ ಹನುಮ ಜಯಂತಿ ಪ್ರಯುಕ್ತ ತಾಲೂಕು ಮೈದಾನದಲ್ಲಿ ನಡೆದ ಬೃಹತ್ ಶೋಭಾಯಾತ್ರೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಭಾರತ ಮಾತೆ ಹಾಗೂ ಹನುಮನಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಸ್ವಾಮೀಜಿ, ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿದ ಶ್ರೀ ಹನುಮಾನ್ ಅವರ ಜನ್ಮ ದಿನಾಚರಣೆಯು ಭಾರತೀಯ ಸನಾತನ ಸಂಸ್ಕೃತಿಯ ಅತ್ಯಂತ ಪವಿತ್ರ ಮತ್ತು ಆಧ್ಯಾತ್ಮಿಕವಾಗಿ ಜಾಗೃತಗೊಂಡ ಹಬ್ಬವಾಗಿದೆ. ವಿಶ್ವಕ್ಕೆ ಹಿಂದುತ್ವದ ಸಂದೇಶ ಸಾರಿದ ರಾಷ್ಟ್ರ ಭಾರತ. ಸನಾತನ ಧರ್ಮ ಉಳಿದರೆ ಭಾರತ ಉಳಿಯುತ್ತದೆ ಎಂದು ಪ್ರತಿಯೊಬ್ಬರೂ ಅರಿಯಬೇಕು. ಸನಾತನ ಧರ್ಮ ಜಾಗೃತಿ ಮೂಡಿಸುವಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರಮುಖ ಪಾತ್ರವಹಿಸಿದೆ. ಸಂಘದ ಶತಮಾನೋತ್ಸವ ಹಿನ್ನೆಲೆಯಲ್ಲಿ ದೇಶಾದ್ಯಂತ ಹಿಂದೂ ಸಂಗಮಗಳನ್ನು ನಡೆಸಲಾಗಿದ್ದು, ಹಿಂದೂಗಳು ಸಂಘಟಿತರಾಗಿ ಜಾಗೃತರಾಗಬೇಕೆಂದು ಕರೆ ನೀಡಿದರು.
ಈ ದಿನ ಪೂಜೆಗೆ ಮಾತ್ರವಲ್ಲ, ಆತ್ಮಾವಲೋಕನಕ್ಕೂ ಒಂದು ಅವಕಾಶ. ಹನುಮಂತ ತನ್ನ ಜೀವನದುದ್ದಕ್ಕೂ ಮಾಡಿದಂತೆ ನಾವು ನಮ್ಮ ಆಂತರಿಕ ಅಹಂ, ಸೋಮಾರಿತನ ಮತ್ತು ಭಯವನ್ನು ತ್ಯಜಿಸಿ ಭಗವಾನ್ ಶ್ರೀ ರಾಮನ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಹನುಮನ ಜೀವನವು ಅವನ ಕಾರ್ಯಗಳ ಕಥೆ ಮಾತ್ರವಲ್ಲ, ಅದು ಪ್ರತಿ ಯುಗಕ್ಕೂ ಪ್ರಸ್ತುತವಾದ ಕಠಿಣತೆ, ಸಮರ್ಪಣೆ ಮತ್ತು ದೃಢಸಂಕಲ್ಪ. ಹನುಮ ಕೇವಲ ರಾಮನ ಸೇವಕನಲ್ಲ, ಧರ್ಮ ರಕ್ಷಕ. ಲಂಕಾವನ್ನು ಸುಡಬೇಕಾದಾಗ ಅವರು ಬೆಂಕಿಯಾದರು; ಸಂಜೀವಿನಿಯನ್ನು ತರಬೇಕಾದಾಗ ಅವರು ಪರ್ವತವನ್ನು ಎತ್ತಿದರು. ಅಂತಹ ಸಮಗ್ರ, ಸಮರ್ಪಿತ ಮತ್ತು ಸೂಕ್ಷ್ಮ ವ್ಯಕ್ತಿತ್ವ ಬೇರೆಡೆ ಅಪರೂಪ. ಸೇವೆ, ನಿಷ್ಠೆ ಮತ್ತು ತ್ಯಾಗ ಅಪರೂಪವಾಗಿರುವ ಇಂದಿನ ಯುಗದಲ್ಲಿ, ಧರ್ಮ ಮತ್ತು ಭಕ್ತಿಯ ಅಡಿಯಲ್ಲಿದ್ದಾಗ ಮಾತ್ರ ಶಕ್ತಿಯನ್ನು ಸರಿಯಾಗಿ ಬಳಸಲಾಗುತ್ತದೆ ಎಂದು ಹನುಮಂತನ ಜೀವನವು ನಮಗೆ ನೆನಪಿಸುತ್ತದೆ. ಅವರ ಜೀವನದ ಪ್ರತಿ ನೋಟ, ಪ್ರತಿಯೊಂದು ಕಥೆ, ಪ್ರತಿಯೊಂದು ನೆನಪು ನಮಗೆ ಇದನ್ನು ಕಲಿಸುತ್ತದೆ ಎಂದರು.
