ಕಡಂಗ, ಏ.3: ಕಡಂಗ ಸರ್ಕಾರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಮಡಿಕೇರಿ ತಾಲೂಕು- 12ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕಡಂಗದಲ್ಲಿ ನಡೆಸುವ ಬಗ್ಗೆ ಪೂರ್ವಭಾವಿ ಸಭೆ ನಡೆಯಿತು.

ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ ಕೇಶವ ಕಾಮತ್ ಅವರು ಸಮ್ಮೇಳನ ನಡೆಸುವ ದಿನಾಂಕ ನಿಗದಿ ಹಾಗೂ ಉಪ ಸಮಿತಿಗಳ ರಚನೆ ಮಾಡುವ ಬಗ್ಗೆ ಹಾಗೂ ಉಪ ಸಮಿತಿಗಳ ಜವಾಬ್ಧಾರಿಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಮೇ.20 ರಂದು ಸಮ್ಮೇಳನವನ್ನು ಕಡಂಗ ಅರಪಟ್ಟು ಗ್ರಾಮದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಸುವುದಾಗಿ ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಯಿತು.

ಈ ಸಂದರ್ಭ ಉಪ ಸಮಿತಿಗಳಿಗೆ ಅಧ್ಯಕ್ಷರು, ಸಂಚಾಲಕರು, ಕಾರ್ಯದರ್ಶಿಗಳ ನೇಮಕ ಮಾಡಲಾಯಿತು.

ಕಡ್ಲೇರ ತುಳಸಿ ಮೋಹನ್ ಮಾತನಾಡಿ, ಪ್ರತಿಯೊಂದು ಉಪಸಮಿತಿಯಲ್ಲೂ ಕಡಂಗದ ನೆರೆಯ ಗ್ರಾಮ ಪಂಚಾಯತ್‍ಗೆ ಸಂಬಂಧಪಟ್ಟ ಗ್ರಾಮಸ್ಥರನ್ನು ಸೇರಿಸಿಕೊಂಡು ಸಮಿತಿ ರಚನೆ ಮಾಡಿದಲ್ಲಿ ಸಮ್ಮೇಳನದ ಯಶಸ್ವಿಗೆ ಅನುಕೂಲವಾಗುತ್ತದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ನಾಪೋಕ್ಲು ಹೋಬಳಿ ಅಧ್ಯಕ್ಷರಾದ ನೆರವಂಡ ಉಮೇಶ್ ಸರ್ವರನ್ನು ಸ್ವಾಗತಿಸಿ ತುಳಸಿ ಮೋಹನ್ ವಂದಿಸಿದರು. ಶಾಲಾ ಮುಖ್ಯ ಶಿಕ್ಷಕರು, ಊರಿನ ಪ್ರಮುಖರು, ಸಂಘ-ಸಂಸ್ಥೆಗಳ ಮುಖಂಡರು, ಮಹಿಳಾ ಸಮಾಜದ ಮುಖ್ಯಸ್ಥರು ಸೇರಿದಂತೆ ಇತರರು ಭಾಗವಹಿಸಿದ್ದರು