ಮಡಿಕೇರಿ, ಏ.3; ಇಲ್ಲಿನ ಶ್ರೀ ಮುತ್ತಪ್ಪನ್ ಕ್ಷೇತ್ರಂನ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಶ್ರೀ ಮುತ್ತಪ್ಪ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಸಂಜೆ ತಾಲಾಪೊಲಿ ಮೆರವಣಿಗೆ ಹಾಗೂ ವಿವಿಧ ದೈವಿಕ ಕೈಂಕರ್ಯಗಳು ನೆರವೇರಿದವು. ಕಡಗದಾಳು, ನೀರುಕೊಲ್ಲಿ, ಸಂಪಿಗೆಕಟ್ಟೆ, ಕೆಎಸ್‍ಆರ್‍ಟಿಸಿ ಡಿಪೋ ಮುಂಭಾಗ ಹಾಗೂ ಮೇಕೇರಿ ಸೇರಿದಂತೆ ನಾಲ್ಕು ದಿಕ್ಕುಗಳಿಂದ ಶ್ರೀ ಮುತ್ತಪ್ಪ ದೇವರ ಕಲಶದೊಂದಿಗೆ ಮಹಿಳೆಯರು ಮಕ್ಕಳ ತಾಲಾಪೊಲಿ ಮೆರವಣಿಗೆ ಆಗಮಿಸಿ ಗಾಂಧಿ ಮೈದಾನದಲ್ಲಿ ಸಮಾಗಮಗೊಂಡವು.

ನಂತರ ಗಾಂಧಿ ಮೈದಾನದಿಂದ ಹೊರಟು ನಗರದ ಮುಖ್ಯ ರಸ್ತೆಯಲ್ಲಿ ಕಲಾ ತಂಡ ಮತ್ತು ಚಂಡೆ ವಾದ್ಯಗಳ ಸಹಿತ ಆಕರ್ಷಕ ವಿದ್ಯುತ್ ಅಲಂಕೃತ 4ಐದನೇ ಪುಟಕ್ಕೆ

(ಮೊದಲ ಪುಟದಿಂದ) ಮಂಟಪಗಳೊಂದಿಗೆ ಮೆರವಣಿಗೆ ಮೂಲಕ ದೇವಾಲಯಕ್ಕೆ ತೆರಳಿ ಅಲ್ಲಿ ಸಮಾಪನಗೊಂಡಿತು. ಗಾಂಧಿ ಮೈದಾನದಲ್ಲಿ ನಗರಸಭಾ ಅಧ್ಯಕ್ಷೆ ಕಲಾವತಿ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭ ಸಮಾಜ ಸೇವಕ ಕೆ.ಎಂ.ಬಿ. ಗಣೇಶ್, ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಸುಧೀರ್, ಮುತ್ತಪ್ಪ ಉತ್ಸವ ಸಮಿತಿ ಅಧ್ಯಕ್ಷ ಬಿ.ಕೆ. ರವೀಂದ್ರ ರೈ, ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಕೆ.ಎಸ್. ರಮೇಶ್, ಮಹಿಳಾ ವೇದಿಕೆ ಅಧ್ಯಕ್ಷೆ ಶಾರದ ರಾಮನ್, ಪ್ರಮುಖರಾದ ಉಣ್ಣಿಕೃಷ್ಣ, ಮನು ಮಂಜುನಾಥ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ದೇವಾಲಯ ಆವರಣದಲ್ಲಿ ಮುತ್ತಪ್ಪ ದೇವರ ಮಲೆ ಇಳಿಸುವುದು, ಶ್ರೀ ಶಾಸ್ತಪ್ಪ ದೇವರ ವೆಳ್ಳಾಟಂ, ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ, ಶ್ರೀ ವಿಷ್ಣುಮೂರ್ತಿ ಮೇಲೇರಿಗೆ ಅಗ್ನಿ ಸ್ಪರ್ಶದೊಂದಿಗೆ ನೆರೆದಿದ್ದ ಸಹಸ್ರಾರು ಮಂದಿ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.