ಆಚರಣೆಗಳು ನಮ್ಮ ಸಂಸ್ಕೃತಿಗೆ ಜೀವಾಳ; ಪ್ರತೀ ಆಚರಣೆಗಳಲ್ಲಿಯೂ ವೈಜ್ಞಾನಿಕತೆ ಅಡಗಿದೆ. ಅದನ್ನು ಅರಿಯುವ ಜಾಣ್ಮೆ 4ಐದನೇ ಪುಟಕ್ಕೆ
(ಮೊದಲ ಪುಟದಿಂದ) ನಮ್ಮದಾಗಬೇಕು. ಇಂತಹ ಉತ್ಸವಗಳನ್ನು ಮಾಡುವುದರಿಂದ ಮಾನಸಿಕ ನೆಮ್ಮದಿ ಸಿಗುವ ಜತೆಗೆ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣಗೊಂಡು ಸಮಾಜ ವಿರೋಧಿ ಚಟುವಟಿಕೆಗಳು ಕಡಿಮೆಯಾಗುತ್ತವೆ. ಜೊತೆಗೆ ನಮ್ಮ ಹಿಂದೂ ಬಾಂಧವರು ದುಶ್ಟಟಗಳಿಂದ ದೂರವಿರಬೇಕು ಎಂದು ಕಿವಿಮಾತನ್ನು ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಹಾಗೂ ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‍ವೆಲ್ ದಿಕ್ಸೂಚಿ ಭಾಷಣ ಮಾಡಿ ರಾಷ್ಟ್ರಿಯ ಸ್ವಯಂ ಸೇವಕ ಸಂಘ ಇರುವುದೇ ಈ ದೇಶಕ್ಕೋಸ್ಕರ, ಈ ದೇಶದ ಹಿಂದೂ ಸಮಾಜಕ್ಕೋಸ್ಕರ, ದೇಶಾದ್ಯಂತ ಹಿಂದೂಗಳು ಸೇರಿಸಿಕೊಂಡು ಹಿಂದೂ ಧರ್ಮ, ನಮ್ಮ ಸಂಸ್ಕೃತಿ, ಸಾಂಪ್ರದಾಯ, ನಮ್ಮ ನಾಗರಿಕತೆ ಪರಂಪರೆಯನ್ನು ಸ್ಮರಣೆ ಮಾಡೋಣ, ನೆನಪು ಮಾಡೋಣ. ಇವತ್ತಿನ ಯುವ ಪೀಳಿಗೆಗೆ ನಮ್ಮ ಚಿಂತನೆಯ ಬಗ್ಗೆ ಜಾಗೃತಿಯನ್ನು ಮೂಡಿಸಲಿಕೋಸ್ಕರ ಈ ರೀತಿಯ ಕಾರ್ಯಕ್ರಮವನ್ನು ಆಚರಣೆ ಮಾಡುತ್ತಿದ್ದಾರೆ ಎಂದರು. ಈಗಾಗಲೇ ಹಿಂದೂ ಸಂಗಮ, ರಾಮೋತ್ಸವ ಎಲ್ಲೆಡೆ ನಡೆದಿದೆ. ಹಿಂದುತ್ವ ಅನ್ನುವುದು ಯಾರ ವಿರೋಧಿಯೂ ಅಲ್ಲ, ಅದೊಂದು ಜೀವನ ಪದ್ಧತಿ ಎಂದು ಜಗತ್ತು ಹಾಗೂ ನಮ್ಮ ದೇಶದ ಸುಪ್ರೀಂಕೋರ್ಟ್ ಹೇಳಿದೆ. ಎಲ್ಲರೂ ಸಹಬಾಳ್ವೆಯಿಂದ ಯಾವುದೇ ಧರ್ಮಭೇದವಿಲ್ಲದೆ ಸೌಹಾರ್ದತೆಯಿಂದ ಕೂಡಿರಬೇಕು ಎಂದು ಕಲಿಸಿಕೊಟ್ಟಿದೆ. ಇವತ್ತು ಹಿಂದುತ್ವ ಅನ್ನುವುದು ಮುಸಲ್ಮಾನರ ಹಾಗೂ ಇತರ ಧರ್ಮದವರ ವಿರುದ್ಧ ಇವರಿಂದಾಗಿ ದೇಶದ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ ಎಂಬುದು ಸರಿಯಲ್ಲ. ನಾವು ಜಗತ್ತಿನಲ್ಲಿ ಶಾಂತಿ, ಸಹಬಾಳ್ವೆಯ ಸಂದೇಶವನ್ನು ಕೊಡುವವರು. ಜಗತ್ತು ಇವತ್ತು ಭಾರತವನ್ನು ನೋಡುತ್ತಿದೆ. ಜಗತ್ತಿನ ವಿಶ್ವಗುರು ಭಾರತ ಆಗಲಿದೆ, ಜಗತ್ತು ಭಾರತವನ್ನು ಒಪ್ಪಿಕೊಳ್ಳುತ್ತಿದೆ ಎಂದರಲ್ಲದೆ ಹನುಮ ಜಯಂತಿ ಯಶಸ್ವಿಯಾಗಿ ನಡೆದಿದೆ. ನಾವೆಲ್ಲರೂ ಒಂದಾಗೋಣ, ಹಿಂದೂ ಶಕ್ತಿಯನ್ನು ಪುನಶ್ಚೇತನಗೊಳಿಸೋಣ ಎಂದು ಕರೆ ನೀಡಿದರು.
ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಕೊಡಗು ಜಿಲ್ಲಾ ಸಂಘ ಚಾಲಕರಾದ ಚಕ್ಕೇರ ಮನು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹನುಮನ ಸ್ಮರಣೆಯನ್ನು ಮಾಡುತ್ತಾ, ಧರ್ಮದ ಬಗ್ಗೆ ಚಿಂತನೆ ಮಾಡುತ್ತಾ ಈ ದೇಶ ಜಗದ್ಗುರು ಆಗುವುದನ್ನು ನೋಡಬೇಕು. ಇದಕ್ಕೆ ಹನುಮನ ಜೀವನ ನಮಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.
ಹನುಮ ಜಯಂತಿ ಆಯೋಜನ ಸಮಿತಿ ಅಧ್ಯಕ್ಷ ಅಂಜಪರವಂಡ ಅನಿಲ್ ಮಂದಣ್ಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ನಮ್ಮ ದೇಶ, ನಮ್ಮ ಮಣ್ಣಿನ ರಕ್ಷಣೆಗಾಗಿ ನಾವು ಕಟಿಬದ್ದರಾಗಬೇಕು. ಸಾಮಾಜಿಕ ಸಾಮರಸ್ಯಕ್ಕೆ ಒತ್ತು ಕೊಡಬೇಕು. ಸಮಾಜದಲ್ಲಿ ಸಾಮರಸ್ಯದಿಂದ ಜೀವನ ಸಾಗಿಸುವುದರೊಂದಿಗೆ ಭವ್ಯ ಭಾರತ ನಿರ್ಮಾಣಕ್ಕೆ ಪಣತೊಡಬೇಕು ಎಂದರು.
ರವಿ ಭೂತನಕಾಡು ಅವರು ಹನುಮನ ಗೀತೆಗಳನ್ನು ಹಾಡಿ, ವಂದೇ ಮಾತರಂ ಗೀತೆಯನ್ನು ಪ್ರಸ್ತುತ ಪಡಿಸಿದರು. ನಾಟ್ಯಾಂಜಲಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳಿಂದ ಹನುಮನ ಭಜನೆಯ ನೃತ್ಯ ಪ್ರದರ್ಶನಗೊಂಡಿತು. ಆಯೋಜನಾ ಸಮಿತಿ ವತಿಯಿಂದ ಸ್ವಾಮೀಜಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಂಬಿಕಾ ಉತ್ತಪ್ಪ ಸ್ವಾಗತಿಸಿ ನಿರೂಪಿಸಿದರು. ಈ ಸಂದರ್ಭದಲ್ಲಿ ಹನುಮ ಜಯಂತಿ ಆಯೋಜನ ಸಮಿತಿ ಉಪಾಧ್ಯಕ್ಷರಾದ ಶಾನ್ ಚಂಗಪ್ಪ, ಬಿ.ವಿ. ಹೇಮಂತ್, ಸಾಮಾಜಿಕ ಜಾಲತಾಣದ ಶಿನೋಜ್ ಟಿ.ಕೆ. ಕಾರ್ಯದರ್ಶಿ ಕೂತಂಡ ಸಚಿನ್, ಜಂಟಿ ಕಾರ್ಯದರ್ಶಿ ಪ್ರದೀಪ್ ರೈ, ಸುಮೇಶ್, ಖಜಾಂಚಿ ಸುರೇಶ್ ಚಾಮಿ, ಸಹ ಖಜಾಂಚಿ ಶಶಿ ಚಾಮಿ, ಸಾಂಸ್ಕøತಿಕ ಕಾರ್ಯಕ್ರಮ ಉಸ್ತುವಾರಿ ಚೇತನ್ ಶಿವಪ್ಪ ಹಾಗೂ ವಿವೇಕ್ ರೈ, ಲಷ್ಮಿಷಾ, ಅನ್ನ ಸಂತರ್ಪಣಾ ಉಸ್ತುವಾರಿಗಳಾದ ಸುನಿಲ್, ಉಣ್ಣಿ,ಸಂತೋಷ್, ಈಶ್ವರ್, ಸಂಜು, ಸಜೀವ, ಸಮಿತಿಯ ಕಾನೂನು ಸಲಹೆಗಾರರಾದ ಪುಲಿಯಂಡ ಪೆÇನ್ನಣ್ಣ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಪ್ರಮುಖರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಹಿಂದೂ ಬಾಂಧವರು ಇದ್ದರು.
ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವೀರಾಜಪೇಟೆ ತುಂಬಾ ಖಾಕಿ ಸರ್ಪಗಾವಲು ಹಾಕಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ಹನುಮ ಜಯಂತಿ ಪ್ರಯುಕ್ತ ಅನ್ನಸಂತರ್ಪಣೆ ಮಾಡಲಾಯಿತು. ತಾಲೂಕು ಮೈದಾನ ಸಂಪೂರ್ಣ ಕೇಸರಿಮಯವಾಗಿ ಕಂಗೊಳಿಸಿತ್ತು. ಹನುಮ ಭಕ್ತರು ಶ್ರೀರಾಮ ಹಾಗೂ ಹನುಮನ ಜೈಕಾರ ಮೊಳಗಿಸಿದರು. ತೀವ್ರ ಬಿಸಿಲಿನ ನಡುವೆಯೂ ಶೋಭಾಯಾತ್ರೆಗೆ ಜನಸಾಗರವೇ ಹರಿದುಬಂದಿತ್ತು.
ವರದಿ: ಈಶಾನ್ವಿ